ರಾಜ್ಯದಲ್ಲಿ ಭಾರಿ ಸದ್ದು ಮಾಡ್ತಿರುವ ಮತಾಂತರ ನಿಷೇಧ ಕಾಯ್ದೆ ವಿಚಾರ ವಿಧಾನಸಭೆಯಲ್ಲೂ ಗದ್ದಲ ಕೋಲಾಹಲಕ್ಕೆ ಕಾರಣವಾಯ್ತು. ಸದನ ಆರಂಭವಾದ ತಕ್ಷಣ ಸ್ಪೀಕರ್ ಕಾಗೇರಿ ಬಿಲ್ ಮೇಲಿನ ಚರ್ಚೆಗೆ ಅವಕಾಶ ನೀಡಿದರು. ಚರ್ಚೆಗೂ ಮೊದಲು ಗೃಹ ಸಚಿವ ಆರಗ ಜ್ಞಾನೇಂದ್ರ ಬಿಲ್ ಒಳಗೊಂಡಿರುವ ಹೊಸ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದರು. ರಾಜ್ಯದಲ್ಲಿ ಆಗ್ತಿರುವ ಬಲವಂತದ ಮತಾಂತರಕ್ಕೆ ಬ್ರೇಕ್ ಹಾಕಬೇಕು ಅನ್ನೋ ಕಾರಣಕ್ಕೆ ಈ ಬಿಲ್ ತರುತ್ತಿದ್ದೇವೆ. ಸರ್ವಾನುಮತದಿಂದ ಪಾಸ್ ಮಾಡಿ ಎಂದು ಮನವಿ ಮಾಡಿದರು ಆದರೆ, ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಈ ವೇಳೆ 2016 ರಲ್ಲಿ ಈ ಬಿಲ್ ತರಲಾಗಿದೆ ಎಂದು ಕೈ ವಿರುದ್ಧ ಸರ್ಕಾರ ಪ್ರತಿ ಅಸ್ತ್ರ ಪ್ರಯೋಗ ಮಾಡಿ ಕಾಂಗ್ರೆಸ್‌ಗೆ ಶಾಕ್ ನೀಡಿತು.
ತೀವ್ರ ಕುತೂಹಲ ಹುಟ್ಟಿ ಹಾಕಿದ್ದ ಮತಾಂತರ ಬಿಲ್ ವಿಧಾಸಭೆಯಲ್ಲಿ ಭಾರಿ ಸದ್ದು ಮಾಡಿತ್ತು. ಈ ವಿಷಯವಾಗಿ ನಡೆದ ಚರ್ಚೆ ಆಡಳಿತ ಹಾಗು ವಿಪಕ್ಷ ನಾಯಕರ ನಡುವೆ ಜೋರಾಗಿಯೇ ಜಟಾಪಟಿ ನಡೀತು. ಅದರಲ್ಲೂ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ನಡುವಿನ ವಾಕ್ಸಮರ ಜೋರಾಗಿತ್ತು. ಅಷ್ಟಕ್ಕೆ ನಿಲ್ಲದ ವಾಕ್ಸಮರ ಈಶ್ವರಪ್ಪ ಮತ್ತು ಸಿದ್ದು ನಡುವಿನ ಹಾಸ್ಯ ಚಟಾಕಿ ಕಡೆ ತಿರುಗಿತು. ಹೀಗೆ ಸದ್ದು ಗದ್ದಲದ ನಡುವೆಯೇ ಮತಾಂತರ ಕಾಯ್ದಿ ಪಾಸ್ ಮಾಡಿಕೊಂಡಿದೆ ಬಿಜೆಪಿ ನೇತೃತ್ವದ ಸರ್ಕಾರ.
