Monday, December 23, 2024

ರಷ್ಯಾಗೆ ಎಚ್ಚರಿಕೆ ಕೊಟ್ಟಿವೆ ಜಿ-7 ರಾಷ್ಟ್ರಗಳು!

ಉಕ್ರೇನ್​.. ಒಂದು ಕಾಲದಲ್ಲಿ ರಷ್ಯಾದ ಭಾಗವಾಗಿದ್ದ, ರಷ್ಯಾದ ಆರ್ಥಿಕ ಪರಿಸ್ಥಿತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಈ ದೇಶ ಈಗ ರಷ್ಯಾಗೆ ಕಂಟಕವಾಗೋದಕ್ಕೆ ಹೊರಟಿದೆ. ಹೌದು ಉಕ್ರೇನ್​ ಅಂದ ತಕ್ಷಣ ಅಲ್ಲಿನ ಭವ್ಯವಾದ ಇತಿಹಾಸ, ಅಲ್ಲಿನ ಪ್ರಾಕೃತಿಕ ಸೌಂದರ್ಯ, ಹಾಗು ಅಲ್ಲಿನ ಜನ ಜೀವನದ ಶೈಲಿ ಬಹುತೇಕ ಮನಸ್ಸಿಗೆ ಬರುತ್ತೆ. ಆದರೆ ಈ ಉಕ್ರೇನ್​ ಅನ್ನೋ ರಾಷ್ಟ್ರ, ಸೋವಿಯತ್​​ನಿಂದ ಹೊರಗೆ ಬಂದ ಮೇಲೆ ಹಲವು ಸಮಸ್ಯೆಗಳನ್ನ ಇಂದಿಗೂ ಎದುರಿಸುತ್ತಲೇ ಇದೆ. ಇದಕ್ಕೆ ಉಕ್ರೇನ್​ ತನ್ನ ಸುತ್ತಲಿನ ರಾಷ್ಟ್ರಗಳೊಂದಿಗೆ ಹೊಂದಿರುವ ಗಡಿ ವಿವಾದ, ಹೌದು.. ಈ ಉಕ್ರೇನ್​ ಒಂದು ದೇಶವಾಗಿ ಉದಯವಾದಗಿನಿಂದಲೂ ಮಾಸ್ಕೋವನ್ನ ಹೊರತುಪಡಿಸಿ ಬೆಲರಾಸ್​, ರೊಮೆನಿಯಾ, ಮೋಲ್ಡೋವಾ, ಸ್ಲೊವೋಕಿಯ, ಹಾಗು ಪೋಲ್ಯಾಂಡ್​ ಜೊತೆ ಒಂದಲ್ಲ ಒಂದು ರೀತಿಯಾದ ಗಡಿ ಸಮಸ್ಯೆಯನ್ನ ಹೊಂದಿದೆ, ಆದರೆ ರಷ್ಯಾದ ಕಾರಣದಿಂದಾಗಿ ತಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ ಅಂತ ಈ ರಾಷ್ಟ್ರಗಳು ತೋರ್ಪಡಿಸಿಕೊಳ್ತಾ ಇದೆ.

