ಬೆಂಗಳೂರು: ಬೆಂಗಳೂರಿನಲ್ಲಿ ಕ್ರೈಂ ಎನ್ನುವುದು ಮಾಮೂಲಿಯಾಗಿಬಿಟ್ಟಿದೆ. ಅಪರಾಧ ಬರಿ ಕೊಲೆ ಸುಲಿಗೆ ವಿಷಯದಲ್ಲಿ ಮಾತ್ರ ಆಗುತ್ತಿಲ್ಲ. ಬಡ್ಡಿಗೆ ದುಡ್ಡು ತೆಗೆದುಕೊಂಡವರೂ ಇಂದು ಸಮಯಕ್ಕೆ ವಾಪಸ್ಸು ಕೊಡದಿದ್ದರೆ ಅವನ ಪ್ರಾಣಕ್ಕೆ ಕುತ್ತು ಎನ್ನುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಬಡ್ಡಿ ವಿಷಯದಲ್ಲಿ ಯತೀಶ್ ಎಂಬ ಯುವಕನ ಮೇಲೆ ವಾಸು ಮತ್ತು ಅವನ ತಂಡ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ.
ಹಲ್ಲೆ ನಡೆಸಿದ ವಾಸು ಅಲಿಯಾಸ್ ಗುಟ್ಟಹಳ್ಳಿ ವಾಸು ಖ್ಯಾತ ನಿರ್ಮಾಪಕನೊಬ್ಬನ ಭಾವಮೈದ. ಸಿಲಿಕಾನ್ ಸಿಟಿಯಲ್ಲಿ ಅತ್ಯಂತ ಪ್ರಭಾವಿಯಾಗಿರುವ ವಾಸುವಿಗೆ ಹಲವಾರು ಐಪಿಎಸ್ ಅಧಿಕಾರಿಗಳು ಚಿರಪರಿಚಿತ ಎನ್ನಲಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಬೆನ್ನಿಗಿದೆ ಎಂದು ವಾಸು ಕಳೆದ ತಿಂಗಳು 15ನೆಯ ತಾರೀಖು ಯತೀಶ್ ಕೆಲಸ ಮಾಡುತ್ತಿದ್ದ ಜಾಗಕ್ಕೆ ತನ್ನ ತಂಡದೊಂದಿಗೆ ಹೋಗಿ ಅವನ ಮೇಲೆ ಹಲ್ಲೆ ನಡೆಸಿದ್ದಾನೆ. ವಾಸು ತನ್ನ ತಂಡದೊಂದಿಗೆ ಎಷ್ಟು ಭೀಕರವಾಗಿ ಹಲ್ಲೆ ನಡೆಸಿದ್ದಾನೆ ಎಂದರೆ ಆ ಹಲ್ಲೆಯಿಂದ ಯತೀಶ್ ನಡುಗಿಹೋಗಿದ್ದಾನೆ.
ಹಲ್ಲೆ ನಡೆಸುವಾಗ ಅವರ ಕಾಲಿಗೆ ಬಿದ್ದು ಕ್ಷಮೆ ಬೇಡಿದರೂ ವಾಸು ಮತ್ತು ತಂಡ ಹಲ್ಲೆಯನ್ನು ನಿಲ್ಲಿಸಿಲ್ಲ. ಯತೀಶ್ನನ್ನು ಅರೆಬೆತ್ತಲೆಗೊಳಿಸಿ ಹಾಕಿಸ್ಟಿಕ್ಕಿನಿಂದ ಮನಸೊ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಇದೀಗ ವಾಸು ಮತ್ತು ತಂಡದ ವಿರುದ್ಧ ಯತೀಶ್ ತಂದೆ ಕೆಜಿ ನಗರ ಪೊಲೀಸ್ ಠಾಣೆಯಲ್ಲಿ ನನ್ನ ಮಗನ ಮೇಲೆ ವಾಸು ಮತ್ತು ತಂಡ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಮತ್ತು ಆಗಿನಿಂದ ನನ್ನ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದಾರೆ.
ವಾಸು ಖ್ಯಾತ ನಿರ್ಮಾಪಕ ಉಮಾಪತಿ ಮತ್ತು ಅವನ ಸಹೋದರನ ಕೊಲೆ ಸ್ಕೆಚ್ ಕೇಸಿನಲ್ಲೂ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಈ ವಿಷಯವಾಗಿ ಹೊಟೆಲ್ ಕ್ಯಾಶಿಯರ್ ಉದಯಕುಮಾರ್ಗೆ ವಾಸು ಸುಪಾರಿ ಅಡ್ವಾನ್ಸ್ ಕೊಟ್ಟಿದ್ದಾನೆ ಎನ್ನಲಾಗಿದೆ. ಉದಯಕುಮಾರ್ ಪೊಲೀಸರಿಗೆ ನೀಡಿರುವ ಸ್ವಇಚ್ಛಾ ಹೇಳಿಕೆಯಲ್ಲಿ ವಾಸು ಹೆಸರನ್ನು ಹೇಳಿದ್ದಾನೆ. ಹತ್ಯೆ ಸುಪಾರಿಗೆ ವಾಸು 35ಸಾವಿರ ರೂಪಾಯಿಗಳ ಅಡ್ವಾನ್ಸ್ ಸಹ ಕೊಟ್ಟಿದ್ದಾರೆ ಎಂದು ಉದಯಕುಮಾರ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಸದ್ಯ ಅರೆಸ್ಟ್ ಆಗುವ ಭಯದಿಂದ ವಾಸು ಪೊಲೀಸರಿಂದ ತಲೆಮರೆಸಿಕೊಂಡಿದ್ದಾನೆ.
ಓಂಪ್ರಕಾಶ್ ನಾಯಕ್, ಪವರ್ ಟಿವಿ