ಬೆಂಗಳೂರು: ಬೆಲಿಯೆ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಇತ್ತೀಚೆಗೆ ಹಲವಾರು ಕಡೆ ಬಳಸುವಂತಾಗಿದೆ. ಸರ್ಕಾರದ ಅಧಿಕಾರಿಗಳು, ಮಂತ್ರಿಗಳು ಸರ್ಕಾರಿ ಖಜಾನೆಯನ್ನೇ ಲೂಟಿ ಮಾಡಿದರೆ, ಇಲ್ಲೊಬ್ಬ ಸೆಕ್ಯೂರಿಟಿ ತಾನು ಕಾವಲು ಕಾಯುವ ಅಪಾರ್ಟ್ಮೆಂಟನ್ನೇ ಲೂಟಿ ಮಾಡುವ ಗ್ಯಾಂಗಿನ ಲೀಡರ್ ಆಗಿದ್ದಾನೆ. ಕರಣ್ ಬಿಸ್ವಾ ಎಂಬುವವನು ಹೆಣ್ಣೂರಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ.
ಅಪಾರ್ಟ್ಮೆಂಟ್ನಲ್ಲಿದ್ದ ಜನರು ಹೊರಗಡೆ ಹೋಗುವಾಗ ಸೆಕ್ಯುರಿಟಿಗೆ ನಾವು ಹೊರಗಡೆ ಹೋಗುತ್ತಿದ್ದೇವೆ ಸ್ವಲ್ಪ ಸರಿಯಾಗಿ ನೋಡಿಕೊಳ್ಳಪ್ಪ ಎಂದು ಹೇಳುತ್ತಿದ್ದರು. ಅವರು ಹಾಗೆ ಹೇಳುತ್ತಿದ್ದಂತೆ ಅಲರ್ಟ್ ಆಗುತ್ತಿದ್ದ ಕರಣ್ ಬಿಸ್ವಾ! ಏಕೆಂದರೆ ಅಪಾರ್ಟಮೆಂಟಿನಲ್ಲಿ ಜನರು ಹೊರಗಡೆ ಹೋಗಿರುವ ಖಾಲಿ ಫ್ಲಾಟ್ಗಳನ್ನು ಗುರುತಿಸಿ ಅವುಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ನ ಲೀಡರ್ರೆ ಈ ಸೆಕ್ಯೂರಿಟಿಯೆ ಕರಣ್ ಬಿಸ್ವಾ.
ಜನರು ಹೊರಹೋಗಿರುವ ಫ್ಲಾಟ್ಗಳ ಬಗ್ಗೆ ಮಾಹಿತಿ ಸಿಕ್ಕತಕ್ಷಣ ಸೆಕ್ಯುರಿಟಿ ಮಾಡುತ್ತಿದ್ದ ಮೊದಲ ಕೆಲಸವೆಂದರೆ ಬಾಂಬೆಯಲ್ಲಿದ್ದ ಕಳ್ಳತನ ಮಾಡುವ ತನ್ನ ತಂಡಕ್ಕೆ ಮಾಹಿತಿ ಕೊಡುತ್ತಿದ್ದ. ಅವರು ಬಂದು ತಮ್ಮ ಕೈಚಳಕ ತೋರಿ ಫ್ಲ್ಯಾಟ್ ಕ್ಲೀನ್ ಮಾಡಿ ಹೋಗುತ್ತಿದ್ದರು. ಸೆಕ್ಯೂರಿಟಿ ತನಗೇನೂ ಗೊತ್ತೇ ಇಲ್ಲವೆಂಬಂತೆ ತನ್ನ ಪಾಡಿಗೆ ತಾನು ಇದ್ದುಬಿಡುತ್ತಿದ್ದ.
ಇಂಥ ಹಲವಾರು ಘಟನೆಗಳ ನಂತರ ಇದೀಗ ಹೆಣ್ಣೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸೆಕ್ಯುರಿಟಿಯೇ ಈ ಗ್ಯಾಂಗ್ ಲೀಡರ್ ಎನ್ನುವುದನ್ನು ಪತ್ತೆಹಚ್ಚಿದ್ದಾರೆ. ಉಳಿದ ಆರೋಪಿಗಳಾದ ಹಿಕಮತ್ಶಾಹಿ, ರಾಜು ಬಿ.ಕೆ ಅಲಿಯಾಸ್ ಚಾಮ್ಡಿ, ಜೀವನ್ ಮತ್ತು ಗೋರುಕ್ ಕಾಲು ಎಂಬವರನ್ನು ಬಂಧಿಸಿ ಕಂಬಿಗಳ ಹಿಂದೆ ತಳ್ಳಿದ್ದಾರೆ. ಆರೋಪಿಗಳ ಬಳಿಯಿಂದ 9.3 ಲಕ್ಷ ಹಣ ಮತ್ತು 25 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.