ಬೆಂಗಳೂರು: “ಆ ದಿನಗಳಲ್ಲಿ” ಅಂದರೆ 80-90 ರ ದಶಕದಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಅತಿಯಾಗಿತ್ತು. ಅಂದಿನ ಕುಖ್ಯಾತ ರೌಡಿಗಳಾಗಿದ್ದ ಜಯರಾಜ್, ಕೊತ್ವಾಲ್, ಆಯಿಲ್ ಕುಮಾರ್ ಇವರುಗಳ ಹೆಸರುಗಳನ್ನು ನೀವು ಕೇಳಿರಬಹುದು. ನಂತರದ ದಿನಗಳಲ್ಲಿ ಬೆಂಗಳೂರಿನಲ್ಲಿ ನಡುರಸ್ತೆಯಲ್ಲಿ ಮರ್ಡರ್ ಮಾಡುವಂಥ ರೌಡಿಗಳು ಕಡಿಮೆಯಾಗಿದ್ದರು. ಆದರೆ ಈಗ ಕೆಲವು ವರ್ಷಗಳಿಂದ ಆ ರೀತಿಯ ರೌಡಿಶೀಟರ್ಗಳು ಮತ್ತೆ ತಲೆಯೆತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಬೆಂಗಳೂರಿನಲ್ಲಿ ಬುಧುವಾರ ಕುಖ್ಯಾತ ರೌಡಿಶೀಟರ್ ಮೇಲೆ ಹಾಡುಹಗಲೇ ನಾಲ್ಕೈದು ರೌಡಿಗಳು ಮುಗಿಸಲು ಸ್ಕೆಚ್ ಹಾಕಿ ಅಟ್ಯಾಕ್ ಮಾಡಿದ್ದಾರೆ. ಆದರೆ ಅದೃಷ್ಟವಶಾತ್ ರೌಡಿಶೀಟರ್ ಅಟ್ಯಾಕ್ನಿಂದ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ.
ಹೀಗೆ ಅಟ್ಯಾಕ್ ಆದ ರೌಡಿಶೀಟರ್ ಹೆಸರು ಜೆಸಿಬಿ ನಾರಾಯಣ ಅಂತ. ಹುಳಿಮಾವು ಠಾಣೆ ರೌಡಿಶೀಟರ್ ಈತ. ಹುಳಿಮಾವು ಠಾಣಾ ವ್ಯಾಪ್ತಿಯ ಡಿಎಲ್ಎಫ್ ರಸ್ತೆಯಲ್ಲಿ ಹಾಡುಹಗಲೇ ನಾಲ್ಕೈದು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಈತನ ಮೇಲೆ ಮಚ್ಚು ಲಾಂಗ್ ಹಿಡಿದು ಅಟ್ಯಾಕ್ ಮಾಡಿದ್ದಾರೆ. ಮೊದಲೇ ಕಾದು ಕೂತಿದ್ದ ಗ್ಯಾಂಗ್ ನಾರಾಯಣ ತನ್ನ ಕಾರಿನಲ್ಲಿ ರಸ್ತೆಗಿಳಿಯುತ್ತಿದ್ದಂತೆಯೇ ಅವನ ಮೇಲೆ ಮತ್ತೊಂದು ಕಾರಿನಿಂದ ಅಡ್ಡ ಹಾಕಿ ಮಚ್ಚು ಲಾಂಗಿನಿಂದ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಆದರೆ ಅಪಾಯದ ವಾಸನೆಯನ್ನು ಗ್ರಹಿಸಿದ ಜೆಸಿಬಿ ನಾರಾಯಣ ತಕ್ಷಣ ಕಾರನ್ನು ರಿವರ್ಸ್ ತೆಗೆದುಕೊಂಡು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ. ಸ್ಕೆಚ್ ಮಿಸ್ ಆಗ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಇದೆಲ್ಲವೂ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ದೂರನ್ನು ಆಧರಿಸಿ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.