ಅಧಿವೇಶನ ಆರಂಭವಾದ ತಕ್ಷಣ ಮತಾಂತರ ನಿಷೇಧ ವಿಧೇಯಕದ ಮೇಲೆ ಚರ್ಚೆಗೆ ಸ್ಪೀಕರ್ ಕಾಗೇರಿ ಸೂಚನೆ ನೀಡಿದರು. ಸದನದ ಸದಸ್ಯರಿಗೆ ಈ ಹೊಸ ಬಿಲ್ ಉದ್ದೇಶ ಏನು ಅನ್ನೋದನ್ನ ಗೃಹ ಸಚಿವ ಆರಗ ಜ್ಞಾನೇಂದ್ರ ಸದನಕ್ಕೆ ಮಾಹಿತಿ ನೀಡಿದರು.. ನಂತರ ಮಾಹಿತಿ ಕೊಟ್ಟ ಮಾಧುಸ್ವಾಮಿ 2016ರಲ್ಲಿ ಕಾಂಗ್ರೆಸ್ ಈ ಬಿಲ್ ತರಲು ಮುಂದಾಗಿತ್ತು. ಅದಕ್ಕೆ ಕೆಲ ನಿಯಮ ಸೇರಿಸಿ ಈ ಬಿಲ್ ಮಂಡನೆ ಮಾಡಿದ್ದೇವೆಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಪ್ರತಿ ಅಸ್ತ್ರ ಪ್ರಯೋಗ ಮಾಡಿದರು.
ವಿಧೇಯಕದ ಮೇಲೆ ಸಿದ್ದರಾಮಯ್ಯ ಭಾಷಣ ಆರಂಭ ಮಾಡಿದ ತಕ್ಷಣ ಮಾಧುಸ್ವಾಮಿ 2016ರಲ್ಲಿ ಬಿಲ್ ರೆಡಿಯಾಗಿತ್ತು ಎಂದು ಹೇಳ್ತಾರೆ.. ನಾನು ಜಯಚಂದ್ರ ಅವರನ್ನ ಕೇಳಿದೆ ಆ ರೀತಿಯ ಯಾವುದೇ ಬಿಲ್ ನಾವು ತಂದಿಲ್ಲ ಎಂದು ಹೇಳಿದರು. ತದ ನಂತರ ಜಯಚಂದ್ರ ಮತ್ತು ಅಂಜನೇಯ ಸಹಿ ಸಹ ಇದೆ ಕಾನೂನು ಇಲಾಖೆ ಕರಡು ಪ್ರತಿ ಸಿದ್ಧಪಡಿಸಿ ಕ್ಯಾಬಿನೆಟ್‌ಗೆ ತಂದಿರುವ ಬಗ್ಗೆ ಸಹ ಮಾಹಿತಿ ನೀಡಿದರು. ದಾಖಲೆ ನೋಡಿ ಸ್ಪೀಕರ್ ಸಹ ಇದು ನಿಮ್ಮ ಸಹಿ ಸಹ ಇದೆ ಎಂದು ಹೇಳಿದರು. ಆ ಕ್ಷಣದಲ್ಲಿ ಏನು ಹೇಳಬೇಕೆಂದು ಅರ್ಥವಾಗದ ಸಿದ್ದರಾಮಯ್ಯ ದಾಖಲೆ ನೋಡಿ ಮಾತನಾಡ್ತೀನಿ ಎಂದು ಹೇಳಿದರು.. ಸದನ ಹತ್ತು ನಿಮಿಷಗಳ ಕಾಲ ಮುಂದೂಡಿದ ಸ್ಪೀಕರ್ ತಮ್ಮ ಕಚೇರಿಯಲ್ಲಿ ಸಿದ್ದರಾಮಯ್ಯಗೆ ದಾಖಲೆ ನೀಡಿ ಮಾಹಿತಿ ನೀಡಿದರು.
ನಂತರ ಸಿದ್ದರಾಮಯ್ಯ ಮಾತು ಆರಂಭ ಮಾಡಿದ ತಕ್ಷಣ ಅದನ್ನ ಸಮರ್ಥನೆ ಮಾಡಿಕೊಳ್ಳಲು ಮುಂದಾದರು. ಅದು ಕ್ಯಾಬಿನೆಟ್‌ಗೆ ಬಂದಿದೆ. ಆದರೆ ಚರ್ಚೆ ಆಗಿಲ್ಲ. ಅಲ್ಲದೆ ನಾವು ತರಲು ಹೊರಟಿದ್ದ ಬಿಲ್‌ಗೂ ಈಗ ಇರುವ ಬಿಲ್‌ಗೂ ಬಹಳ ವ್ಯತ್ಯಾಸ ಇದೆ. ಸಂವಿಧಾನದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲದಿರುವುದರಿಂದ ಈ ಬಿಲ್ ಅಪ್ರಸ್ತುತ ಎಂದು ಹೇಳಿದರು. ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಇದು ಡಬಲ್ ಸ್ಟ್ಯಾಂಡರ್ಡ್ ಎಂದು ಟೀಕೆ ಮಾಡಿದ್ದರು.
