Monday, December 23, 2024

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ್ರಾ ಸಿಎಂ ಬೊಮ್ಮಾಯಿ..?

25 ಕ್ಷೇತ್ರಗಳಿಗೆ ನಡೆದ ವಿಧಾನಪರಿಷತ್​ ಚುನಾವಣೆ, ಮೂರು ಪಕ್ಷಗಳಿಗೂ ಅಗ್ನಿ ಪರೀಕ್ಷೆಯಾಗಿತ್ತು. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್​ ಸಮಬಲದ ಹೋರಾಟ ನಡೆಸಿವೆ. ಆದ್ರೆ, ಜೆಡಿಎಸ್​ ಮಾತ್ರ ತನ್ನ ಭದ್ರಕೋಟೆಗಳನ್ನ ಕಳೆದುಕೊಂಡು ಮಕಾಡೆ ಮಲಗಿದೆ. ಹಾಗಾದ್ರೆ, ಕಾಂಗ್ರೆಸ್​ ಲೆಕ್ಕಾಚಾರ ವರ್ಕೌಟ್​ ಆಗಿದ್ದು ಹೇಗೆ.? ಬೀಸೋ ದೊಣ್ಣೆಯಿಂದ ಸಿಎಂ ಪಾರಾಗಿದ್ದು ಹೇಗೆ.?

ಬಸವರಾಜ ಬೊಮ್ಮಾಯಿ ಸಿಎಂ ಪಟ್ಟಕ್ಕೇರಿದ ಮೇಲೆ ಮೊದಲು ಎದುರಿಸಿದ್ದು ಹಾನಗಲ್‌, ಸಿಂಧಗಿ ಉಪ ಚುನಾವಣೆ. ಈ ಎರಡೂ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬರಲಿವೆ ಅಂತ ಊಹಿಸಿಕೊಂಡು ಹಾಕಿದ್ದ ಲೆಕ್ಕಾಚಾರ ಬಿಜೆಪಿಗೆ ಭಾರೀ ಹೊಡೆತ ನೀಡಿತ್ತು. ಕಾಂಗ್ರೆಸ್‌ ಹಾಗು ಬಿಜೆಪಿ ತಲಾ ಒಂದೊಂದು ಕ್ಷೇತ್ರ ಗೆದ್ದುಕೊಂಡಿದ್ವು.. ಅದ್ರಲ್ಲೂ ಬೊಮ್ಮಾಯಿ ತವರು ಕ್ಷೇತ್ರ ಹಾನಗಲ್‌ನಲ್ಲಿ ಸೋಲು ಕಂಡಿದ್ದು, ಸಿಎಂಗೆ ಭಾರಿ ಮುಖಭಂಗವಾಗಿತ್ತು. ಅದಾದ ನಂತರ ಸಿಎಂಗೆ ಸವಾಲಾಗಿದ್ದು, ಈ ಪರಿಷತ್‌ ಚುನಾವಣೆಯಲ್ಲಿ ಕನಿಷ್ಠ 12 ಕ್ಷೇತ್ರವಾದ್ರೂ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು.. ಒಂದು ವೇಳೆ, ಕೈ ಚೆಲ್ಲಿದ್ರೆ, ಬಿಜೆಪಿ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗ ಬೇಕಿತ್ತು. ಇದೇ ಕಾರಣಕ್ಕೆ ಪದೇ ಪದೆ ಸಿಎಂ ಬದಲಾವಣೆ ವಿಚಾರಕ್ಕೂ ಈ ಚುನಾವಣೆಗೂ ತಳುಕು ಹಾಕಲಾಗ್ತಿತ್ತು. ಒಂದು ವೇಳೆ ಹೀನಾಯ ಸೋಲು ಕಂಡಿದ್ರೆ ಸಿಎಂ ಪಟ್ಟಕ್ಕೆ ಕುತ್ತು ಅಂತಾನೇ ಹೇಳಲಾಗ್ತಿತ್ತು.. ಇದೀಗ, 11 ಕ್ಷೇತ್ರ ಗೆಲ್ಲಿಸಿಕೊಂಡಿರುವ ಬೊಮ್ಮಾಯಿ ನೇತೃತ್ವದ ಆಡಳಿತಾರೂಢ ಬಿಜೆಪಿಗೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.

