ಚಳಿಗಾಲದಲ್ಲಿ ಅತಿಯಾಗಿ ಶೀತ ಗಾಳಿ ಬೀಸೋದ್ರಿಂದ ಶೀತ ನೆಗಡಿ ಕೆಮ್ಮು ಜ್ವರದಂತಹ ಖಾಯಿಲೆಗಳು ವೇಗವಾಗಿ ಹಬ್ಬುತ್ತವೆ. ಚಳಿಗಾಲದಲ್ಲಿ ಶೀತ-ಕೆಮ್ಮು ಮತ್ತು ಜ್ವರ ಸಾಮಾನ್ಯವಾಗಿದ್ದರೂ,ಅದನ್ನ ನಾವು ನಿರ್ಲಕ್ಷಿಸಿದರೆ, ಆರೋಗ್ಯದಲ್ಲಿ ಏರು ಪೇರುಗಳಾಗುತ್ತವೆ. ಈ ಸಮಯದಲ್ಲಿ, ಬಾಡಿ ಪೈನ್ ಕೂಡ ಹೆಚ್ಚಾಗಿ ಕಾಣಿಸುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಹಲವಾರು ಗುಣಗಳಿಂದ ಕೂಡಿರುವ ಈ ಮಸಾಲೆಯುಕ್ತ ಕಾಫಿಯನ್ನು ಸೇವಿಸುವುದು ಬಹಳ ಪ್ರಯೋಜನಕಾರಿಯಾಗುತ್ತೆ.
ಅಲರ್ಜಿಗಳು ಮತ್ತು ರೋಗಗಳಿಂದ ದೂರವಿರಿಸಲು ಈ ಮಸಾಲಾ ಕಾಫಿ ಸಹಾಯ ಮಾಡುತ್ತದೆ. ನೀವು ಕ್ಯಾಸಿನೋ, ಮೋಕಾ ಮತ್ತು ಫಿಲ್ಟರ್ ಕಾಫಿಯ ಬಗ್ಗೆ ಕೇಳಿರಬಹುದು, ಆದರೆ ಈ ಮಸಾಲೆ ಕಾಫಿ ಬಗ್ಗೆ ನೀವು ಎಲ್ಲೂ ಕೂಡ ಕೇಳಿರೋದಿಲ್ಲ ಮಸಾಲೆ ಕಾಫಿಯಿಂದ ಆಗುವ ಪ್ರಯೋಜನಗಳು ಮತ್ತು ಅದನ್ನು ಹೇಗೆ ಮಾಡಬೇಕು ಅನ್ನೋದನ್ನ ನಾವು ನಿಮಗೆ ತೋರಿಸ್ತೀವಿ ಮುಂದೆ ಓದಿ..
ಬೆಳಿಗ್ಗೆ ಮತ್ತು ಸಂಜೆ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ದಿನನಿತ್ಯ ಟೀ ಕುಡಿದು ನಾರ್ಮಲ್ ಕಾಫಿ ಕುಡಿದು ಬೇಜಾರಾಗಿದ್ದರೆ ಇಂದು ನಾವು ನಿಮಗಾಗಿ ಅತ್ಯಂತ ವಿಶಿಷ್ಟವಾದ ಮತ್ತು ವಿಭಿನ್ನವಾದ ಮಸಾಲಾ ಕಾಫಿಯ ಬಗ್ಗೆ ಹೇಳ್ತಾ ಹೋಗ್ತೀವಿ ನೋಡಿ. ಈ ಮಸಾಲಾ ಕಾಫಿ ನಿಮ್ಮ ನಾಲಿಗೆ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಮಸಾಲಾ ಚಹಾವು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ, ಆದರೆ ಕೆಲ ಮಂದಿಗೆ ಗೊತ್ತಿರೋದಿಲ್ಲ, ಅದೇ ರೀತಿಯಲ್ಲಿ ವಿದೇಶದಲ್ಲಿ ಜನರು ಮಸಾಲಾ ಕಾಫಿಯನ್ನು ತುಂಬಾ ಇಷ್ಟಪಟ್ಟು ಕುಡಿಯಲು ಇಚ್ಚಿಸುತ್ತಾರೆ.
