ರಾಮನಗರ : ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಹಮ್ಮಿಕೊಂಡು ಹೈಜಾಕ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಪಾದಯಾತ್ರೆ ಆರಂಭವಾಗಿದ್ದೇ ದೇವೇಗೌಡರಿಂದ. ಮೇಕೆದಾಟು ವಿಚಾರದಲ್ಲಿ ಜೆಡಿಎಸ್ ಪಕ್ಷವೂ ಹೋರಾಟ ಮಾಡುತ್ತಿದೆ. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೂ ಮನವಿ ಕೊಟ್ಟಿದೆ ಎಂದರು. 2013ರಲ್ಲಿ ಕೃಷ್ಣೆಯ ಕಡೆಗೆ ಕಾಂಗ್ರೆಸ್ ನಡಿಗೆ ಎಂದು ಪಾದಯಾತ್ರೆ ಮಾಡಿದ್ದರು.
ಆದರೆ, ಹನಿ ನೀರು ರೈತರ ಜಮೀನಿಗೆ ಹರಿಯಲಿಲ್ಲ. ಕೃಷ್ಣಾ ನದಿ ಯೋಜನೆಗೆ ಸಂಬಂಧಿಸಿದಂತೆ ಮೈನ್ ಕೆನಾಲ್ ನಿರ್ಮಿಸಿದ್ದಾರೆ. ಆದರೆ, ಡಿಸ್ಟ್ರಿಬ್ಯೂಷನ್ ಕೆನಾಲ್ ನಿರ್ಮಿಸಿಲ್ಲ. ಇವರು ಗುತ್ತಿಗೆದಾರ ಜೊತೆ ಸೇರಿ ದುಡ್ಡು ಹಂಚಿಕೊಂಡರು. ಇದು ಸಾಧನೆಯೇ ಎಂದು ಟೀಕಿಸಿದರು.
ಜನರನ್ನು ಮರಳು ಮಾಡಲು ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಹೊರಟಿದ್ದಾರೆ. ಜೆಡಿಎಸ್ ಕೊಟ್ಟ ನೀರಾವರಿ ಯೋಜನೆಗಳಿಗೂ ಕಾಂಗ್ರೆಸ್‌ನ ಬೂಟಾಟಿಕೆಗೂ ಬಹಳ ವ್ಯತ್ಯಾಸವಿದೆ. ಕಾಂಗ್ರೆಸ್‌ನವರು ಈಗ ಹೈಜಾಕ್ ಮಾಡಿ ತರಾತುರಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಮೇಕೆದಾಟು ಯೋಜನೆ ಸಾಧ್ಯವಿಲ್ಲ. ಅದು ಜನತಾ ದಳದಿಂದ ಮಾತ್ರ ಸಾಧ್ಯ ಎಂದು ಹೇಳಿದರು.