ಸದ್ಯಕ್ಕೆ ಕಳೆದ ಕೆಲ ವರ್ಷಗಳಿಂದ ರಷ್ಯಾ ಹಾಗು ಉಕ್ರೇನ್​ ನಡುವಿನ ಸಂಘರ್ಷ ತಾರಕ್ಕೇರಿದೆ. ಹೀಗಾಗಿ ಕಳೆದ ಕೆಲವು ತಿಂಗಳುಗಳ ಹಿಂದೆ ರಷ್ಯಾ ಉಕ್ರೇನ್ ಗಡಿಯಲ್ಲಿ​ ತನ್ನ ಬಾರೀ ಸೈನ್ಯವನ್ನ ಜಮಾವಣೆ ಮಾಡಿದೆ. ಇದು ಕೇವಲ ಉಕ್ರೇನ್​ ಮಾತ್ರವಲ್ದೇ, ಯೂರೋಪ್​ ರಾಷ್ಟ್ರಗಳ ಆತಂಕಕ್ಕೂ ಕೂಡ ಕಾರಣವಾಗಿದೆ. ಹಾಗಂತ ಉಕ್ರೇನ್​ ರಕ್ಷಣೆಗೆ ಯೂರೋಪಿಯನ್​ ರಾಷ್ಟ್ರಗಳು ನಿಂತಿಲ್ಲ, ಒಂದು ವೇಳೆ ರಷ್ಯಾ ಉಕ್ರೇನ್​ ಮೇಲೆ ದಾಳಿ ನಡೆಸಿ, ಉಕ್ರೇನ್​ ಅನ್ನ ಆಕ್ರಮಿಸಿ ಬಿಟ್ಟರೆ, ಅದು ಯೂರೋಪ್​ ರಾಷ್ಟ್ರಗಳಿಗೆ ಕಂಟಕವಾಗುತ್ತೆ. ಹಾಗಾಗಿ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿರುವ ಯೂರೋಪ್​ ಒಕ್ಕೂಟ ರಷ್ಯಾ ವಿರುದ್ಧ ತಿರುಗಿ ಬಿದ್ದಿದೆ. ಇದರ ಮಧ್ಯೆ ರಷ್ಯಾ ಮುಂದಿನ ವರ್ಷ ಉಕ್ರೇನ್​ ಮೇಲೆ ದಾಳಿ ನಡೆಸಲಿದೆ. ಒಂದು ವೇಳೆ ಈ ದಾಳಿ ಯಶಸ್ವಿಯಾದರೆ, ರಷ್ಯಾ ಉಕ್ರೇನ್​ ಅನ್ನ ಸಂಪೂರ್ಣವಾಗಿ ಆಕ್ರಮಿಸಲಿದೆ, ಹಾಗೇನಾದರು ಆದ್ರೆ ಯೂರೋಪಿನ ಮೇಲೆ ರಷ್ಯಾ ಹಿಡಿತ ಸಾಧಿಸುವ ಸಾಧ್ಯತೆ ಇದೆ ಅಂತ ಅಮೆರಿಕದ ಗೂಢಚಾರಿಗಳು ಎಚ್ಚರಿಕೆಯನ್ನ ನೀಡಿದ್ದಾರೆ.