ಬಿಜೆಪಿಗೆ ಎದುರೇಟು ಕೊಡಲು ಅಂದಿನ ದಾಖಲೆ ಪರಿಶೀಲನೆ ಮಾಡಿದ ಟಗರು :
ಯಾವಾಗ ಸಿದ್ದರಾಮಯ್ಯ ಕಾಲದ ಕರಡು ಎಂದು ಬಿಜೆಪಿ ಬೊಬ್ಬೆ ಹೊಡೆಯಿತೋ.. ಕೂಡಲೇ ವರ್ಕ್ ಮಾಡಿದ ಸಿದ್ದರಾಮಯ್ಯ ಕರಡಿನ ,ಸೀಕ್ರೇಟ್ ರಿವೀಲ್ ಮಾಡಿದ್ರು.. 2009ರಲ್ಲಿ ಯಡಿಯೂರಪ್ಪ ಸಿಎಂ ಅಗಿದ್ದಾಗ ಬಂದ ಅರ್ಜಿಯನ್ನು ನಮ್ಮ ಸರ್ಕಾರ ಇದ್ದಾಗ ಪರಿಶೀಲಿಸುವಂತೆ ಕೋರಲಾಗಿತ್ತು. ಇದನ್ನ ಸದನದ ಮುಂದೆ ಸಿದ್ದರಾಮಯ್ಯ ಎಳೆಎಳೆಯಾಗಿ ಬಿಚ್ಚಿಡಿಲು ಶುರುಮಾಡಿದ್ದೇ ತಡ, ಸಿದ್ದರಾಮಯ್ಯ ಕಾಲದಲ್ಲಿ ಕ್ಯಾಬಿನೆಟ್‌ಗೆ ಹೋಗಿಲ್ಲವೆಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.
ಬಿಜೆಪಿ ನಾಯಕರ ವಿರುದ್ಧ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ :
ಯಾವಾಗ ಯಡಿಯೂರಪ್ಪ ಮತ್ತು ಮಾಧುಸ್ವಾಮಿ ಒಪ್ಪಿಕೊಂಡರೋ, ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಹೋರಾಟಕ್ಕಿಳಿದರು. ಈ ವೇಳೆ ಅಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಈ ವೇಳೆ ಕೈ ನಾಯಕರು ಬಾವಿಗಿಳಿದು ಹೊರಾಟ ಮಾಡಿದರು. ಇದೆಲ್ಲದರ ನಡುವೆ ಸ್ವೀಕರ್ ಮತಾಂತರ ಕಾಯ್ದೆಯನ್ನು ಧ್ವನಿ ಮತಕ್ಕೆ ಹಾಕಿ ಸದನದಲ್ಲಿ ಬಿಲ್ ಪಾಸ್ ಮಾಡಿದರು.
ಈ ಬಿಲ್ ಮೇಲಿನ ಚರ್ಚೆ ನಡೆಯಬೇಕೆಂದು ಸರ್ಕಾರದ ವಿರುದ್ಧ ತಿರುಗಿಬೀಳಬೇಕು ಎಂದಿದ್ದ ಡಿ.ಕೆ. ಶಿವಕುಮಾರ್ ಚರ್ಚೆಯ ಸಂದರ್ಭದಲ್ಲಿ ಗೈರು ಹಾಜರಾಗಿದರು.. ಸಿದ್ದರಾಮಯ್ಯ ಭಾಷಣದ ಮೇಲೆ ಪದೇ ಪದೆ ಬಿಜೆಪಿ ಶಾಸಕರು ಮುಗಿಬಿದ್ದರು. ರಮೇಶ್ ಕುಮಾರ್, ಜಾರ್ಜ್ ಹೊರತುಪಡಿಸಿದರೆ ಉಳಿದವರೆಲ್ಲ ಸೈಲೆಂಟ್ ಆಗಿದ್ದರು.