Friday, November 22, 2024

ಚಳಿಗಾಲದ ಅಧಿವೇಶನದಲ್ಲಿ ಗಡಿ ಕದನ

ಬೆಳಗಾವಿ : ಚಳಿಗಾಲದ ಅಧಿವೇಶನ ಬಿಸಿ ಬಿಸಿ ಚರ್ಚೆಗೆ ಸಾಕ್ಷಿಯಾಯ್ತು.. ಜನರ ಸಮಸ್ಯೆ, ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲು ಕರೆಯಲಾಗಿರುವ ಅಧಿವೇಶನಕ್ಕೆ ಬೆಳಗಾವಿ ಕಿಚ್ಚು ಹೆಚ್ಚು ಕೆಂಡವಾಗಿಸಿದೆ.. ಈ ಹಿನ್ನೆಲೆಯಲ್ಲಿ ಎಂಇಎಸ್‌ ವಿರುದ್ಧ ಕಠಿಮ ಕ್ರಮಕ್ಕೆ ಪ್ರತಿಪಕ್ಷಗಳು ಒತ್ತಾಯಿಸಿದರೆ, ಬಿಜೆಪಿ ನಾಯಕರು ಫುಲ್ ಗರಂ ಆಗಿದ್ದರು.

ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರಿಂದ ಸರ್ಕಾರಕ್ಕೆ ಒತ್ತಾಯ :

ಹೆಸರಿಗಷ್ಟೇ ಇದು ಚಳಿಗಾಲದ ಅಧಿವೇಶನ.. ಆದರೆ, ಚಳಿಗಾಲಕ್ಕೆ ಕಿಚ್ಚು ಹೊತ್ತಿಸಿರುವ ಎಂಇಎಸ್‌ ಪುಂಡರ ಆಟ, ಕಲಾಪಕ್ಕೆ ಬಿಸಿ ತಟ್ಟುವಂತೆ ಮಾಡಿತ್ತು. ಒಂದರ್ಥದಲ್ಲಿ ಆಡಳಿತ ಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರು ಪುಂಡರ ಆಟಕ್ಕೆ ಬ್ರೇಕ್‌ ಹಾಕುವಂತೆ ಒತ್ತಾಯಿಸಿದರು. ಎಂಇಎಸ್ ಪುಂಡರ ಪುಂಡಾಟಕ್ಕೆ ಬ್ರೇಕ್ ಹಾಕಿ ಎಂದು ವಿರೋಧ ಪಕ್ಷಗಳು ಸದನದ ಬಾವಿಗಿಳಿದು ಆಕ್ರೋಶ ಹೊರ ಹಾಕಿದರು. ಕನ್ನಡ ಬಾವುಟ ಹೆಗಲ ಮೇಲೆ ಹಾಕಿಕೊಂಡು ಜೆಡಿಎಸ್‌ ನಾಯಕರು, ಕನ್ನಡಕ್ಕೆ ಅವಮಾನ ಮಾಡಿದ್ರೂ ಕನ್ನಡಿಗರು ಸುಮ್ಮನೆ ಇರಬೇಕಾ ಅಂತ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡಿಗರ ಕೈಗೆ ಇವರು ಸಿಕ್ಕಿದ್ರೆ ಚಿಂದಿ ಚಿಂದಿ ಆಗ್ತಾರೆ : ಈಶ್ವರಪ್ಪ

ಬಿಜೆಪಿ ನಾಯಕರು ಕೂಡ ಎಂಇಎಸ್‌ ಪುಂಡಾಟ ಹಾಗು ರಾಯಣ್ಣ ಪ್ರತಿಮೆ ಧ್ವಂಸ ಕುರಿತು ಫುಲ್‌ ಗರಂ ಆಗಿದ್ದರು. ಎಂಇಎಸ್‌ ಅಂದ್ರೆ ಮಹಾರಾಷ್ಟ್ರ ಏಕೀಕರಣ ಸಮಿತಿ ಅಲ್ಲ, ಹೇಡಿಗಳ ಸಮಿತಿ ಅಂತ ಈಶ್ವರಪ್ಪ ಅವರು ಗುಡುಗಿದ್ದಾರೆ. MES ಅಂದ್ರೆ ಮಹಾರಾಷ್ಟ್ರ ಏಕೀಕರಣ ಸಮಿತಿ ಅಲ್ಲ, ಹೇಡಿಗಳ ಸಮಿತಿ ಹೇಡಿಗಳ ಆರ್ಭಟ ಹಗಲಿನಲ್ಲಿ ನಡೆಯಲ್ಲ, ಏನಿದ್ದರೂ ರಾತ್ರಿ ವೇಳೆ.

