ಬೆಂಗಳೂರು: ಕೊರೋನ ಇತ್ತೀಚೆಗೆ ವಿದ್ಯಾರ್ಥಿಗಳ ಮೇಲೆ ತನ್ನ ಆಕ್ರಮಣವನ್ನು ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆದ್ದರಿಂದ ಸರ್ಕಾರ ಶಾಲಾ ಕಾಲೇಜುಗಳಿಗೆ ಕೆಲವು ಗೈಡ್ಲೈನ್ಸ್ಗಳನ್ನು ಬಿಡುಗಡೆ ಮಾಡಿದೆ. ಇದೀಗ ಬೆಂಗಳೂರಿನ ಖಾಸಗಿ ಶಾಲೆಯೊಂದು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತನಗಿಷ್ಟ ಬಂದಂತೆ ವರ್ತನೆ ಮಾಡಿದೆ. ಈ ರೀತಿ ಸರ್ಕಾರದ ನಿಯಮಗಳಿಗೆ ಸಡ್ಡು ಹೊಡೆದಿರುವುದು ಜಾಲಹಳ್ಳಿಯಲ್ಲಿರುವ ಪ್ರತಿಷ್ಟಿತ ಕ್ಲೂನಿ ಕಾನ್ವೆಂಟ್ ಶಾಲೆ.
ಕೊರೊನ 3ನೆಯ ಅಲೆ ಬರುವ ಸಂಭಂವವಿರುವುದರಿಂದ, ಅದರಲ್ಲೂ ಅದು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡುವ ಸಂಭವ ಅಧಿಕವಾಗಿರುವುದರಿಂದ ಸರ್ಕಾರ ಎಲ್ಲ ಶಾಲೆಗಳಿಗೂ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರವಾಸಗಳನ್ನು ಆಯೋಜನೆ ಮಾಡದಂತೆ ಆದೇಶ ಹೊರಡಿಸಿತ್ತು. ಆದರೆ ಕ್ಲೂನಿ ಕಾನ್ವೆಂಟ್ ಶಾಲೆ ಸರ್ಕಾರದ ಈ ಆದೇಶವನ್ನು ಧಿಕ್ಕರಿಸಿ ಸುಮಾರು 130 ಮಕ್ಕಳನ್ನು ಹೈದರಾಬಾದ್ ಪ್ರವಾಸಕ್ಕೆ ಕರೆದೊಯ್ದಿದೆ.
ನಾಲ್ಕು ದಿನಗಳ ಕಾಲದ ಹೈದರಾಬಾದ್ ಪ್ರವಾಸಕ್ಕೆ ಕರೆದೊಯ್ದಿರುವ ಶಾಲೆ ಇದಕ್ಕಾಗಿ ಪ್ರತಿಯೊಬ್ಬ ಮಕ್ಕಳಿಂದ 10 ಸಾರಿರ ರೂಪಾಯಿಗಳನ್ನು ವಸೂಲು ಮಾಡಿದೆ. ಆದ್ದರಿಂದ ಬೆಂಗಳೂರು ಉತ್ತರ ತಾಲ್ಲೂಕಿನ ಬಿಇಒ ಕಮಲಾಕರ್ ಟಿಎನ್ ಶಾಲೆ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಸಿ.ಆರ್.ಪಿಗೆ ಈ ಕುರಿತು ವರದಿ ಕೊಡಲು ಸೂಚಿಸಿದ್ದಾರೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ನಡುವೆ ಶಾಲೆಯ ಪ್ರಾಂಶುಪಾಲರು ತಾವು ಪ್ರವಾಸಕ್ಕೆ ಕರೆದೊಯ್ದದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.