ಬೆಂಗಳೂರು : ಆತ ಸಮಾಜ ಘಾತುಕ ಗೋಮುಖ ವ್ಯಾಘ್ರ. ಆದರೆ ಸಮಾಜಸೇವಕನಂತೆ ಮೇಲ್ಮನೆ ಪ್ರವೇಶಿಸಲು MLC ಚುನಾವಣೆಯಲ್ಲಿ ಸ್ಪರ್ಧಿಸಿದ್ದಾನೆ. ಆ ಪ್ರಳಯಾಂತಕನ ಕರಾಳ ಮುಖವನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುವುದಂತು ನಿಜಾ.ಇಷ್ಟಕ್ಕೂ ಆತ ಯಾರು..? ಏನಿದು ಪ್ರಕರಣ..?
JDS ಮನೆ ಹುಡುಗನೆಂದೇ ಹೇಳಿಕೊಂಡು MLC ಆದ ಅದೃಷ್ಟವಂತ ರಮೇಶ್ ಗೌಡ, ಜೆಡಿಎಸ್ ವರಿಷ್ಠರಿಗೇ ಮುಜುಗರವುಂಟು ಮಾಡಬಲ್ಲ ಶುದ್ಧ ತರಲೆ ಶಾಸಕ. ಸಮ್ಮಿಶ್ರ ಸರಕಾರವಿದ್ದಾಗ ವಿಧಾನಪರಿಷತ್ತಿಗೆ ಈ ಮಹಾನುಭಾವನ ನಾಮಕರಣವಾಗಿದೆ. ಇದೀಗ ಬಿಜೆಪಿ ಮುಲಾಜಿನೊಂದಿಗೆ ಈತನ ಮರು ಆಯ್ಕೆಗೆ ಹರಸಾಹಸ ಪಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಲ್ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸೆಣಸಾಡುತ್ತಿದ್ದು, ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಈತನ ಪ್ರಮಾಣ ಪತ್ರದಲ್ಲಿ ನೂರೆಂಟು ಸುಳ್ಳುಗಳು ಪತ್ತೆಯಾಗಿವೆ. ಆಫಿಡೆವಿಟ್ನಲ್ಲಿ ಅಪ್ರಾಮಾಣಿಕ ಘೋಷಣೆಗಳು, ಅಸ್ಪಷ್ಟ ಮಾಹಿತಿ ಕಂಡು ಬಂದಿದೆ ಎನ್ನಲಾಗುತ್ತಿದೆ.
ರಮೇಶ್ ಗೌಡ ಓದಿದ್ದು ಐಟಿಐ ಡ್ರಾಪ್ಔಟ್, ಡಿಕ್ಲೇರ್ ಮಾಡಿದ್ದು ಬಿಎ ಡಿಗ್ರಿ ಅಂತಾ. ಈತ ಹುಟ್ಟಿದ್ದು 1979ರಲ್ಲಿ, ಆದರೆ ಪದವೀಧರನಾಗಿದ್ದು 1997ರಲ್ಲಿ ಅಂತಾ ಘೋಷಣೆ ಮಾಡಿಕೊಂಡಿದ್ದಾರೆ. ಕೇವಲ 17 ವರ್ಷಕ್ಕೆಲ್ಲ ಗ್ರ್ಯಾಜುಯೇಟ್ ಆದ ಪವಾಡ ಪುರುಷ ಈತನಾಗಿದ್ದು, ದುರಂತ ಎಂಬಂತೆ ಹೊಸಕೋಟೆ ಸರಕಾರಿ ಪದವಿ ಕಾಲೇಜಿನ ರಿಜಿಸ್ಟರ್ಗಳಲ್ಲಿ ಎಚ್.ಎಂ.ರಮೇಶ್ ಹೆಸರೇ ಇಲ್ಲ. ರಮೇಶ್ ಗೌಡ ಈ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದೇ ಅನುಮಾನ ಎನ್ನಲಾಗಿದೆ. ಡ್ರೈವರ್ ಕೆಲಸ ಮಾಡ್ತಿದ್ದ ವ್ಯಕ್ತಿ ಹೆಸರಲ್ಲಿ ಈಗ 35.50 ಕೋಟಿ ರೂಪಾಯಿ ಆಸ್ತಿಯಿದೆ. ಪತ್ನಿ ಹೆಸರಲ್ಲಿಯೂ 50.10 ಕೋಟಿ ರೂಪಾಯಿ ಆಸ್ತಿ ಲೆಕ್ಕ ತೋರಿಸಿದ್ದಾನೆ ರಮೇಶ್ ಗೌಡ.
