Sunday, January 19, 2025

ಹೆಡ್ ಮಾಸ್ಟರ್ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು

ವಿಜಯಪುರ : ಶಾಲಾ ಮಕ್ಕಳಿಗೆ ಮತ್ತು ಸಹ ಶಿಕ್ಷಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮುಖ್ಯ ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಜಯಪುರ-ಅಥಣಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕಳೆದ ಒಂದು ವಾರದಿಂದ ಮುಖ್ಯಶಿಕ್ಷಕ ವಿದ್ಯಾರ್ಥಿಗಳಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿರುವುದು, ಹಾಗೂ ಸಹ ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದು, ಮತ್ತು ಕಳೆದ ಮೂರು ದಿನಗಳಿಂದ ಬಿಸಿಯೂಟ ತಯಾರು ಕೂಡ ಮಾಡಿಲ್ಲ ಎಂದು ವಿದ್ಯಾರ್ಥಿಗಳು ಶಿಕ್ಷಕರ ವಿರುದ್ಧ ಆರೋಪದ ಸುರಿಮಳೆಗೈದರು.‌

ಬಿಸಿ ಊಟಕ್ಕೆ ಬಂದ ಪದಾರ್ಥಗಳನ್ನು ಮನೆಗೆ ರವಾನಿಸುತ್ತಾರೆ, ಹಾಗೂ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಂತಕ್ಕೆ ಖರ್ಚು ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಪ್ರಧಾನ ಶಿಕ್ಷಕನ ವಿರುದ್ಧ ಆರೋಪಿಸಿದ್ದಾರೆ. ಈ ಶಾಲೆಯಿಂದ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವಂತೆ ವಿಜಯಪುರ ಅಥಣಿ ರಾಷ್ಟ್ರೀಯ ಹೆದ್ದಾರಿ ತಡೆಗಟ್ಟಿ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ತಿಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಸಮಾಧಾನಗೊಳಿಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES