ಬೆಂಗಳೂರು: ವಂಚಕರು ದುಡ್ಡು ಹೇಗೆಗೊ ಮಾಡೋದನ್ನ ನಾವು ನೋಡ್ತಿರ್ತೀವಿ. ಆದರೆ ಇಲ್ಲೊಬ್ಬ ಮಹಾನ್ ವಂಚಕ ಕೊವಿಡ್ ಸಮಯದಲ್ಲಿ ಸತ್ತ ವ್ಯಕ್ತಿಗಳ ಸಂಬಂಧಿಕರನ್ನು ಒಂದು ಸ್ವಲ್ಪವೂ ಮಾನವಿಯತೆಯಿಲ್ಲದೆ ವಂಚಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಕೊವಿಡ್ ಸಮಯದಲ್ಲಿ ಸತ್ತ ಸಾಲು ಸಾಲು ಹೆಣಗಳಿಂದಲೇ ಇವನು ಲಕ್ಷಾಂತರ ರೂಪಾಯಿ ದುಡ್ಡು ಮಾಡಿದ್ದಾನೆ. ಶವಗಳಿಂದ ಈತ ಅದು ಹೇಗೆ ಹಣ ವಸೂಲು ಮಾಡ್ತಿದ್ದ, ಸಂಬಂಧಿಕರು ಯಾಕಾಗಿ ಇವನಿಗೆ ದುಡ್ಡು ಕೊಡುತ್ತಿದ್ದರು ಎಂಬುದನ್ನು ನೋಡಿದರೆ ಇವನಿಗೆ ಕ್ಷಮೆಯೇ ಇಲ್ಲವೆನಿಸುತ್ತದೆ.
ವಿಲ್ಸನ್ ಗಾರ್ಡನ್ ಎಲೆಕ್ಟ್ರಿಕ್ ಚಿತಾಗಾರದ ವರದಿಗಾರನಾಗಿರುವ ಸುಭ್ರಮಣಿ ಎಂಬಾತ ಕೊವಿಡ್ ಸಮಯದಲ್ಲಿ ಚಿತಾಗಾರಕ್ಕೆ ಬರುತ್ತಿದ್ದ ಶವಗಳ ಸಂಬಂಧಿಕರಿಗೆ ಡೆತ್ ಸರ್ಟಿಫಿಕೆಟ್ ಮಾಡಿಸಿಕೊಡ್ತೀನಿ ಎಂದು 2000 ಸಾವಿರ ರೂಪಾಯಿಗಳನ್ನು ವಸೂಲು ಮಾಡುತ್ತಿದ್ದ. ಹಲವು ಕಡೆ ಅಲೆಯುವುದು ತಪ್ಪುತ್ತದೆ ಎಂದು ಶವಗಳ ಸಂಬಂಧಿಕರು ಇವನಿಗೆ 2000 ರೂಪಾಯಿಗಳನ್ನು ಕೊಡುತ್ತಿದ್ದರು. ಆದರೆ ಇವನು ಅವರಿಗೆ ಯಾವ ಸರ್ಟಿಫಿಕೆಟುಗಳನ್ನೂ ಕೊಡದೆ ವಂಚಿಸುತ್ತಿದ್ದ. ಹೀಗೆ ನೂರಾರು ಜನರನ್ನು ವಂಚಿಸಿರುವ ಸುಭ್ರಮಣಿಯ ಬಂಡವಾಳ ಇದೀಗ ಬಯಲಾಗಿದೆ. ಇತ್ತ ಡೆತ್ ಸರ್ಟಿಫಿಕೆಟೂ ಸಿಗದೆ, ಅತ್ತ ಹಣವನ್ನೂ ಕಳೆದುಕೊಂಡ ಜನರು ಇವನ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿದ್ದಾರೆ. ಸುಭ್ರಮಣಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಎಸಿಬಿ ತನಿಖೆ ನಡೆಸುತ್ತಿದೆ.