ಒಟ್ಟು 18 ಕ್ರಿಮಿನಲ್ ಕೇಸು ಎದುರಿಸುತ್ತಿರುವ ಆಸಾಮಿ ಈ ರಮೇಶ್ ಗೌಡ. ಎಲೆಕ್ಷನ್ ಅಫಿಡವಿಟ್ನಲ್ಲಿ ನಮೂದಿಸಿರೋದು ಮಾತ್ರ ಕೇವಲ ಒಂದೇ ಒಂದು ಕೇಸು. ಯಾವುದೇ ಖಾಸಗಿ ಟ್ರಸ್ಟ್ನಲ್ಲಿ ಭಾಗಿದಾರನಲ್ಲವೆಂದು ಬೇರೆ ಹೇಳಿಕೊಂಡಿದ್ದಾರೆ. ಆದ್ರೆ 2005ರ ಅ.18ರಂದೇ HMR ಚಿಕ್ಕಗುಳ್ಳಪ್ಪ ಎಜುಕೇಶನ್ ಟ್ರಸ್ಟ್ ರಿಜಿಸ್ಟರ್ ಮಾಡಿಸಿದ್ದಾರೆ. HMR ಟ್ರಸ್ಟ್ನ ಶಿಕ್ಷಣ ಸಂಸ್ಥೆಯ ಬಹುಮಹಡಿ ಶಾಲಾ ಕಟ್ಟಡವಿರುವ ಜಾಗದ ಅಸಲಿ ವಿಸ್ತೀರ್ಣವೆಷ್ಟು ಎಂಬುದನ್ನು ಸರಿಯಾಗಿ ನಮೂದಿಸಿಲ್ಲ.
ಶುದ್ಧ ಕ್ರಯಪತ್ರವಿಲ್ಲದ ಲಿಟಿಗೇಶನ್ ಪ್ರಾಪರ್ಟಿಗಳ ಮಾರ್ಟ್ಗೇಜ್ ಮೂಲಕವೇ ಬ್ಯಾಂಕ್ಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದಾನೆ. ಅಲ್ಲದೆ, ಕ್ರಶರ್ ಬಿಜಿನೆಸ್ಗಳಲ್ಲೂ ರಮೇಶ್ ಗೌಡನ ಕೈವಾಡ ಇದೆ. ಇಷ್ಟಾದ್ರೂ ಹಿರಿಯ ಮುತ್ಸದ್ಧಿಗಳಾದ ಜೆಡಿಎಸ್ ವರಿಷ್ಠರೇಕೆ ಈ ತಿಕ್ಕಲು ರಮೇಶ್ನ ಮೇಲೇಕೆ ಪ್ರೀತಿ? ಇಂಥಾ ವ್ಯಕ್ತಿಯನ್ನ ಮೇಲ್ಮನೆ ಸದಸ್ಯತ್ವಕ್ಕೆ ತರಲು ಹವಣಿಸುತ್ತಿರೋದೇಕೆ ಜೆಡಿಎಸ್ ವರಿಷ್ಠರು? ಜೆಡಿಎಸ್ನಂಥ ಪರಿಶ್ರಮಿಗಳ ಪಕ್ಷಕ್ಕೆ ರಮೇಶ್ ಗೌಡನಂಥವರಿಂದ ಕಳಂಕವೇಕೆ..? ಹೀಗಾಗಿ ಪಕ್ಷದಿಂದ ತಿಕ್ಕಲು ರಮೇಶ್ನನ್ನ ದೂರವಿಡಿ ಎಂದು ಜೆಡಿಎಸ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಹೀಗೆ ಅದೃಷ್ಟದಿಂದ MLC ಆದ ರಮೇಶ್ ಗೌಡನ ಭಾಷೆ ದೇವರಿಗೇ ಪ್ರೀತಿ. ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ಬರೀ ಅಸಭ್ಯ, ಅಶ್ಲೀಲ ಪದಗಳೇ ಉದುರುತ್ತವೆ. ಈ ರಮೇಶ್ ಗೌಡ ಬಾಯಿ ಬಿಟ್ರೆ ಬರೀ ಹೊಲಸು ಭಾಷೆಯ ವಾಗ್ಝರಿ ಹೊರಬರುತ್ತೆ. ಸೊಂಟದ ಕೆಳಗಿನ ಭಾಷೆಯಲ್ಲೇ ಈತ ಮಾತನಾಡ್ತಾನೆ. ಪೊಲೀಸರೊಂದಿಗೂ ಅಸಭ್ಯ ಭಾಷೆಯಲ್ಲೇ ಮಾತನಾಡುತ್ತಾನೆ. ವ್ಯಕ್ತಿತ್ವವೂ ಗಲೀಜು, ಆಡುವ ಮಾತುಗಳೂ ಗಲೀಜು. ಚಿಂತಕರ ಚಾವಡಿಯಲ್ಲಿರುವ ರಮೇಶ್ ಬಾಯಲ್ಲಿ ಬರೀ ಹೊಲಸು ಭಾಷೆ.
ಏನೇ ಆಗಲಿ ಚಿಂತಕರ ಚಾವಡಿ ಮೇಲ್ಮನೆಯ ಮತದಾರರು ಪ್ರಬುದ್ಧರಿದ್ದಾರೆ, ಎಲೆಕ್ಷನ್ನಲ್ಲಿ ಗೋಮುಖ ವ್ಯಾಘ್ರ ರಮೇಶ್ ಗೌಡನಿಗೆ ಬುದ್ಧಿ ಕಲಿಸ್ತಾರೆ ಅನ್ನೋ ವಿಶ್ವಾಸ ನಮ್ಮದು.