ಬೆಂಗಳೂರು: ಕೊರೊನ ಭಾರತಕ್ಕೆ ಎಂಟ್ರಿ ಕೊಟ್ಟು ಎರಡು ವರ್ಷಗಳಾಯಿತು. ಎರಡನೇ ವೇವ್ ನಂತರ ಇನ್ನೇನು ಕೊರೋನ ಹೊರಟೇಹೋಯಿತು ಅಂದುಕೊಳ್ಳುತ್ತಿದ್ದಂತೆ ನಾನಿನ್ನೂ ಹೋಗಿಲ್ಲ, ಇಲ್ಲೇ ಇದ್ದೇನೆ ಎಂದು ಗವಾಕ್ಷಿಯಲ್ಲಿ ಇಳಿದು ಬಂದಿದೆ ಕೊರೊನ. ಗಾಮ, ಬೀಟ ಡೆಲ್ಟ ಗಳ ಜೊತೆಗೆ ಈಗ ಒಮಿಕ್ರಾನ್ ಸಹ ವಕ್ಕರಿಸಿಕೊಂಡು ಹೆದರಿದವರ ಮೇಲೆ ಹಾವು ಎಸೆದಂತಾಗಿದೆ ಪರಿಸ್ಥಿತಿ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಮತ್ತೆ ಮಾಸ್ಕ್, ಸೋಶಿಯಲ್ ಡಿಸ್ಟೆನ್ಸ್ ಎಂಬ ಜಪದಲ್ಲಿ ತೊಡಗಿದೆ. ಮಾರ್ಷಲ್ಗಳು ಎಲ್ಲೆಂದರಲ್ಲಿ ಫೈನ್ ಹಾಕುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯವೂ ಬರುತ್ತಿದೆ. ಇದು ಒಂದು ಆ್ಯಂಗಲ್.
ಮತ್ತೊಂದು ಆ್ಯಂಗಲ್ನಲ್ಲಿ ನೋಡಿದರೆ ಸರಕಾರ ಖುದ್ದು ಸೋಶಿಯಲ್ ಡಿಸ್ಟೆನ್ಸ್ಗೆ ಎಳ್ಳು ನೀರು ಬಿಟ್ಟಿದೆ! ಬೆಂಗಳೂರಿನ ಬಿಎಂಟಿಸಿ ಬಸ್ಗಳಲ್ಲಿ ಕೊವಿಡ್ ರೂಲ್ಸ್ ಪಾಲನೆಯಾಗುತ್ತಿದೆಯ ಎಂದು ನೋಡಿದರೆ ಖಂಡಿತ ಇಲ್ಲ ಎಂದೇ ಹೇಳಬೇಕಾಗುತ್ತದೆ. ಪವರ್ ಟಿವಿ ಮಾಡಿದ ರಿಯಾಲಿಟಿ ಚೆಕ್ನಲ್ಲಿ ಒಂದು ಬಸ್ನಲ್ಲಿ ಕನಿಷ್ಟವೆಂದರೂ 100-150 ಜನರನ್ನು ಕುರಿಗಳಂತೆ ತುಂಬಿ ಸಾಗಿಸಲಾಗುತ್ತಿದೆ. 40 ಜನರು ಕುಳಿತು ಪ್ರಯಾಣಿಸುವ ಬಸ್ಸಿನಲ್ಲಿ ಹಿಗ್ಗಾಮುಗ್ಗ ಜನಗಳನ್ನು ನಿಲ್ಲಲು ಬಿಟ್ಟು ಈ ರೀತಿ ಬಸ್ಗಳನ್ನು ಓಡಿಸಿದರೆ ಅಲ್ಲಿ ಸೋಶಿಯಲ್ ಡಿಸ್ಟೆನ್ಸ್ ಇರಲು ಸಾಧ್ಯವೆ? ಇಲ್ಲಿ ಮಾತ್ರ ಸರಕಾರಕ್ಕೆ ತನ್ನ ಈ ಕ್ರಮದಲ್ಲಿ ಯಾವುದೇ ತಪ್ಪು ಕಾಣಿಸುವುದೇ ಇಲ್ಲ. ಜನರ ಜೀವಕ್ಕಿಂತ ಸರ್ಕಾರಕ್ಕೆ ಆದಾಯವೇ ಮುಖ್ಯ ಎಂಬುದು ಈ ಎರಡು ಆ್ಯಂಗಲ್ಗಳಿಂದ ಸ್ಪಷ್ಟವಾಗುತ್ತದೆ.
ಸರ್ಕಾರದ ಈ ಕ್ರಮದಿಂದಾಗಿ ಬಿಎಂಟಿಸಿ ಬಸ್ಗಳು ಕೊರೊನ ಹಾಟ್ಸ್ಪಾಟ್ಗಳಾಗಿ ಪರಿವರ್ತನೆಗೊಂಡರೆ ಅಚ್ಚರಿ ಪಡಬೇಕಿಲ್ಲ. ಸರ್ಕಾರ ಈ ರೀತಿ ಇಬ್ಬಗೆ ನೀತಿ ಅನುಸರಿಸುತ್ತಿರುವುದರಿಂದ ಸಾರ್ವಜನಿಕರೂ ಸಹ ಮಾರ್ಷಲ್ಗಳಿಗೆ ಪೊಲೀಸರಿಗೆ ದಂಡ ಕಟ್ಟಲು ನಿರಾಕರಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಹಾಗೂ ಪೊಲೀಸರ ನಡುವೆ ಘರ್ಷಣೆಗಳೂ ಸಹ ನಡೆಯುತ್ತಿವೆ. ಜನರ ಈ ವರ್ತನೆಗೆ ಕಾರಣ ಸರ್ಕಾರವೇ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುವ ಅಂಶವಾಗಿದೆ.