ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನದ ಕಿಚ್ಚು ಬೆಳಗಾವಿಯಲ್ಲಿ ಇನ್ನೂ ಆರಿಲ್ಲ. ಬೆಳಗಾವಿಯ ಪೀರನವಾಡಿಯಿಂದ ಅನುಗೋಳಕ್ಕೆ ಹೊರಟ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸೋ ನಿಟ್ಟಿನಲ್ಲಿ ಅನುಗೊಳದಲ್ಲಿ ಪೊಲೀಸರೇ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ನಿಷೇಧಾಜ್ಞೆ ನಡುವೆಯೇ ಕನ್ನಡಪರ ಸಂಘಟನೆಗಳು ಇಂದು ಬೆಳಗಾವಿ ಅಲ್ಲಿ ಚಲೋ ಹೋರಾಟ ಹಮ್ಮಿಕೊಂಡಿದ್ದಾರೆ. ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಲ್ಲದೇ ಇಂದು ಸದನದ ಒಳಗೂ ಪ್ರತಿಧ್ವನಿಸೋ ಸಾಧ್ಯತೆಗಳಿವೆ.
ನಾಡದ್ರೋಹಿ ಎಂಇಎಸ್ ಮತ್ತು ಶಿವಸೇನೆ ಪುಂಡರ ವಿರುದ್ಧ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಯಾರಪ್ಪಂದು ಏನೈತಿ.. ಬೆಳಗಾವಿ ನಮ್ದೈತಿ, ಜೈಜೈಜೈ ರಾಯಣ್ಣ ಎಂಬ ಘೋಷಣೆಗಳ ಸದ್ದು ಕುಂದಾನಗರಿ ಬೆಳಗಾವಿಯಲ್ಲಿ ಮಾರ್ದನಿಸಿದ್ದು, ಎಂಇಎಸ್ ಪುಂಡರು ಧ್ವಂಸಗೊಳಿಸಿದ್ದ ರಾಯಣ್ಣನ ಪ್ರತಿಮೆಯನ್ನು ಮತ್ತೆ ಮರು ಸ್ಥಾಪಿಸಲಾಗಿದೆ. ಪೂರ್ಣ ಕುಂಭಮೇಳ ಹೊತ್ತ ಮಹಿಳೆಯರು ರಾಯಣ್ಣನಿಗೆ ಆರತಿ ಬೆಳಗಿದರು, ರಾಯಣ್ಣನ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಬೆಳಗಾವಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ ಪರಿಸ್ಥಿತಿ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 22ರ ಬೆಳಗ್ಗೆ 6 ಗಂಟೆಯವರಿಗೂ 144 ಸೆಕ್ಷನ್ ಮತ್ತೆ ವಿಸ್ತರಿಸಲಾಗಿದೆ. ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿರುವ ಬೆನ್ನಲ್ಲೇ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಕನ್ನಡ ಸಂಘಟನೆಗಳು ಸುವರ್ಣ ಸೌಧ ಚಲೋ ಹಮ್ಮಿಕೊಂಡಿವೆ.
ಬೆಳಗಾವಿಯಲ್ಲಿ ಬೇಳೆ ಬೇಯಿಸೋದು ಬೇಡ.. ರಾಯಣ್ಣನ ಪ್ರತಿಮೆಯನ್ನು ಧ್ವಂಸ ಮಾಡಿದ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ. ಅದನ್ನು ಬಿಟ್ಟು ಕನ್ನಡಪರ ಸಂಘಟನೆಗಳ ಮೇಲೆ ಪ್ರತಾಪ ಬೇಡ ಅಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಇತ್ತ, ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಆರೋಪದ ನಂತರ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದನ್ನು ವಿರೋಧಿಸಿ ಬೆಳಗಾವಿ, ಮುಂಬೈ, ಕೊಲ್ಲಾಪುರ, ಸಾಂಗ್ಲಿಯಲ್ಲಿ ಪ್ರತಿಭಟನೆಗಳು ನಡೆದಿದ್ದು, ಮಹಾರಾಷ್ಟ್ರದ ಎಲ್ಲಾ ಪಕ್ಷಗಳ ಮುಖಂಡರು ಕೃತ್ಯವನ್ನು ಖಂಡಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ. ಹಾಗೇ, ಘಟನೆಗೆ ಕಾರಣರಾದವರ ವಿರುದ್ಧ ಮತ್ತು ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನರ ಮೇಲಿನ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇನ್ನು, ಠಾಕ್ರೆ ಉದ್ಧಟತನ ಟ್ವೀಟ್ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಫುಲ್ ಗರಂ ಆಗಿದ್ದಾರೆ. ಉದ್ದವ್ ಠಾಕ್ರೆ ಮೊದಲು ಭಾರತೀಯನಾ ಅಂತ ಕೇಳಿಕೊಳ್ಳಲಿ. ಜೊತೆಗೆ, ಕಾಂಗ್ರೆಸ್‌ನವರು ರಾಜಕಾರಣ ಮಾಡುವುದಕ್ಕಾಗಿ ಬೆಂಕಿ ಹಚ್ಚುತ್ತಿದ್ದಾರೆಂದು ಆಕ್ರೋಶ ಹೊರ ಹಾಕಿದರು.
ಬೆಳಗಾವಿಯಲ್ಲಿ ಎಂಇಎಸ್ ಗುಂಡಾಗಿರಿ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದು, ಇದೇ ಅಧಿವೇಶನದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು ಅಂತ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಸದ್ಯ ಬೆಳಗಾವಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಪೋಲಿಸರು ನಗರದಾದ್ಯಂತ ಬಿಗಿ ಭದ್ರತೆಯನ್ನ ಕೈಗೊಂಡಿದ್ದಾರೆ. ಮತ್ತೆ ನಿಷೇದಾಜ್ಞೆ ಅವಧಿಯನ್ನು ವಿಸ್ತರಿಸಲಾಗಿದೆ. ಇದೆಲ್ಲದರ ಮಧ್ಯೆ, ಠಾಕ್ರೆ ಮನವಿಯಂತೆ ಮೋದಿ ಮಧ್ಯ ಪ್ರವೇಶ ಮಾಡ್ತಾರಾ..? ಠಾಕ್ರೆ ಉದ್ದಟತನಕ್ಕೆ ಕನ್ನಡಿಗರು ಸರಿಯಾದ ಪಾಠ ಕಲಿಸ್ತಾರಾ ಕಾದು ಅನ್ನೋದನ್ನು ನೋಡಬೇಕಿದೆ.