ಜೆಡಿಎಸ್‌ ಜೊತೆ ಮೈತ್ರಿ ಲೆಕ್ಕಾಚಾರ ಏನಾಯ್ತು :

25 ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಟ 15 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಅಬ್ಬರಿಸುತ್ತಿದ್ದ ಬಿಜೆಪಿ ನಾಯಕರು, 15ರ ಟಾರ್ಗೆಟ್ ತಲುಪಲು ವಿಫಲವಾದರೂ ಕೂಡಾ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಫಸ್ಟ್ ಕ್ಲಾಸ್ ಸಾಧನೆಯನ್ನೇ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ಇದ್ದ ಮತ್ತೊಂದು ಕೊರಗು ಬಹುಮತದ ಕೊರತೆ.. ಹೌದು, ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿಗೆ ವಿಧಾನ ಪರಿಷತ್ನಲ್ಲಿ ಬಹುಮತದ ಕೊರತೆ ಕಾಡುತ್ತಿತ್ತು. ಹೀಗಾಗಿ, ವಿಧಾನಸಭೆಯಲ್ಲಿ ಪಾಸ್ ಆದ ಬಹುತೇಕ ಮಸೂದೆಗಳಿಗೆ ವಿಧಾನ ಪರಿಷತ್ನಲ್ಲೂ ಗ್ರೀನ್ ಸಿಗ್ನಲ್ ಕೊಡಿಸಲು ಜೆಡಿಎಸ್‌ನ ನೆರವು ಬೇಕಾಗುತ್ತಿತ್ತು. ಬಿಜೆಪಿಗೆ ಪರಿಷತ್ನಲ್ಲಿ ಬಹುಮತ ಸಾಧಿಸಲು 12 ಸ್ಥಾನಗಳ ಕೊರತೆ ಕಾಡುತ್ತಿತ್ತು. ಆದ್ರೆ, ಇದೀಗ 12 ಸ್ಥಾನಗಳನ್ನು ಗೆಲ್ಲುವ ಮೂಲಕ, ಸಂಖ್ಯಾಬಲ 38ಕ್ಕೇರಿಸಿಕೊಳ್ಳುವ ಮೂಲಕ ಬಿಜೆಪಿ ಮೇಲ್ಮನೆಯಲ್ಲೂ ಬಹುಮತ ಸಾಧಿಸಿದಂತಾಗಿದೆ.
ಜೆಡಿಎಸ್ ಕಳೆದುಕೊಂಡಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಹಾಸನದಲ್ಲಿ ರೇವಣ್ಣ & ಕುಟುಂಬದ ಸತತ ಪ್ರಯತ್ನದಿಂದಾಗಿ ಸೂರಜ್ ಗೆದ್ದಿರೋದು ಬಿಟ್ಟರೆ, ಇನ್ನೆಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ. ಚುನಾವಣೆ ನಡೆದ 25 ಸ್ಥಾನಗಳ ಪೈಕಿ 4ರಲ್ಲಿ ಜೆಡಿಎಸ್ ಸದಸ್ಯರಿದ್ದರು. ಆದ್ರೆ, ಇದೀಗ ಆ ಸಂಖ್ಯೆ ಕೇವಲ 1ಕ್ಕೆ ಬಂದು ನಿಂತಿದೆ. ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್ ಮಾನ ಉಳಿಸಿದ್ದಾರೆ ಸೂರಜ್ ರೇವಣ್ಣ.

