ಬೆಂಗಳೂರು: ಇನ್ನೂ ಬೇಸಿಗೆ ತುಂಬಾ ದೂರವಿದ್ದರೂ ಈಗಲೇ ವಿದ್ಯುತ್ ದರ ಏರಿಕೆಗೆ ಬೆಸ್ಕಾಂ ತಯಾರಿ ನಡೆಸಿದೆ.ಬೆಲೆಯೇರಿಕೆ ಬಗ್ಗೆ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿರುವ ಬೆಸ್ಕಾಂ ಅಧಿಕಾರಿಗಳು, ಬೆಸ್ಕಾಂ ವ್ಯಾಪ್ತಿಯಲ್ಲಿ 1.50 ರೂ ವಿದ್ಯುತ್ ದರ ಹೆಚ್ಚಳಕ್ಕೆ ಬೇಡಿಕೆಯಿರಿಸಿದ್ದಾರೆ. ಬೆಸ್ಕಾಂ ಈ ಬೇಡಿಕೆಯಿರಿಸಿರುವುದು ಆಗಲೇ ಹೇಳಿದಂತೆ ನಷ್ಟದ ನೆಪವೊಡ್ಡಿ. ಕಳೆದ ಬಾರಿ 1 ರೂಪಾಯಿ 39 ಪೈಸೆ ಹೆಚ್ಚು ಮಾಡಲು ಪ್ರಸ್ತಾವನೆ ಇರಿಸಿದ್ದ ಬೆಸ್ಕಾಂ ಈ ಬಾರಿ 11 ಪೈಸೆ ಹೆಚ್ಚಿಗೆ ಸೇರಿಸಿ 1.50 ರೂ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ದರ ಹೆಚ್ಚಳಕ್ಕೆ ಕೆಇಆರ್ಸಿ ಏನು ಹೇಳುತ್ತೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಸರ್ಕಾರ ತನ್ನ ವ್ಯವಹಾರವನ್ನು ಪ್ರಜೆಗಳಿಗೋಸ್ಕರ ಲಾಭ ನಷ್ಟ ನೋಡದೆ ಮಾಡಬೇಕೆ ಹೊರತು, ಬರಿ ಲಾಭದ ದೃಷ್ಟಿಯಿಂದ ಮಾಡಿದರೆ ಆಗ ಅದಕ್ಕೂ, ಖಾಸಗಿ ಮಾಲೀಕರಿಗೂ ಏನು ವ್ಯತ್ಯಾಸ ಉಳಿಯುವುದಿಲ್ಲ. ಈ ಸಣ್ಣ ಸತ್ಯವನ್ನು ಸರ್ಕಾರಕ್ಕೆ ಅರ್ಥಮಾಡಿಸುವಲ್ಲಿ ಸಾರ್ವಜನಿಕರು ವಿಫಲರಾಗುತ್ತಿರುವದೇ ಈ ರೀತಿಯ ಬೆಲೆಯೇರಿಕೆಗೆ ಕಾರಣ. ಸರ್ಕಾರ ತನ್ನ ಯಾವುದೇ ಇಲಾಖೆಯಲ್ಲಿ ನಷ್ಟವಾದರೂ ಅದನ್ನು ಜನರ ತಲೆಯ ಮೇಲೆಯೇ ಹೇರುವುದು ಇತ್ತೀಚಿನ ಸಂಪ್ರದಾಯ. ಒಂದೊಮ್ಮೆ ಅದು ಸಾಧ್ಯವಾಗದಿದ್ದರೆ ಇಡೀ ಇಲಾಖೆಯನ್ನೇ ಇಂಡಿಯನ್ ಏರ್ಲೈನ್ಸ್ ರೀತಿ ಮಾರಿಬಿಡಲು ಅದು ರೆಡಿ. ಸರ್ಕಾರದ ಆಸ್ತಿಯೆಂದರೆ ಅದು ಸಾರ್ವಜನಿಕ ಆಸ್ತಿ. ಅಂದರೆ ಅದು ನಮ್ಮೆಲ್ಲರ ಆಸ್ತಿ. ಸರ್ಕಾರ ಪರೋಕ್ಷವಾಗಿ ಹೇಳುವುದೇನೆಂದರೆ ಒಂದೊ ನಾವು ಬೆಲೆ ಹೆಚ್ಚಿಸಿದರೆ ಒಪ್ಪಿಕೊಂಡು ಪಾವತಿಸಿ. ಇಲ್ಲವೆ ನಾವು ಮಾರುತ್ತೇವೆ, ಆಮೇಲೆ ಅನುಭವಿಸಿ! ಈಗ ನಮಗೆಲ್ಲ ಅತ್ಯಗತ್ಯವಾದ ವಿಧ್ಯುತ್ ಕೊಡುವ ಬೆಸ್ಕಾಂ ಇಲಾಖೆಯೂ ಇದನ್ನೇ ಹೇಳುತ್ತಿದೆ.