ಕನ್ನಡಿಗರೇನೂ ಬಳೆ ತೊಟ್ಟು ಕೂತಿಲ್ಲ :

ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಕನ್ನಡಿಗರೇನೂ ಬಳೆ ತೊಟ್ಟು ಕೂತಿಲ್ಲ. ಸರ್ಕಾರ ಈ ಪುಂಡರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಅಂತ ಸದನದಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದರು.

ಗಡಿ ಸಾಮರಸ್ಯ ಕದಡುತ್ತಿರುವ ಪುಂಡರನ್ನು ಗಡಿಪಾರು ಮಾಡಿ : 

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಉಂಟು ಮಾಡಿದ ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು. ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ರಾಯಣ್ಣ ಪ್ರತಿಮೆ ಹಾಗೂ ಶಿವಾಜಿ ಮಹಾರಾಜರ ಮೂರ್ತಿಗೆ ಹಾನಿ ಉಂಟು ಮಾಡಿದವರು ಯಾರೇ ಆಗಲಿ ಅವರನ್ನು ಗಡಿಪಾರು ಮಾಡಿ ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದರು.

ಜವಾಬ್ದಾರಿಯುತ ಸರ್ಕಾರಗಳು ಇಂತಹ ಘಟನೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಬಾವುಟ ಸುಟ್ಟು ಹಾಕಿದವರ ವಿರುದ್ದ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಭಟನೆ ನೆಪದಲ್ಲಿ ಮಹನಿಯರ ಪ್ರತಿಮೆ ಮೇಲೆ ದಾಳಿ ಸಹಿಸಿಕೊಳ್ಳೋಕೆ ಆಗುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಒತ್ತಾಯಿಸಿದರು.

ಸುವರ್ಣಸೌಧದ ಆವರಣದಲ್ಲಿ ರಾಯಣ್ಣ, ಚೆನ್ನಮ್ಮ ಪ್ರತಿಮೆ :

ಎಂಇಎಸ್‌ಗೆ ನಿಷೇಧ ಹೇರುವ ವಿಚಾರದ ಬಗ್ಗೆ ಪರಿಶೀಲನೆ ಮಾಡ್ತೀವಿ.. ಗಡಿ ಕ್ಯಾತೆ ವಿಚಾರ ಇನ್ನೂ ಸುಪ್ರೀಂಕೋರ್ಟ್‌ನಲ್ಲಿದೆ. ಕ್ಯಾತೆಗಳ ಮೂಲಕ ಆ ಕೇಸ್‌ ವಿಚಾರಣೆ ಮೇಲೆ ಪ್ರಭಾವ ಬೀರುತ್ತೀವಿ ಅಂದರೆ ಅದು ಎಂಇಎಸ್‌ ಭ್ರಮೆ. ಎಲ್ಲದಕ್ಕೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತೆ. ಕಾನೂನಿನಲ್ಲಿ ಅವಕಾಶ ಇದ್ದರೆ ಎಂಇಎಸ್‌ ಮೇಲೆ ನಿಷೇಧ ಹೇರುತ್ತೇವೆ ಎಂದು ಸಿಎಂ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದರು. ಜೊತೆಗೆ, ಸುವರ್ಣಸೌಧದ ಆವರಣದಲ್ಲಿ ರಾಯಣ್ಣ, ಚೆನ್ನಮ್ಮ ಪ್ರತಿಮೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಸದ್ಯ ಎಂಇಎಸ್‌ ಪುಂಡರ ಆಟಕ್ಕೆ ಬ್ರೇಕ್‌ ಹಾಕುವ ಕಾಲ ಬಂದಿದೆ ಅಂತ ಆಡಳಿತಾರೂಢ ಪಕ್ಷದ ನಾಯಕರೇ ಹೇಳ್ತಿದ್ದಾರೆ. ಜೊತೆಗೆ, ವಿಪಕ್ಷಗಳು ಎಂಇಎಸ್‌ ನಿಷೇಧಕ್ಕೆ ಒತ್ತಾಯಿಸಿವೆ. ಇದೆಲ್ಲದರ ಮಧ್ಯೆ, ಕಾನೂನಿನಲ್ಲಿ ಅವಕಾಶ ಇದ್ದರೆ, ಕ್ರಮ ಕೈಗೊಳ್ಳುತ್ತೇನೆಂದು ಸಿಎಂ ಹೇಳಿದ್ದಾರೆ. ರಾಜಕೀಯ ಲೆಕ್ಕಾಚಾರ ಏನಾದರೂ ಸರಿಯೇ ನಾವು ಪುಂಡರಿಗೆ ತಕ್ಕ ಪಾಠ ಕಲಿಸ್ತೀವಿ ಅಂತ ಕನ್ನಡಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES