ಮೇಕೆದಾಟು ಯೋಜನೆ ಜಾರಿಗಾಗಿ ಹೋರಾಟ ಮಾಡಲು ಒಂದು ಕಡೆ ಕಾಂಗ್ರೆಸ್ ಮೈಕೊಡವಿ ನಿಂತಿದೆ. ಆದರೆ, ನಿರ್ಧಾರ ದಳಪತಿಗಳಲ್ಲಿ ತಳಮಳ ಉಂಟು ಮಾಡಿದೆ. ಹೀಗಾಗಿಯೇ ಪಾದಯಾತ್ರೆ ರಾಜಕೀಯದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಮೇಕೆದಾಟು ಪಾದಯಾತ್ರೆ ಸಂಗಮದಿಂದ ಬೆಂಗಳೂರಿನವರೆಗೆ ಬರೋಬ್ಬರಿ 170 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಈ ಮೂಲಕ ಜೆಡಿಎಸ್ ಭದ್ರಕೋಟೆಗೆ ಕೈ ಹಾಕಬಹುದು ಅನ್ನೋ ಲೆಕ್ಕಾಚಾರ ನಡೆದಿದೆ. ಇದೇ ಕಾರಣಕ್ಕೆ ದಳಪತಿಗಳಿಗೆ ತಳಮಳ ಶುರುವಾಗಿದೆ ಎನ್ನಲಾಗ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಕೆಂಡ ಕಾರಿದ್ದಾರೆ. ಮೇಕೆದಾಟು ಯೋಜನೆ ಜಾರಿ ಅಂತಿಮ ಹಂತಕ್ಕೆ ಬಂದಿದ್ದು, ಈಗ ಪಾದಯಾತ್ರೆ ಮಾಡುವ ಅವಶ್ಯಕತೆ ಏನಿತ್ತು ಅಂತ ಪ್ರಶ್ನೆ ಮಾಡಿದ್ದಾರೆ. ಜೊತೆಗೆ, ಸಿದ್ದರಾಮಯ್ಯ ತಮ್ಮದೇ ಸರ್ಕಾರದಲ್ಲಿ ಸುಮ್ಮನಿದ್ದರು, ಆಗ ಇಲ್ಲದ ಮುತುವರ್ಜಿ ಈಗ ಏಕೆ ಬಂತು..? ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ 83 ತಾಲೂಕಿನ ಜನರಿಗೆ ಮಕ್ಮಲ್ ಟೋಪಿ ಹಾಕಲು ಕಾಂಗ್ರೆಸ್ ಹೊರಟಿದೆ ಅಂತ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮೂಲಕ ಕುಟುಕಿದ್ದಾರೆ.
ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೆರಳಿ ಕೆಂಡವಾದರು. ನಮ್ಮ ಯಾತ್ರೆಯನ್ನ ಕಾಂಗ್ರೆಸ್ ಹೈಜಾಕ್ ಮಾಡಲಿದೆ ಅಂತ ಆರೋಪ ಮಾಡುತ್ತಿದ್ದಾರೆ. ಯೋಜನೆ ಅನುಷ್ಠಾನಗೊಳಿಸಲು ನಾವು ಪಾದಯಾತ್ರೆ ಮಾಡ್ತಿದ್ದೇವೆ. ಇದಕ್ಕೆ ಕುಮಾರಸ್ವಾಮಿಯವರಿಗೆ ಯಾಕೆ ಹೊಟ್ಟೆಯುರಿ ಅಂತ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.
ಸಾಹಿತ್ಯ, ಸಿನಿಮಾ ನಿರ್ದೇಶನ, ನಿರ್ಮಾಪಕ ಎಲ್ಲಾ ಕುಮಾರಸ್ವಾಮಿ ಅವರೇ ಆಗಿದ್ದಾರೆ. ಇತ್ತೀಚೆಗೆ ಈ ಸಾಹಿತಿ ಕೂಡ ಬಡ್ತಿ ಪಡೆದಿದ್ದಾರೆ ಅಂತ ಡಿಕೆಶಿ ವ್ಯಂಗ್ಯವಾಡಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಈ ಹೋರಾಟ ನಿಲ್ಲಿಸಲು ದೆಹಲಿಯಲ್ಲಿ ಏನೆಲ್ಲಾ ಮಾತುಕತೆ ಮಾಡಿ ಬಂದಿದ್ದಾರೆ ಅಂತ ಗೊತ್ತಿದೆ. ಯಾರು ಏನೇ ಮಾಡಿದರೂ ಪಾದಯಾತ್ರೆ ಮಾಡುವುದು ಶತಸಿದ್ದ ಅಂತ ದಳಪತಿಗಳಿಗೆ ಮತ್ತು ಬಿಜೆಪಿಗೆ ಡಿ.ಕೆ.ಶಿವಕುಮಾರ್ ಅವರು ಸವಾಲು ಹಾಕಿದರು
ಒಟ್ಟಿನಲ್ಲಿ, ಕಾಂಗ್ರೆಸ್ ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಆಡಳಿತ ಪಕ್ಷ ಬಿಜೆಪಿಗೆ, ಕಾಂಗ್ರೆಸ್‌ನ ಈ ಪ್ರಯೋಗ ತಲೆನೋವಾಗಿ ಪರಿಣಾಮಿಸಿದೆ. ಜೆಡಿಎಸ್ ಪಕ್ಷಕ್ಕೆ ಒಕ್ಕಲಿಗ ಬೆಲ್ಟ್‌ನಲ್ಲಿ ಹಿನ್ನಡೆ ಉಂಟಾಗಬಹುದು ಎಂಬ ಆತಂಕ ಮೂಡಿದೆ. ಹೀಗಾಗಿಯೇ ಪಾದಯಾತ್ರೆ ಬಗ್ಗೆ ಬಿಜೆಪಿ ನಾಯಕರು ಮುಗಿಬೀಳುವ ಬದಲು, ದಳಪತಿಗಳು ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯುತ್ತಿದ್ದಾರೆ. ಈಗ ಶುರುವಾಗಿರುವ ರಾಜಕೀಯ ಕೆಸೆರೆರಚಾಟ ಮುಂದಿನ ಚುನಾವಣೆವರೆಗೆ ಮುಂದುವರಿಯುವುದಂತೂ ಗ್ಯಾರಂಟಿ.