ಅಮೆರಿಕದ ಗೂಢಚಾರಿ ಸಂಸ್ಥೆಗಳು ನೀಡಿರುವ ಮಾಹಿತಿಗೆ ಅನುಗೂಣವಾಗಿ, ಇದೀಗ ರಷ್ಯಾ ತನ್ನ ಬಲಿಷ್ಟ ಅಸ್ತ್ರಗಳನ್ನ ಉಕ್ರೇನ್​ ಗಡಿಯಲ್ಲಿ ನಿಯೋಜಿಸಿದೆ. ಯಾವುದೇ ಕ್ಷಣದಲ್ಲಿ ಬೇಕಾದ್ರು ಯುದ್ಧಕ್ಕೆ ಸಿದ್ಧವಾಗಿರುವ ಹಾಗೆ ತಯಾರಿಯನ್ನ ಕೂಡ ಮಾಡಿಟ್ಟುಕೊಂಡಿದೆ. ಇದನ್ನ ಗಮನಿಸಿರುವ ಜಿ-7 ರಾಷ್ಟ್ರಗಳು ರಷ್ಯಾಗೆ ನೇರವಾಗಿ ಎಚ್ಚರಿಕೆಯನ್ನ ನೀಡಿದೆ. ಇದ್ರ ಮಧ್ಯದಲ್ಲಿ ಯೂರೋಪಿಯನ್​ ಯೂನಿಯನ್​ ಕೂಡ ರಷ್ಯಾ ವಿರುದ್ಧ ಕಿಡಿ ಕಾರೋದಕ್ಕೆ ಶುರು ಮಾಡಿದೆ. ಇದ್ರ ಮಧ್ಯದಲ್ಲಿ ನ್ಯಾಟೋ ದೇಶಗಳು ಕೂಡ ರಷ್ಯಾ ವಿರುದ್ಧ ಸಿಡಿಮಿಡಿಗೊಂಡಿದೆ. ಹೀಗೆ ಒಂದೊಂದೆ ದೇಶ ರಷ್ಯಾ ವಿರುದ್ಧ ಮಾತನಾಡಿದಾಗ್ಲೂ ಅಮೆರಿಕ ಏನೂ ಮಾತನಾಡಿರ್ಲಿಲ್ಲ. ಇದಕ್ಕೆ ಕಾರಣ ಅಮೆರಿಕೆ ಹಾಗು ರಷ್ಯಾ ನಡುವೆ ನಡೆಯ ಬೇಕಿದ್ದ ಸಭೆ.. ಹೌದು ಡಿಸೆಂಬರ್​ 7ರಂದು ಅಮೆರಿಕ ಹಾಗು ರಷ್ಯಾದ ನಡುವೆ ವಿವಿಧ ವಿಚಾರಗಳಿಗೆ ಸಂಬಂಧ ಪಟ್ಟ ಸಭೆಯನ್ನ ನಡೆಸಲಾಗಿತ್ತು, ಈ ಸಭೆಯಲ್ಲಿ ಎರಡೂ ದೇಶಗಳ ಸಂಬಂಧ ಸುಧಾರಣೆ ಸೇರಿದ ಹಾಗೆ ಆರ್ಥಿಕ ನಿರ್ಬಂಧ ಹಿಂತೆಗೆತ ಹಾಗು ಪರಸ್ಪರ ಸಹಕಾರ ಸಂಬಂಧಗಳ ಕುರಿತು ಚರ್ಚಿಸಲಾಗಿದೆ ಅಂತ ಹೇಳಲಾಗಿದೆ. ಇನ್ನು ಇದೇ ವೇಳೆ ಉಕ್ರೇನ್​ ವಿಚಾರವನ್ನ ಮಾತನಾಡಲಾಗಿದೆ ಅಂತ ಹೇಳಲಾಗಿದ್ದು, ಈ ಬಗ್ಗೆ ಯಾವ ರೀತಿ ಚರ್ಚೆ ನಡೆದಿದೆ ಅನ್ನೋ ಮಾಹಿತಿ ಇದುವರೆಗು ಲಭ್ಯವಾಗಿಲ್ಲ.