ಲಿಂಗಾಯತ ಮತಗಳ ಮೂಲಕ ಸಹೋದರನನ್ನ ಗೆಲ್ಲಿಸಿದ್ರಾ ಲಕ್ಷ್ಮಿ :

ಕುಂದಾನಗರಿಯ ಜಿದ್ದಾ ಜಿದ್ದಿನ ಕಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿನ ನಗೆ ಬೀರಿದ್ದಾರೆ. ಪಿಎಲ್ಡಿ ಬ್ಯಾಂಕ್ ಚುನಾವಣೆ ನಂತರ ಎರಡನೇ ಬಾರಿ ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ ಮುಖಭಂಗವಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್‌ ಅವರನ್ನು ಸೋಲಿಸಲೇಬೇಕೆಂಬ ಹಠದಲ್ಲಿ ಸಹೋದರ ಲಖನ್ ಅವರನ್ನು ರಮೇಶ್ ಜಾರಕಿಹೋಳಿ ಅಖಾಡಕ್ಕೆ ನಿಲ್ಲಿಸಿದ್ದರು. ಇಬ್ಬರು ಘಟಾನುಘಟಿ ನಾಯಕರ ಫೈಟ್ನಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋತಿದ್ದಾರೆ. ಈ ಮೂಲಕ ಸಾಹುಕಾರನಿಗೆ ಸವಾಲು ಹಾಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಜಯದ ನಗೆ ಬೀರಿದ್ದಾರೆ. ವಿಚಿತ್ರ ಅಂದ್ರೆ, ಬೆಳಗಾವಿ ಜಿಲ್ಲೆಯಲ್ಲಿ 13 ಬಿಜೆಪಿ ಶಾಸಕರಿದ್ರೂ ಕಾಂಗ್ರೆಸ್‌ ಗೆಲುವು ಸಾಧಿಸಿದೆ.. ತಾವೇ ತೋಡಿದ್ದ ಹಳ್ಳಕ್ಕೆ ರಮೇಶ್‌ ಜಾರಕಿಹೊಳಿ ಬಿದ್ದಂತಾಗಿದೆ.

ಇತ್ತ ಕಳೆದ ಬಾರಿಗಿಂತ ಒಂದು ಸ್ಥಾನ ಹಿಂದೆ ಇದ್ರೂ ಸಹ ಕಾಂಗ್ರೆಸ್‌ಗೆ ಒಂಥರ ಬೂಸ್ಟ್  ಕೊಟ್ಟಿದೆ ಪರಿಷತ್ ಚುನಾವಣೆಯ ಪಲಿತಾಂಶ.. ಯಾಕೆಂದರೆ ಅಡಳಿತ ಪಕ್ಷ ಬಿಜೆಪಿಗೆ ಸೆಡ್ಡು ಹೊಡೆದು ಎಲ್ಲಾ ಕಡೆ ಮೊದಲ ಪ್ರಾಶಸ್ತ್ಯ ಮತಗಳಿಂದ ಕೈ ಕಲಿಗಳು ಜಯ ಸಾಧಿಸಿದ್ದಾರೆ.‌‌ ಇದು ಇತ್ತೀಚೆಗೆ ಕಾಂಗ್ರೆಸ್ ಇಮೇಜ್ ಹೆಚ್ಚುತ್ತಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಿದ್ರೆ ಜಯ ಖಚಿತ ಅನ್ನೋದು ಇದರಿಂದ ಗೊತ್ತಾಗಿದೆ. ಇನ್ನು ಬೆಳಗಾವಿಯಲ್ಲಿ ಕಾಂಗ್ರೆಸ್ – ಬಿಜೆಪಿ ಎರಡಕ್ಕೂ ಜಾರಕಿಹೊಳಿ ಫ್ಯಾಮಿಲಿ ಮಾರಕವಾಗಿ ಪರಿಣಮಿಸಿದ್ದು, ಪಕ್ಷೇತರರಾಗಿ ಲಖನ್ ಜಾರಕಿಹೊಳಿ ಲಕ ಲಕ ಎನ್ನುತ್ತಿದ್ದಾರೆ. ಹಾಗಾದರೆ, ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರ ತಂತ್ರ ಏನಾಗಿತ್ತು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ.

RELATED ARTICLES

Related Articles

TRENDING ARTICLES