Monday, December 23, 2024

240 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ವಿಜಯಪುರ : ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗುವುದೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿನ ಜಿಲ್ಲಾ ಪಂಚಾಯತ ಸಮೀಪದ ಮೈದಾನದಲ್ಲಿಂದು 240 ಕೋಟಿ ರೂ.ಗಳಿಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಅದರಲ್ಲಿಯೂ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಹಾಗೂ ವಿಶೇಷ ಅನುದಾನ ನೀಡಲು ಬದ್ಧರಿರುವುದಾಗಿ ತಿಳಿಸಿದ ಅವರು ವಿಶೇಷ ಅಧಿಕಾರಿಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆಗೂ ಗಮನ ನೀಡಲಾಗುವುದೆಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯ ಜನರು ಅತ್ಯಂತ ಕಠಿಣ ಪರಿಶ್ರಮವುಳ್ಳವರು, ಕಾಯಕಯೋಗಿ, ಪ್ರಾಮಾಣಿಕ ಮತ್ತು ನೇರನುಡಿವುಳ್ಳವರಾಗಿದ್ದಾರೆ. ಗಂಡು ಮೆಟ್ಟಿನ ಸ್ಥಳ ಇದಾಗಿದ್ದು, ಈ ಜಿಲ್ಲೆಗೆ ನ್ಯಾಯ ಒದಗಿಸುವ ಕಾಲ ಕೂಡಿ ಬಂದಿದೆ. ಕಳೆದ ಐದು ದಶಕಗಳ ಹೋರಾಟದ ತ್ಯಾಗ ಮತ್ತು ಬಲಿದಾನದ ಫಲವಾಗಿ ಈ ಭಾಗದ ಭೂ ತಾಯಿ ಹಸಿರನ್ನಾಗಿಸಲು ತಮ್ಮ ಸರ್ವಸ್ವ ಕಳೆದುಕೊಂಡು ಕೃಷ್ಣಾ ಮೇಲ್ದಂಡೆ ಯೋಜನೆ ಈ ಭಾಗದಲ್ಲಿ ತರಲು ಹಲವರು ಶ್ರಮಿಸಿದ್ದಾರೆ. ಅವರ ತ್ಯಾಗ, ಬಲಿದಾನ ಹುಸಿಯಾಗಬಾರದು. ಬರಗಾಲ ಜಿಲ್ಲೆ ಎಂದು ಈ ಭಾಗಕ್ಕೆ ಹಣೆಪಟ್ಟಿ ಬೇಡ ಎಂದ ಅವರು ಐತಿಹಾಸಿಕ, ಆಡಳಿತಾತ್ಮಕ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣವಾಗಿದ್ದು, ಇನ್ನು ಮುಂದೆ ನಾವೆಲ್ಲರೂ ಒಗ್ಗಟ್ಟಾಗಿ ಕರ್ನಾಟಕದ ನೆಲ, ಜಲ ಮತ್ತು ಜನರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ರಾಜ್ಯದ ಕಟ್ಟಕಡೆಯ ಬಡವ್ಯಕ್ತಿಯ ಬದುಕು ಹಸನಾಗಿಸಲು ಪ್ರಯತ್ನಿಸಬೇಕಾಗಿದೆ. ದೀನ ದಲಿತರು, ರೈತರು, ಯುವಕರು ಹಾಗೂ ಹೆಣ್ಣು ಮಕ್ಕಳ ಬದುಕು ಹಸನಾಗಿಸಬೇಕಾಗಿದೆ. ಜನರ ನೀಡಿದ ಅಧಿಕಾರದ ಬಲ ಅಭಿವೃದ್ಧಿಗೆ ಮತ್ತು ಜನರ ಶ್ರೇಯೋಭಿವೃದ್ಧಿಗೆ ಬಳಸುವ ಮೂಲಕ ಹೊಸ ಮನ್ವಂತರ ಸೃಷ್ಟಿಸುವ ಮೂಲಕ ಆಡಳಿತ ಮತ್ತು ಅಧಿಕಾರಿ ವರ್ಗಗಳನ್ನು ಸುಧಾರಿಸಬೇಕಾಗಿದೆ. ಜನರಿಗೆ ಹುಸಿ ಭರವಸೆ ನೀಡದೆ, ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ಕಾರ್ಯಮಾಡಲಾಗುವುದೆಂದ ಅವರು ಉತ್ತರ ಕರ್ನಾಟಕ, ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಅದರಲ್ಲಿಯೂ ಗ್ರಾಮಾಂತರ ಪ್ರದೇಶದ ಸ್ಥಿತಿಗತಿ ಅನುಕೂಲಕರವಾಗಿಲ್ಲ. ಕಾರಣ ನನ್ನಿಂದಲೇ ಈ ಭಾಗದ ಹೆಣ್ಣು ಮಕ್ಕಳಿಗೆ ಗೌರವ ದೊರಕಿಸುವ, ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ, ವಸತಿ ಸಚಿವ ವಿ ಸೋಮಣ್ಣ, ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಭೂಸನೂರ, ಸೋಮನಗೌಡ ಪಾಟೀಲ (ಸಾಸನೂರ) ಸುನೀಲಗೌಡ ಪಾಟೀಲ, ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ್, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES