Saturday, November 23, 2024

ಫೈನಾನ್ಸ್ ಕಂಪನಿಯಿಂದ ಭಾರಿ ಮೊತ್ತದ ವಂಚನೆ

ಬೆಂಗಳೂರು: ಬೆಲೆಯೆ ಎದ್ದು ಹೊಲ ಮೇಯ್ದ ಮತ್ತೊಂದು ಸುದ್ದಿ! ಇಲ್ಲಿ ಸಾಲ ನೀಡುವ ಫೈನಾನ್ಸ್ ಕಂಪನಿಯೇ ಕಸ್ಟಮರ್​ನ ಹಣವನ್ನು ಲೂಟಿ ಮಾಡಿದೆ. ಅದೂ ಅಷ್ಟಿಷ್ಟಲ್ಲ, ಬರೋಬ್ಬರಿ 1ಕೋಟಿ 81 ಲಕ್ಷ ರೂಪಾಯಿಗಳಷ್ಟು ಭಾರಿ ಹಣ!! ಫ್ಯೂಚರ್ ಕ್ರೈಸ್ಟ್ ಎಂಬ ಈ ಫೈನಾನ್ಸ್ ಕಂಪನಿ ಇಷ್ಟು ದೊಡ್ಡ ಮೊತ್ತವನ್ನು ವಂಚನೆಯ ಮೂಲಕ ಗುಳುಂ ಮಾಡಲು ಅನುಸರಿಸಿದ ಮಾರ್ಗ ಕೇಳಿದರೆ ನೀವು ಬೆಚ್ಚಿಬೀಳ್ತೀರ!

ಬ್ಯೂಸಿನೆಸ್​ಗಾಗಿ 100 ಕೋಟಿ ಸಾಲಕ್ಕಾಗಿ ಹುಡುಕಾಡ್ತಿದ್ದ ಹೈದರಾಬಾದ್ ಮೂಲದ ಮೆಂಥೆನಾ ತರುಣ್ ಎಂಬ ವ್ಯಕ್ತಿ. ಈ ವೇಳೆ ಆತನ ವಾವ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪನಿಯಲ್ಲಿ ಸಾಲ ಕೊಡ್ತಾರೆ ಎಂದು ಸಲಹೆ ನೀಡಿದ್ದ.

ಫ್ಯೂಚರ್ ಕ್ರೈಸ್ಟ್ ಕಂಪನಿ  100 ಕೋಟಿ ಸಾಲ  ಕೊಡಲು 1.81 ಕೋಟಿ ಬಡ್ಡಿ ಹಣವನ್ನು ಮುಂಚಿತವಾಗಿ ಕೊಡಬೇಕು ಎಂದು ಅವನಿಂದ ಹಣವನ್ನು ವಸೂಲು ಮಾಡಿದೆ. ನೂರು ಕೋಟಿ ಸಾಲ ಸಿಗ್ತಿದೆ ಎಂದು ತರುಣ್ ಎರಡು ಕಂತುಗಳಲ್ಲಿ 90 ಲಕ್ಷದಂತೆ ಬಡ್ಡಿ ಕಟ್ಟಿದ್ದಾನೆ. ಅವನ ಹಣ ತಮ್ಮ ಅಕೌಂಟ್​ಗೆ ಬರ್ತಿದ್ದಂತೆಯೇ ತಮ್ಮ ಆಟ ಶುರುಮಾಡಿಕೊಂಡಿದೆ ಕಂಪನಿ. ಈಗ ಸಾಲವೂ ಕೊಡದೆ, ಬಡ್ಡಿ ಹಣವನ್ನು ವಾಪಸ್ಸೂ ಕೊಡದೆ ಆಟವಾಡಿಸ್ತಿದೆ ಕಂಪನಿ. ಕಂಪನಿ ಮುಖ್ಯಸ್ಥ ಕಾರ್ತಿವೇಲನ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾನೆ ತರುಣ್.   ತಮಿಳುನಾಡು ಮೂಲದ ಆರೋಪಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಫೋನ್ ಸ್ವಿಚ್​ಆಫ್ ಮಾಡಿಕೊಂಡಿದ್ದಾನೆ.

ಕಂಪನಿಯಲ್ಲಿ ತಮಿಳುನಾಡು ಮೂಲದ ಆರು ಉದ್ಯೋಗಿಗಳು ಹಾಗೂ ಬೆಂಗಳೂರು ಮೂಲದ ಇಬ್ಬರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇವರ ಪೈಕಿ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಂಚಿಸುವ ಉದ್ದೇಶದಿಂದಲೇ ಈ ಕಂಪನಿಯನ್ನು ಓಪನ್ ಮಾಡಲಾಗಿದೆ ಎಂಬುದು ಪೊಲೀಸರ ಅಭಿಪ್ರಾಯ. ಈಗಾಗಲೇ ಪ್ರಕರಣದ ಸಂಬಂಧ 30 ಲಕ್ಷ ರೂಪಾಯಿಯನ್ನು ಫ್ರೀಜ್ ಮಾಡಲಾಗಿದೆ ಹಾಗೂ ಮುಖ್ಯ ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES