ಮುಂಬೈ: ಶಿವಸೇನಾ ಸಂಸದ ಸಂಜಯ್ ರಾವತ್ ಮೋದಿ ತಮ್ಮನ್ನು ತಾವು ಫಕೀರ ಎಂದು ಕರೆದುಕೊಳ್ಳುವುದಕ್ಕೆ ಕಟುವಾಗಿ ಟೀಕಿಸಿದ್ದಾರೆ. ಅವರು ಈ ರೀತಿ ಮೋದಿಯನ್ನು ಟೀಕಿಸಲು ಕಾರಣ ಮೋದಿ ಖರೀದಿಸಿರುವ 12 ಕೋಟಿ ಬೆಲೆಬಾಳುವ ಕಾರು. ಮೋದಿಯವರು 12 ಕೋಟಿಯ ಕಾರನ್ನು ಖರೀದಿಸಿರುವುದರಿಂದ ಇನ್ನು ಮುಂದೆ ಅವರು ತಮ್ಮನ್ನು ತಾವು ಫಕೀರ ಎಂದು ಕರೆದುಕೊಳ್ಳಬಾರದು ಎಂದು ಅವರು ಟೀಕಿಸಿದ್ದಾರೆ.
ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಸಾಪ್ತಾಹಿಕ ಅಂಕಣದಲ್ಲಿ ಈ ಕುರಿತು ಉಲ್ಲೇಖ ಮಾಡಿರುವ ರಾವುತ್, ದೇಶಿ ನಿರ್ಮಿತ ಕಾರನ್ನು ಬಳಕೆ ಮಾಡುತ್ತಿದ್ದ ದಿವಂಗತ ಪ್ರಧಾನಿ ಜವಾಹರಲಾಲ್ ನೆಹರೂ ಹಾಗು ಜೀವಬೆದರಿಕೆಯಿದ್ದ ಹೊರತಾಗಿಯೂ ತಮ್ಮ ಭದ್ರತಾ ಸಿಬ್ಬಂದಿಯನ್ನು ಬದಲಾಯಿಸದ ದಿವಂಗತ ಇಂದಿರಾಗಾಂಧಿಯವರನ್ನು ಹೊಗಳಿದ್ದಾರೆ.
ತಮ್ಮನ್ನು ತಾವು ಫಕೀರ, ಪ್ರಧಾನ ಸೇವಕ ಎಂದು ಕರೆದುಕೊಳ್ಳುವ ಮೋದಿ ವಿದೇಶಿ ನಿರ್ಮಿತ ಕಾರನ್ನು ಬಳಸುತ್ತಾರೆ ಎಂದು ರಾವುತ್ ಮೋದಿಯನ್ನು ಕಟುವಾಗಿ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಅವರ ಓಡಾಟಕ್ಕೆ ಬಿಎಂಡಬ್ಲೂ 7 ಸೀರಿಸ್ ಬದಲಿಗೆ ಮರ್ಸಿಡಿಸ್ ಬೆಂಜ್ನ ಮೆಬ್ಯಾಕ್ 650 ಗಾರ್ಡ್ ಸೆಡ್ಯಾನ್ ಕಾರನ್ನು ವಿಶೇಷ ರಕ್ಷಣಾ ಗುಂಪು ಖರೀದಿಸಿರುವುದನ್ನು ಉಲ್ಲೇಖಿಸುತ್ತ ಸಂಜಯ್ ರಾವುತ್ “ಪ್ರಧಾನಿಯವರಿಗೆ ತಮ್ಮ ಭದ್ರತೆ ಹಾಗೂ ಸೌಕರ್ಯಗಳೇ ಮುಖ್ಯವೆನಿಸಿವೆ. ಅವರ ‘ಮೇಕ್ ಇನ್ ಇಂಡಿಯಾ’ ‘ಸ್ಟಾರ್ಟ್ ಅಪ್ ಇಂಡಿಯಾ’ ದಂತಹ ಸ್ವದೇಶಿ ಉಪಕ್ರಮಗಳನ್ನು ಆರಂಭಿಸಿರುವ ಮೋದಿ, ಈಗ ಇಷ್ಟು ಬೆಲೆಬಾಳುವ ವಿದೇಶಿ ಕಾರನ್ನು ಬಳಸುತ್ತಿದ್ದಾರೆ” ಎಂದು ಮೋದಿಯನ್ನು ಟೀಕಿಸಿದ್ದಾರೆ.