ಬೆಳಗಾವಿ : ಸುವರ್ಣಸೌಧದಲ್ಲಿ ನಡೆಯುತ್ತಿರೋ ಅಧಿವೇಶನ, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗ್ಬೇಕಿತ್ತು.. ಆದ್ರೆ, ಸಾಲು ಸಾಲು ಪ್ರತಿಭಟನೆಗಳಿಗೆ ಸಾಕ್ಷಿಯಾಗ್ತಿದೆ. ರಾಜ್ಯ ಸರ್ಕಾರದ ಭ್ರಷ್ಟಚಾರದ ವಿರುದ್ಧ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. ಸುವರ್ಣಸೌಧದ ಆವರಣ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು.
ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಕಾವೇರುತ್ತಿದೆ. ಇದರ ನಡುವೆ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಸರ್ಕಾರ ಸರ್ಕಸ್ ನಡೆಸ್ತಿದೆ. ಇತ್ತ, ವಿಪಕ್ಷಗಳು ಕೂಡ ಸರ್ಕಾರದ ವಿರುದ್ಧ ಸಮರ ಸಾರಿವೆ. ಈ ನಡುವೆ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ಪರ್ಸೆಂಟೇಜ್ ಫೈಟ್ ತಾರಕಕ್ಕೇರಿದೆ. ರಾಜ್ಯ ಬಿಜೆಪಿ ಸರ್ಕಾರ ಕಾಮಗಾರಿಗಳಲ್ಲಿ ಶೇಕಡಾ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ. ಹೀಗಂತ ಕಾಂಗ್ರೆಸ್ ಪದೇ ಪದೇ ಆರೋಪಿಸುತ್ತಲೇ ಇದೆ.. ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಿದ್ರು. ಗುರುವಾರ ಬೆಳಗ್ಗೆ ಬೆಳಗಾವಿ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೆ ಟ್ರ್ಯಾಕ್ಟರ್ಗಳಲ್ಲಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದ್ರು. ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬಳು ಗೇಟ್ ಮೇಲೆ ಏರಲು ಯತ್ನಿಸಿದ್ದರು.
ಸುವರ್ಣಸೌಧದ ಪ್ರವೇಶದ್ವಾರದೊಳಗೆ ತೆರಳಲು ಯತ್ನಿಸಿದ ಪ್ರತಿಭಟನಾಕಾರರನ್ನ ಪೊಲೀಸರು ಬ್ಯಾರಿಕೇಡ್ಗಳನ್ನ ಹಾಕಿ ಗೇಟ್ಗಳನ್ನು ಮುಚ್ಚಿ ತಡೆದರು, ಈ ಬಗ್ಗೆ ಮಾತ್ನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಪಟ್ಟು ಹಿಡಿದ್ರು.
ಇನ್ನು, ಟ್ರ್ಯಾಕ್ಟರ್‌ನಲ್ಲಿ ಬಂದ ಕಾಂಗ್ರೆಸ್ ನಾಯಕರನ್ನ ತಡೆದಿದ್ರಿಂದ, ಪೊಲೀಸರು-ಕೈ ಕಾರ್ಯಕರ್ತರ ನಡುವೆ ವಾಗ್ವಾದ, ಮಾತಿನ ಚಕಮಕಿ ತಾರಕಕ್ಕೇರಿತು. ಈ ವೇಳೆ ಸುವರ್ಣಸೌಧದ ಮುಂದೆಯೇ ಪ್ರತಿಭಟನೆ ಮಾಡಿದ್ರು.. ಪ್ರತಿಭಟನೆ ಕಾವು ಜೋರಾಗುತ್ತಿದ್ದಂತೆ ಎಚ್ಚೆತ್ತ ಸ್ಪೀಕರ್ ಕಾಗೇರಿ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕರೆ ಮಾಡಿ ಟ್ರ್ಯಾಕ್ಟರ್‌ನಲ್ಲಿ ಒಳಗೆ ಬರಲು ಸಮ್ಮತಿ ಸೂಚಿಸಿದ್ರು.. ಬಳಿಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಆಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದಾರೆ.. ಸರ್ಕಾರದ ವಿರುದ್ಧ ಸರಣಿ ರ್‍ಯಾಲಿ ನಡೆಸಲು ನಿರ್ಧರಿಸಿರೋದಾಗಿ ತಿಳಿಸಿದ್ದರು.
ಈ ನಡುವೆ ಡಿಕೆಶಿ ಹಾಗೂ ಸಿ.ಟಿ.ರವಿ ನಡುವೆ ವಾಕ್ಸಮರ ಜೋರಾಗಿತ್ತು.. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅಲ್ಲ ಲೂಟಿ ರವಿ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ರೆ.. ಇದಕ್ಕೆ ತಿರುಗೇಟು ಕೊಟ್ಟಿರೋ ಸಿ.ಟಿ.ರವಿ, ನಾನು ಸಿಟಿ ಅಲ್ಲ ಲೂಟಿ ಅಂದ್ರೆ, ನನಗೆ ಡಿಕೆ ಅಲ್ಲ ಕೇಡಿ ಅಂತ ಹೇಳೋಕೆ ಬರುತ್ತೆ.. ಅವರು ಹಾಗೆ ಹೇಳ್ತಾರೆ ಅಂತ ನಾನು ಅವರನ್ನು ಕೇಡಿ ಅಂದ್ರೆ ಸರಿಯಾಗಲ್ಲ ಎಂದು ವ್ಯಂಗ್ಯವಾಡಿದ್ರು.
ಸದ್ಯ ಸರ್ಕಾರದ ವಿರುದ್ಧದ 40 ಪರ್ಸೆಂಟೇಜ್ ಜಟಾಪಟಿ ತಾರಕಕ್ಕೇರುತ್ತಿದೆ.. ಈ ಬಗ್ಗೆ ತನಿಖೆಗೆ ನಾವು ಸಿದ್ಧ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.. ಆದ್ರೆ, ದಾಖಲೆ ಇಲ್ಲದೆ ತನಿಖೆ ಮಾಡೋದು ಹೇಗೆ ಎಂದು ಪ್ರಶ್ನೆ ಮಾಡ್ತಿದ್ಧಾರೆ.. ಆದ್ರೆ, ಈ ಪರ್ಸೆಂಟೇಜ್ ಫೈಟ್ ಮತ್ಯಾವ ಹಂತಕ್ಕೆ ಹೋಗುತ್ತೋ ಅನ್ನೋದೇ ಸದ್ಯದ ಕುತೂಹಲ.