ಬೆಂಗಳೂರು: ಇತ್ತೀಚೆಗೆ ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬಿಟ್‌ಕಾಯಿನ್ ವಿವಾದದ ಕೇಂದ್ರ ಬಿಂದು ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್ ಶ್ರೀಕಷ್ಣ ಅಲಿಯಾಸ್ ಶ್ರೀಕಿ ರಾಜ್ಯ ಸರ್ಕಾರದ ಇ ಪ್ರಕ್ಯೂರ್‌ಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿ 11 ಕೋಟಿ ದೋಚಿರುವುದು ಸಿಐಡಿ ತನಿಖೆಯಲ್ಲಿ ರುಜುವಾತಾಗಿದೆ. ಇಡೀ ರಾಜ್ಯದ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿ, ಮೋದಿಯೂ ಇತ್ತ ತಿರುಗಿ ನೋಡುವಂತೆ ಮಾಡಿದ್ದ ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಿ ಶ್ರೀಕೃಷ್ಣ ಜನ್ಮಾಷ್ಟಮಿ ಸೇರುವ ದಿನಗಳು ಹತ್ತಿರವಾದಂತಿದೆ.
ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಕೇಂದ್ರ ಅಪರಾಧ ತನಿಖಾ ದಳ, ನಗರದ ಸಿಐಡಿ ವಿಶೇಷ ನ್ಯಾಯಾಲಯಕ್ಕೆ ಶ್ರೀಕಿ ಸೇರಿದಂತೆ 18 ಮಂದಿ ಆರೋಪಿಗಳ ವಿರುದ್ಧ ಸೋಮವಾರ 500 ಪುಟಗಳ ದೋಷಾರೋಪ ಪಟ್ಟಿಸಲ್ಲಿಸಿದೆ. ಇದರಲ್ಲಿ ವರ್ಗಾವಣೆ ಸಂಬಂಧಪಟ್ಟಂತೆ ಬ್ಯಾಂಕ್ ದಾಖಲೆ ಹಾಗೂ ತಾಂತ್ರಿಕ ಪುರಾವೆ ಲಗತ್ತಿಸಲಾಗಿದೆ.
ಇ-ಪ್ರೊಕ್ಯೂರ್‌ಮೆಂಟ್ ಸೆಲ್, ಸೆಂಟರ್ ಫಾರ್ ಇ-ಗವರ್ನೆನ್ಸ್‌ನಿಂದ ಹಣ ಹ್ಯಾಕ್ ಮಾಡಲಾಗಿದೆ ಎಂದು ಪ್ರಕರಣ ದಾಖಲು ಮಾಡಲಾಗಿದೆ. 11.55 ಕೋಟಿ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದಾರೆಂದು ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಹ್ಯಾಕರ್ ಶ್ರೀಕೃಷ್ಣ, ಹೇಮಂತ್ ಮುದ್ದಪ್ಪ, ಪ್ರಸಿದ್ಧ್ ಶೆಟ್ಟಿ, ಸುನೀಶ್ ಹೆಗ್ಡೆ ಮತ್ತು ನಾಗಪುರದ ಕಂಪನಿ ಸೇರಿ 18 ಆರೋಪಿಗಳ ವಿರುದ್ಧ 500 ಪುಟಗಳ ಚಾರ್ಚ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಸಿಐಡಿ ಚಾರ್ಜ್‌ಶೀಟನ್ನು ಹ್ಯಾಕಿಂಗ್ ಮತ್ತು ಡೇಟಾ ಕಳ್ಳತನ ಆರೋಪದಡಿ ಸಲ್ಲಿಸಿದೆ. IPC ಸೆಕ್ಷನ್ 420, ಐಟಿ ಕಾಯ್ದೆಯ ಸೆಕ್ಷನ್ 43 & ಸೆಕ್ಷನ್ 66ರ ಅಡಿಯಲ್ಲಿ ಈ ಚಾರ್ಜ್‌ಶೀಟನ್ನು ಸಲ್ಲಿಸಲಾಗಿದೆ.