Monday, November 18, 2024

ಅಪ್ಪುವಿನ ಹೆಸರಿನಲ್ಲಿ ಈ ಯುವಕ ಮಾಡಿದ ಕೆಲಸ..?

ಕೊಪ್ಪಳ : ಮದುವೆ ಹಾಗೂ ಸಣ್ಣಪುಟ್ಟ ಶುಭ ಕಾರ್ಯಕ್ರಮಗಳಿಗೆ ಅನುಕೂಲವಾಗಲಿ ಎಂದು ಅಪ್ಪು ಹೆಸರಲ್ಲಿ ಅಭಿಮಾನಿಯೊಬ್ಬ ಉಚಿತವಾಗಿ ಸಿಂಟೆಕ್ಸ್ ನೀಡಲು ಮುಂದಾಗಿದ್ದಾರೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಅಪ್ಪು ಅಪ್ಪಟ ಅಭಿಮಾನಿಯಾಗಿರುವ ಚನ್ನಬಸವ ರೆಡ್ಡಿ ಮುಸಾಲಿ ಇವರು ಅಪ್ಪು ಹೆಸರಲ್ಲಿ ಉಚಿತ ಸಿಂಟೆಕ್ಸ್ ನೀಡಲು ಮುಂದಾಗಿದ್ದಾರೆ. ಅಪ್ಪು ಹೆಸರಲ್ಲಿ ಏನಾದರೂ ಒಂದು ಒಳ್ಳೆ ಕೆಲಸ ಮಾಡಬೇಕಂತಾ ತುಂಬಾ ದಿನದಿಂದ ಆಲೋಚನೆಯಲ್ಲಿ ಚನ್ನಬಸವ ತೊಡಗಿದ್ದನಂತೆ. ಕಳೆದ ಮೂರು ದಿನದ ಹಿಂದಷ್ಟೇ ಶುಭ ಕಾರ್ಯಕ್ರಮಗಳಿಗೆ ಉಚಿತ ಸಿಂಟೆಕ್ಸ್ ನೀಡುವ ಆಲೋಚನೆ‌ ಬಂದಿದ್ದಂತೆ, ಆಲೋಚನೆ‌ ಬಂದಿದ್ದೆ ತಡ ಕೂಡಲೇ ಎರಡು ಸಿಂಟೆಕ್ಸ್ ತಂದಿದ್ದಾರೆ.

ಎರಡು ಸಾವಿರ ಲೀಟರ್ ಸಾಮರ್ಥ್ಯದ ಒಂದು ಸಿಂಟೆಕ್ಸ್ ಹಾಗೂ ಒಂದು ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಇನ್ನೊಂದು ಸಿಂಟೆಕ್ಸ್. ಇನ್ನೂ ಸಿಂಟೆಕ್ಸ್​ಗೆ ಅಪ್ಪು ಫ್ರೀ ಸಿಂಟೆಕ್ಸ್ ಎಂದು ನಾಮಕರಣ ಮಾಡಿ ಶುಭ ಸಮಾರಂಭಗಳಿಗೆ ಸಿಂಟೆಕ್ಸ್ ಬೇಕಾದಲ್ಲಿ ಸಂಪರ್ಕಿಸಿ ಎಂದು ಮೊಬೈಲ್ ನಂಬರ್ ಹಾಗೂ ಲಭ್ಯವಿರುವ ಸ್ಥಳದ ಮಾಹಿತಿಯನ್ನು ಸಿಂಟೆಕ್ಸ್ ಮೇಲೆ ಬರೆಸಿದ್ದಾರೆ.

ಇನ್ನೂ ಯುವಕನ ಈ ಕಾರ್ಯಕ್ಕೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ನಮಗೆ ಹೆಮ್ಮೆ ಅನ್ನಿಸುತ್ತದೆ ನಮ್ಮೂರ ಯುವಕರು ಅಪ್ಪು ಪ್ರೇರಣೆಯಿಂದಾಗಿ ಇಂತಹ ಒಳ್ಳೆ ಕೆಲಸ ಮಾಡ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇಂತಹ ವಿಭಿನ್ನ ಕಾರ್ಯಕ್ಕೆ ಮುಂದಾಗಬೇಕು. ಅಪ್ಪು ನಮ್ಮಂತಹ ಬಡ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರೆ. ನಾವು ಅಪ್ಪು ಹೆಸರಲ್ಲಿ ಎಷ್ಟು ಸಹಾಯ ಮಾಡಿದರು ಕಡಿಮೆನೇ ಇದೀಗ ನಮ್ಮೂರ ಒಬ್ಬ ಯುವಕ ಉಚಿತ ಸಿಂಟೆಕ್ಸ್ ನೀಡುವುದರ ಮೂಲಕ ಮಾದರಿಯಾಗಿದ್ದಕ್ಕೆ ಖುಷಿಯಾಗ್ತಿದೆ ಅನ್ನುತ್ತಾರೆ ಗ್ರಾಮಸ್ಥರು.

ಇಷ್ಟು ದಿನ ಗ್ರಾಮದಲ್ಲಿ ನಡೆಯುವ ಸರ್ಕಾರಿ ಹಾಗೂ ಖಾಸಗಿಯ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಕುಡಿಯುವ ನೀರು ತುಂಬಿಸಲು ಬಾಡಿಗೆ ಕೊಟ್ಟು ಸಿಂಟೆಕ್ಸ್ ತರಬೇಕಾದ ಪರಿಸ್ಥಿತಿ ಇತ್ತು. ಇದೀಗ ಯುವಕನ ಈ ಅಪ್ಪು ಫ್ರೀ ಸಿಂಟೆಕ್ಸ್​ನಿಂದ ಎಲ್ಲೊ ಒಂದು ಕಡೆ ಒಂದು ಸಣ್ಣ ಜವಾಬ್ದಾರಿ ಕಡಿಮೆ ಆದಂತಾಗಿದೆ. ಯುವಕನ ಕೆಲಸ ಚಿಕ್ಕದ್ದಾದರೂ ಸಹಾಯ ಮಾಡುವವರಿಗೆ ಮಾದರಿಯಾಗಿದೆ ಅಂದರೆ ತಪ್ಪಾಗಲಾರದು.

ಶುಕ್ರಾಜ ಕುಮಾರ್ ಕೊಪ್ಪಳ

RELATED ARTICLES

Related Articles

TRENDING ARTICLES