Monday, May 20, 2024

ಶ್ರೀಕಿ ಎಂಬ ಅತಿ ಬುದ್ದಿವಂತನೂ, ಪೆಂಗ ಪೊಲೀಸರೂ

ಬೆಂಗಳೂರು:   ಶ್ರೀಕಿ ಎಂಬ ಅತಿಬುದ್ದಿವಂತನ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು. ಇದೀಗ ಶ್ರೀಕಿಯನ್ನು ತಪ್ಪಿಸಿಕೊಳ್ಳಲು ತಾವೆ ಸಹಕರಿಸಿರುವ ಪೊಲೀಸರು ಇದೀಗ ಅವನು ಕೊಟ್ಟು ಹೋಗಿರುವ ಲ್ಯಾಪ್​ಟ್ಯಾಪ್​ಗಳನ್ನು ಇರಿಸಿಕೊಂಡು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಜೀವನಭೀಮಾನಗರ ಪೊಲೀಸರು ನವಂಬರ್ 15ರಂದು ಮಿರರ್ ಇಮೇಜ್ ಮಾಡಲು ಶ್ರೀಕಿ ಲ್ಯಾಪ್​ಟ್ಯಾಪ್​ಗಳನ್ನು ಸಿಐಡಿಗೆ ಹಸ್ತಾಂತರ ಮಾಡಿದ್ದರು. ಹೀಗೆ ತಮ್ಮ ಕೈಗೆ ಬಂದಿದ್ದ 4 ಲ್ಯಾಪ್​ಟ್ಯಾಪ್​ಗಳಲ್ಲಿ  ಮೂರನ್ನು ಓಪನ್ ಮಾಡಿ ಸಿಐಡಿ ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ನಾಲ್ಕನೆಯ ಆ್ಯಪಲ್ ಬುಕ್ ಲ್ಯಾಪ್​ಟ್ಯಾಪ್ ಮಾತ್ರ ಪಾಸ್​ವರ್ಡ್​ ಇಲ್ಲದೆ ಜಪ್ಪಯ್ಯ ಎಂದರೂ ಓಪನ್ ಮಾಡಲು ಸಿಐಡಿ ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಅತಿ ಹೆಚ್ಚು ಸೆಕ್ಯೂರಿಟಿ ಹೊಂದಿರುವ ಲ್ಯಾಪ್​ಟ್ಯಾಪ್ ಎಂದು ಈ ಆ್ಯಪಲ್ ಬುಕ್ ಲ್ಯಾಪ್​ಟ್ಯಾಪ್ ಬಗ್ಗೆ ಹೇಳಲಾಗುತ್ತದೆ. ಪಾಸ್​ವರ್ಡ್​ಗಾಗಿ ಶ್ರೀಕಿ ಅಣ್ಣನನ್ನು ಕೇಳಿರುವ ಪೊಲೀಸರಿಗೆ ನಿರಸೆಯ ಉತ್ತರ ಸಿಕ್ಕಿದೆ. ಶ್ರೀಕಿ ಮನೆಗೆ ಬರುತ್ತಿಲ್ಲ ಎಂದು ಹೇಳಿ ಕಳುಹಿಸಿದ್ದಾನೆ ಅವನ ಸಹೋದರ.

ಅತಿ ಬುದ್ದಿವಂತರು ಕ್ರಿಮಿನಲ್​ಗಳಾದರೆ ಅದರ ಪರಿಣಾಮ ಊಹಿಸೋದಿಕ್ಕೂ ಸಾಧ್ಯವಾಗದಷ್ಟು ಭಯಂಕರವಾಗಿರುತ್ತೆ. ಪೊಲೀಸರಿಗಂತೂ ಇಂಥ ಅತಿ ಬುದ್ದಿವಂತರನ್ನು ಹ್ಯಾಂಡಲ್ ಮಾಡೋದು ತುಂಬಾನೆ ಕಷ್ಟ ಆಗುತ್ತೆ. ಕೇವಲ ಹೈಟ್ ವೇಟ್ ಅಂಡ್ ಮಿನಿಮಮ್ ಇಂಟ್ಲಿಜೆನ್ಸಿ ಮೂಲಕ ಹುದ್ದೆಗೆ ಅಂಟಿಕೊಂಡಿರುವ ಪೊಲೀಸರಿಗೆ ಅತಿ ಬುದ್ದಿವಂತ ಕ್ರಿಮಿನಲ್​ಗಳನ್ನು ಹ್ಯಾಂಡಲ್ ಮಾಡೋದು ತೀರಾನೆ ಕಷ್ಟ. ಇದಕ್ಕೆ ತಾಜಾ ಉದಾಹರಣೆ ಅಂದರೆ ಬಿಟ್​ಕಾಯಿನ್ ಶ್ರೀಕಿ.

