Monday, May 20, 2024

ಸಭಾಪತಿಗಳಿಂದ ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಪ್ರಸ್ತಾಪ

ಬೆಳಗಾವಿ: ಬೆಳಗಾವಿಯಲ್ಲಿ ಶಾಸಕರ ಭವನ ಮತ್ತು ಸಚಿವಾಲಯ ನಿರ್ಮಾಣದ ಪ್ರಸ್ತಾವವನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಇಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇನ್ನು ಮುಂದೆ ಬೆಳಗಾವಿಯಲ್ಲಿ ವರ್ಷದಲ್ಲಿ ಎರಡು ಬಾರಿ ವಿಧಾನ ಮಂಡಲದ ಕಲಾಪವನ್ನು ನಡೆಸುವ ಪ್ರಸ್ತಾಪವನ್ನು ಸಲ್ಲಿಸಲಾಗಿದೆ. ವಿಧಾನ ಪರಿಷತ್‍ನ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದ್ದು, ದೇಶದಲ್ಲೇ ಮಾದರಿ ವಿಧಾನ ಪರಿಷತ್ ಆಗಿ ರೂಪಿಸಲಾಗುವುದು ಎಂದರು.

ಈ ಬಾರಿ ವಿಧಾನ ಮಂಡಲದ ಕಲಾಪಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲು ಸಾಧ್ಯವಾಗಿದೆ. ಒಟ್ಟು 11ಗಂಟೆ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಎಲ್ಲಾ ಸದಸ್ಯರು ಸಕ್ರಿಯವಾಗಿ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. 10ದಿನಗಳ ಅಧಿವೇಶನದಲ್ಲಿ 1384 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಈ ಪೈಕಿ 134 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 792 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಮಂಡಿಸಲಾಗಿದೆ. ನಿಯಮ 72ರಡಿಯಲ್ಲಿ 160 ಸೂಚನೆಗಳನ್ನು ಸ್ವೀಕರಿಸಿದ್ದು, ಈ ಪೈಕಿ 8 ಸೂಚನೆಗಳಿಗೆ ಉತ್ತರಿಸಲಾಗಿದೆ. 330ರಡಿ 111 ಸೂಚನೆಗಳ ಪೈಕಿ 13 ಪ್ರಸ್ತಾವನೆಗಳನ್ನು ಚರ್ಚಿಸಿ ಉತ್ತರಿಸಲಾಗಿದೆ. ನಿಯಮ 59ರಡಿ 4ಸೂಚನೆಗಳ ಪೈಕಿ 3ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚಿಸಿ ಉತ್ತರಿಸಲಾಗಿದೆ ಎಂದು ತಿಳಿಸಿದರು.

ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ 9 ವಿಧೇಯಕಗಳಿಗೆ ವಿಧಾನಪರಿಷತ್ ತಮ್ಮ ಸಹಮತಿ ನೀಡಿದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಶತಮಾನೋತ್ಸವ ಸಮ್ಮೇಳನದಲ್ಲಿ ಭಾಗವಹಿಸಿ ಕೈಗೊಂಡ ನಿರ್ಣಯಗಳಿಗೆ ಸದನ ಸಂಪೂರ್ಣ ಸಹಮತಿ ನೀಡಿದೆ.

ಸದನದ ಕಲಾಪಗಳಲ್ಲಿ ಎಲ್ಲಾ 74 ಸದಸ್ಯರು ಸಕ್ರಿಯವಾಗಿ ಭಾಗವಹಿಸಿ, ಸದನದ ಗಾಂಭೀರ್ಯತೆಯನ್ನು ಹೆಚ್ಚಿಸಿದ್ದಾರೆ. ಕಲಾಪಗಳಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸಿದ ಅತ್ಯುತ್ತಮ ಸದಸ್ಯರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES