ಬೆಳಗಾವಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸರ್ಕಾರ ಮತಾಂತರ ನಿಷೇಧಕ್ಕೆ ಮುಂದಡಿ ಇಟ್ಟಿದೆ. ಅಧಿವೇಶನದಲ್ಲಿ ಬಹುವಿವಾದಿತ ಮತಾಂತರ ಕಾಯ್ದೆಯನ್ನು ಮಂಡಿಸಿದೆ. ಇದು ವಿಪಕ್ಷಗಳನ್ನು ಕೆರಳಿಸಿದ್ದು, ಸದನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಸರ್ಕಾರದ ನಡೆ ಖಂಡಿಸಿ ಕಾಂಗ್ರೆಸ್ ವಾಕೌಟ್ ಮಾಡಿತು.
ಸದನದಲ್ಲೇ ವಿಧೇಯಕದ ಬಿಲ್ ಹರಿದು ಡಿಕೆಶಿ ಆಕ್ರೋಶ :
ಬೆಳಗಾವಿ ಅಧಿವೇಶನದಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದ ಬಹುವಿವಾದಿತ ಮತಾಂತರ ಕಾಯ್ದೆಯನ್ನು ಕೊನೆಗೂ ಸರ್ಕಾರ ಮಂಡಿಸಿತು. ಭೋಜನ ವಿರಾಮದ ನಂತರ ಸದನ ಶುರುವಾಗ್ತಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಬಿಲ್ ಮಂಡಿಸಿದ್ದರು. ಬಿಲ್ ಮಂಡಿಸಿದ್ದೇ ತಡ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ಸಹ ಆಯ್ತು.
ಈ ವೇಳೆ ಬಿಲ್ ಬಗ್ಗೆ ವಿವರಣೆ ನೀಡಲು ಮುಂದಾದ ಮಾಧುಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕೈ’ ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ರಾಜಾ ರೋಷವಾಗಿ ಬಿಲ್ ತರಬೇಕೇ ವಿನಃ ಈ ರೀತಿ ಕದ್ದು ಮುಚ್ಚಿ ತರೋದಲ್ಲ ಅಂತ ಟಗರು ಗುಟುರು ಹಾಕಿತು. ಈ ವೇಳೆ ಸರ್ಕಾರದ ಪರ ಎದ್ದುನಿಂತ ಕಾನೂನು ಸಚಿವ ಮಾಧುಸ್ವಾಮಿ ನಾವು ಕದ್ದು ಮುಚ್ಚಿ ಯಾವುದೇ ಬಿಲ್ ತಂದಿಲ್ಲ. ಇದೇ ಅಧಿವೇಶನದಲ್ಲಿ ತರುತ್ತೇವೆ ಎಂದು ಹೇಳಿದ್ದೀವಿ, ಅದರಂತೆ ಬಿಲ್ ಮಂಡನೆ ಮಾಡಿದ್ದೇವೆ ಎಂದರು. ಈ ವೇಳೆ ಮಾಧುಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆಯಿತು. ಜೊತೆಗೆ ಡಿ.ಕೆ.ಶಿವಕುಮಾರ್ ಸಹ ಬಿಲ್ ಹರಿದು ಹಾಕುವ ಮೂಲಕ ಅಕ್ರೋಶ ಹೊರಹಾಕಿದ್ದಾರೆ.
ಮತಾಂತರ ಕಾಯ್ದೆ ವಿರೋಧಿಸಿ ಕೈ’ನಾಯಕರು ವಾಕ್‌ಔಟ್ :
ವಿರೋಧ ಪಕ್ಷಗಳ ಗದ್ದಲದ ನಡುವೆಯೂ ವಿಧೇಯಕ ಮಂಡನೆ ಆಯ್ತು. ರಾಜಾರೋಷವಾಗಿ ಬಿಲ್ ತನ್ನಿ.. ಈ ರೀತಿ ಕದ್ದುಮುಚ್ಚಿ ಬಿಲ್ ತರಬೇಡಿ ಅಂತ ಸದನದ ಬಾವಿಗಿಳಿದು ಕಾಂಗ್ರೆಸ್ ಶಾಸಕರು ಪ್ರೊಟೆಸ್ಟ್ ಮಾಡಿದರು. ಕಂದಾಯ ಸಚಿವರು ಉತ್ತರ ನೀಡೋದನ್ನ ನಿಲ್ಲಿಸಿ ಅಡಿಷಿನಲ್ ಬಿಲ್ ತಂದಿದ್ದನ್ನು ವಿರೋಧಿಸಿ ಕಾಂಗ್ರೆಸ್ ಶಾಸಕರು ವಾಕ್‌ಔಟ್ ಮಾಡಿದರು. ಇದು ಆರ್‌ಎಸ್‌ಎಸ್ ಅಜೆಂಡಾ. ಅವರು ಹೇಳಿದಂತೆ ಕೇಳ್ತಿದ್ದಾರೆ ಅಂತ ಸಿದ್ದು ಗುಡುಗಿದ್ರೆ, ಮತಾಂತರ ಕಾಯ್ದೆ ವಿರೋಧಿಸಿ ಜನತಾ ಕೋರ್ಟ್ ಮುಂದೆ ಹೋಗ್ತೀವಿ ಅಂತಾ ಡಿ.ಕೆ ಶಿವಕುಮಾರ್ ಆಕ್ರೋಶ ಹೊರಹಾಕಿದರು.
ಮತಾಂತರ ನಿಷೇಧ ವಿಧೇಯಕ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗಕ್ಕೆ ಸದನದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು. ಮುಸಲ್ಮಾನರನ್ನ, ಕ್ರೈಸ್ತರನ್ನ ತೃಪ್ತಿಪಡಿಸಲು ಕಾಂಗ್ರೆಸ್ ಸಭಾತ್ಯಾಗ ಮಾಡಿದೆ. ಇಂಥ ಕೆಟ್ಟ ನಿರ್ಣಯದ ಮೂಲಕ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ. ಹಿಂದೂಗಳು ಮುಸ್ಲಿಮರಾಗಿ ಮತಾಂತರ ಆಗಿ ಭಾರತ ಪಾಕಿಸ್ತಾನ ಆಗಬೇಕೆ ಅಂತ ಪ್ರಶ್ನೆ ಮಾಡಿದರು…ಈಶ್ವರಪ್ಪ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್.ಡಿ ಕುಮಾರಸ್ವಾಮಿ, ಬೇರೆ ಧರ್ಮಕ್ಕೆ ಕನ್ವರ್ಟ್ ಮಾಡುತ್ತಾರೆ ಎಂಬ ಪದ ಒಪ್ಪಲು ಸಾಧ್ಯವಿಲ್ಲ ಎಂದರು.
ಒಟ್ಟಿನಲ್ಲಿ ವಿಧಾನಸಭೆಯಲ್ಲಿ ಮಂಡನೆಯಾದ ಮತಾಂತರ ಕಾಯ್ದೆ ಮತ್ತೆ ಚರ್ಚೆಗೆ ಬರಲಿದ್ದು ಆಡಳಿತ ಪಕ್ಷದ ಮೇಲೆ ಮುಗಿಬೀಳಲು ವಿಪಕ್ಷಗಳು ರಣತಂತ್ರ ರೂಪಿಸಿವೆ. ಹೀಗಾಗಿ, ಮತ್ತೆ ಕನ್ನಡ ಸೌಧ ಟಾಕ್‌ವಾರ್‌ಗೆ ಸಾಕ್ಷಿಯಾಗಲಿದೆ.