ಯಸ್, ಶ್ರೀಕಿಯ ಬುದ್ದಿವಂತಿಕೆ ಇದೀಗ ಕರ್ನಾಟಕ ಪೊಲೀಸರಿಗೆ ಭಾರಿ ತಲೆನೋವು ತರ್ತಿದೆ. ಮೊದಲೇ ಬಿಟ್​ಕಾಯಿನ್ ಎಂದರೇನೆಂದೇ ತಿಳಿದಿರದಿದ್ದ ಪೊಲೀಸರಿಗೆ ಶ್ರೀಕಿಯಿಂದ ಬಿಟ್ ಕಾಯಿನ್ ಬಗ್ಗೆ ತಿಳಿದರೂ, ಅದರ ನಿಜವಾದ ಅರ್ಥ, ಆಳ ಅಗಲ ಇನ್ನೂ ತಿಳಿದಿಲ್ಲ. ಹಾಗೆ ನೋಡಿದರೆ ಎಂಥೆಂಥ ಆರ್ಥಿಕ ತಜ್ಷರಿಗೆ ಬಿಟ್ ಕಾಯಿನ್ ಅರ್ಥೈಸುವುದು ಕಷ್ಟವಾಗಿರುವಾಗ ಪಾಪ, ಪೊಲೀಸರಿಗೆ ಅದು ಅಷ್ಟು ಸುಲಭ ಸಾಧ್ಯವೂ ಅಲ್ಲ ಬಿಡಿ.

ಇದೆಲ್ಲ ಒಂದು ಕಡೆ ಇರಲಿ, ಶ್ರೀಕಿ ಎಂಬ ಅಸಮಾನ್ಯ ಬುದ್ದಿವಂತ ಪೊಲೀಸರ ಕೈಗೆ ನಾಲ್ಕು ಲ್ಯಾಪ್​ಟ್ಯಾಪ್​ಗಳನ್ನು ಇಟ್ಟು ಕಾಣದಂತೆ ಮಾಯವಾಗಿದ್ದಾನೆ. ಬಿಟ್ ಕಾಯಿನ್ ಮೂಲಕ ಕೋಟಿ ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ತಿಳಿದಿರುವ ಪೊಲೀಸರು ಅದರಲ್ಲಿ ಭಾಗಿಯಾಗಿರುವ ಶ್ರೀಕಿಯನ್ನು ಅಷ್ಟು ಸುಲಭವಾಗಿ ‘ಬಿಟ್’ ಕಳಿಸಿರುವುದನ್ನು ನೋಡಿದರೆ ಪೊಲೀಸರು ಒಂದೋ ಪಾಕೆಟ್​ಮಾರ್ ಕಳ್ಳನಿಗೂ, ಶ್ರೀಕಿಗೂ ನಡುವೆ ಯಾವುದೇ ಅಂತರವೇ ಗೊತ್ತಿಲ್ಲದಂಥ ದಡ್ಡ ಶಿಖಾಮಣಿಗಳು. ಇಲ್ಲವೆ ಶ್ರೀಕಿಯನ್ನು ಬಿಟ್ಟುಕಳಿಸಲು ಸರ್ಕಾರವೇ ಸೂಚಿಸಿರುವುದರಿಂದ ಅಸಹಾಯಕರಾಗಿ ಬಿಟ್ಟು ಕಳುಹಿಸಿರುವ ಅಸಹಾಯಕರು!

ಈ ಎರಡು ಆ್ಯಂಗಲ್​ಗಳನ್ನು ಬಿಟ್ಟು ಶ್ರೀಕಿ ಪೊಲೀಸರಿಗೆ ಸಿಗದಿರುವ ವಿಚಾರದಲ್ಲಿ ಬೇರಿನ್ನಾವ ಆ್ಯಂಗಲ್ ಕೂಡ ನಮಗೆ ಕಾಣಸಿಗುವುದಿಲ್ಲ. ಏಕೆಂದರೆ ಪ್ರತಿಯೊಂದನ್ನು ತನ್ನ ತಲೆಯಲ್ಲೇ ಸ್ಟೋರ್ ಮಾಡಿಕೊಂಡಿರುವ ಶ್ರೀಕಿ ಇವರ ಕೈಗೆ ಸಿಗದಿದ್ದರೆ ಬಿಟ್ ಕಾಯಿನ್ ಪ್ರಕರಣ ಎಂದೂ ಬಗೆಹರಿಯಲು ಸಾಧ್ಯವೇ ಇಲ್ಲ. ಇದು ಗೊತ್ತಿದ್ದೇ ಪೊಲೀಸರು ಶ್ರೀಕಿಯನ್ನು ಬಿಟ್ ಕಳುಹಿಸಿ ಬಿಟ್ ಕಾಯಿನ್ ಪ್ರಕರಣಕ್ಕೆ ಬಿ ರಿಪೋರ್ಟ್​ ಹಾಕಲು ಸಿದ್ಧತೆ ನಡೆಸಿದ್ದಾರೆ ಎನಿಸುತ್ತದೆ.

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES

Related Articles

TRENDING ARTICLES