ಆದ್ರೆ ಈ ಬಗ್ಗೆ ಮೊನ್ನೆ ಮೊನ್ನೆಯಷ್ಟೆ ಅಮೆರಿಕ ಅಧ್ಯಕ್ಷರ ಬಳಿ ಪ್ರಶ್ನೆಯನ್ನ ಕೇಳಲಾಗಿದೆ.. ಇದಕ್ಕೆ ಅಧ್ಯಕ್ಷ ಜೋ ಬೈಡನ್​ ಪ್ರತಿಕ್ರಿಯೆ ನೀಡಿದ್ದು, ಉಕ್ರೇನ್​ ಮೇಲೆ ದಾಳಿ ನಡೆಸಿದ್ರೆ ರಷ್ಯಾ ಕಠೀಣ ಪರಿಸ್ಥಿತಿಗಳನ್ನ ಎದುರಿಸಬೇಕಾಗುತ್ತೆ. ಹಾಗೆ ಇನ್ನಷ್ಟು ಆರ್ಥಿಕ ದಿಗ್ಭಂಧನಕ್ಕೆ ಒಳಗಾಗಬೇಕಾಗುತ್ತೆ ಅಂತ ಎಚ್ಚರಿಕೆಯನ್ನ ನೀಡಿದ್ದಾರೆ. ಯಾವಾಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಈ ಎಚ್ಚರಿಕೆಯನ್ನ ನೀಡಿದ್ರೋ, ಆಗ್ಲೇ ರಷ್ಯಾಗೆ ಆತಂಕ ಶುರುವಾದ ಹಾಗೆ ಕಾಣ್ತಾ ಇದೆ. ಯಾಕಂದ್ರೆ ಇದೇ ಪರಿಸ್ಥಿತಿ ಮುಂದುವರೆದ್ರೆ ರಷ್ಯಾ ಅರ್ಧ ಜಗತ್ತಿನ ವಿರೋಧ ಕಟ್ಟಿಕೊಂಡ ಹಾಗಾಗುತ್ತೆ, ಇದ್ರ ಜೊತೆಗೆ ಮುಂದಿನ ದಿನಗಳಲ್ಲಿ ಆರ್ಥಿಕ ದಿಗ್ಭಂದನದಿಂದ ರಷ್ಯಾ ಹೊರ ಬಂದ್ರೆ, ಆಗ ಬಹುತೇಕ ರಾಷ್ಟ್ರಗಳೋಂದಿಗೆ ಆರ್ಥಿಕ ಒಪ್ಪಂದ ಸೇರಿದ ಹಾಗೆ ಸಂಬಂಧ ಸುಧಾರಣೆಯನ್ನ ನಡೆಸಬೇಕಾಗುತ್ತೆ. ಹಾಗಾಗಿ ಈ ವಿಚಾರವನ್ನ ಗಮನದಲ್ಲಿರಿಸಿಕೊಂಡ ರಷ್ಯಾ ತಾನು ಗಡಿ ರಕ್ಷಣೆಗಾಗಿ ಸೇನೆ ನಿಯೋಜಿಸಿರೋದಾಗಿ ಹೇಳಿಕೊಂಡಿದೆ. ಇದ್ರ ಜೊತೆಗೆ ರಷ್ಯಾ ತನ್ನ ಮೇಲೆ ಬಂದಿರುವ ಆರೋಪಗಳನ್ನ ಅಲ್ಲಗೆಳೆದಿದ್ದು, ಇದು ಪಾಶ್ಚಿಮಾತ್ಯ ರಾಷ್ಟ್ರಗಳು ಹಬ್ಬಿಸಿರೊ ಗಾಳಿಸುದ್ಧಿ, ಅವರಿಗೆ ರಷ್ಯಾಫೋಬಿಯಾ ಆಗಿದೆ ಅಂತ ಕಟುವಾಗಿ ಟೀಕಿಸಿದೆ.

ಒಟ್ಟಾರೆಯಾಗಿ ರಷ್ಯಾದ ಹಾಗು ಅಮೆರಿಕದ ನಡುವೆ ಈಗಷ್ಟೇ ಮಾತಿನ ಯುದ್ಧ ಆರಂಭವಾಗಿದೆ. ಆದರೆ ಈಗ ರಷ್ಯಾ ಆರ್ಥಿಕ ನಿರ್ಬಂಧಕ್ಕೆ ಒಳಗಾಗಿರೋದ್ರಿಂದ ಈಗ ಯಾವ ದೇಶದ ಜೊತೆಗೂ ವೈರತ್ವ ಕಟ್ಟಿಕೊಳ್ಳೊದಕ್ಕೆ ತಯಾರಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ರಷ್ಯಾ ಉಕ್ರೇನ್​ ವಿಚಾರದಲ್ಲಿ ಯಾವ ರೀತಿಯಾಗಿ ನಿರ್ಧಾರವನ್ನ ತೆಗೆದುಕೊಳ್ಳುತ್ತೆ ಅನ್ನೋದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

RELATED ARTICLES

Related Articles

TRENDING ARTICLES