ಹಾಗಾದರೆ ಮಸಾಲೆ ಕಾಫಿ ಹೇಗೆ ಮಾಡ್ತಾರೆ ನೋಡೋಣ್ವ? ಇದನ್ನು ತಯಾರಿ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ: ತಾಜಾ ಕಾಫಿ ಪುಡಿ 50 ಗ್ರಾಂ, ಏಲಕ್ಕಿ ಪುಡಿ 2 ಟೀ ಸ್ಪೂನ್, ಶುಂಠಿ 3 ಟೀ ಸ್ಪೂನ್, ಹಾಲು 200 ಮಿಲಿ, ಸಕ್ಕರೆ 1.5 ಟೀಸ್ಪೂನ್, ಕ್ರೀಮ್ 4 ಟೀಸ್ಪೂನ್, ತುರಿದ ಚಾಕೊಲೇಟ್ 25 ಗ್ರಾಂ.. ಸರಿ, ಈಗ ಕಾಫಿ ತಯಾರಿಸೋದು ಹೇಗೆ ಅನ್ನೋದನ್ನ ಓದಿ.
ಮಸಾಲೆ ಕಾಫಿ ತಯಾರಿ ವಿಧಾನ
ಈ ಮಸಾಲ ಕಾಫಿಗಾಗಿ, ಮೊದಲು ನೀವು 1 ಲೀಟರ್ ನೀರನ್ನು ತೆಗೆದುಕೊಳ್ಳಿ. ನಂತರ, ಕಾಫಿ, ಶುಂಠಿ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ. ಇನ್ನೊಂದು ಪಾತ್ರೆಯಲ್ಲಿ ಹಾಲು ಮತ್ತು ಸಕ್ಕರೆ ಹಾಕಿ ಸಕ್ಕರೆ ಕರಗುವವರೆಗೆ ಕುದಿಸಿ. ನಂತರ, ಬೇಯಿಸಿದ ಹಾಲಿಗೆ ಜರಡಿ ಹಿಡಿದ ಬಿಸಿ ಕಾಫಿ ಸೇರಿಸಿ. ಅದರ ಮೇಲೆ ಸ್ವಲ್ಪ ಹಾಲಿನ ಕೆನೆ ಸೇರಿಸಿ. ಈಗ ಅದರ ಮೇಲೆ ಸ್ವಲ್ಪ ಏಲಕ್ಕಿ ಪುಡಿಯನ್ನು ಉದುರಿಸಿ. ಆನಂತರ ಒಂದು ಮೊಗ್ಗಿಗೆ ಹಾಕಿಕೊಂಡು ಅದರ ಮೇಲೆ ಸ್ವಲ್ಪ ಚಾಕೊಲೇಟ್ ಅನ್ನು ಹಾಕಿ ಈಗ ನಿಮ್ಮ ಮಸಾಲೆ ಕಾಫಿ ಸವಿಯಲು ಸಿದ್ದ.
ಮಸಾಲೆ ಕಾಫಿ ಕುಡಿಯುವುದರಿಂದ ಪ್ರಯೋಜನಗಳು
ಚಳಿಗಾಲದಲ್ಲಿ ಬಿಸಿಬಿಸಿ ಕಾಫಿಯನ್ನ ಕುಡಿಯೋದ್ರಿಂದ ಮೆದುಳು ಚುರುಕುಗೊಂಡು, ಶಕ್ತಿಯನ್ನ ಕೂಡ ಹೆಚ್ಚಿಸುತ್ತದೆ. ಕಾಫಿಯಲ್ಲಿರುವ ಕೆಫೀನ್ ಮೆದುಳು ಮತ್ತು ನರಮಂಡಲದ ಚಟುವಟಿಕೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ತೂಕ ಇಳಿಸುವ ಮನೆಮದ್ದುಗಳಲ್ಲಿ ಕಾಫಿಯೂ ಕೂಡ ಒಂದು.
ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡುವಲ್ಲಿ ಕೆಫೀನ್ ಸಕಾರಾತ್ಮಕ ಪಾತ್ರವನ್ನು ಹೊಂದಿದೆ. ಕಾಫಿಯಲ್ಲಿ ಪ್ರಮುಖವಾಗಿ ಕಂಡುಬರುವ ಕೆಫೀನ್ ಅಂಶವು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಕಾಫಿ ಪುಡಿಯನ್ನ ಮುಖಕ್ಕೆ ಹಚ್ಚೋದ್ರಿಂದ ಕಾಮತಿಯುತ ತ್ವಚೆಯನ್ನ ಪಡೆಯಬಹುದು.
ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ತಜ್ಞರು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಪವರ್ ಟಿವಿಯು ಈ ಮಾಹಿತಿಯ ಹೊಣೆಗಾರಿಕೆಯನ್ನು ಹೇಳಿಕೊಳ್ಳುವುದಿಲ್ಲ.
R.ರಮ್ಯ, ಪವರ್ ಟಿವಿ