Monday, December 23, 2024

ನಾನು ಸುಮ್ಮನೆ ಕೂರುವವನಲ್ಲ : ಮಾಜಿ ಸಿಎಂ ಯಡಿಯೂರಪ್ಪ

ಚಾಮರಾಜನಗರ : ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸುಮ್ಮನೆ ಕೂರುವವನು ನಾನಲ್ಲ, ಮೇಲ್ಮನೆ ಚುನಾವಣೆಯಲ್ಲಿ 15-17 ಸ್ಥಾನ ಗೆಲ್ಲಿಸುತ್ತೇನೆ ಎಂದು ಚಾಮರಾಜನಗರ ಜಿಲ್ಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿ ಗ್ರಾಮದಲ್ಲಿ ಅಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆ ಪ್ರಚಾರದಲ್ಲಿ ರಘು ಕೌಟಿಲ್ಯ ಪರ ಮತಯಾಚಿಸಿ ಅವರು ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಸತತ ಟೀಕೆ ಮಾಡುತ್ತಿದ್ದಾರೆ ಇವಕ್ಕೆಲ್ಲಾ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ನರೇಂದ್ರಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಕಾಂಗ್ರೆಸ್ ದೇಶದಲ್ಲಿ ಧೂಳಿಪಟವಾಗಿದ್ದು, ಕರ್ನಾಟಕದಲ್ಲಷ್ಟೇ ಉಸಿರಾಡುತ್ತಿದೆ. ವೆಂಕ, ನಾಣಿ, ಸುಬ್ಬ ಎಂಬಂತೆ ಲೋಕಸಭೆಲ್ಲಿ ಕಾಂಗ್ರೆಸ್ 46 ಸ್ಥಾನಕ್ಕೆ ಇಳಿದಿದೆ. ಆದರೆ, 26 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಆಧಾರರಹಿತ ಟೀಕೆಗಳಿಗೆ ಈ ಚುನಾವಣಾ ಫಲಿತಾಂಶವೇ ಉತ್ತರ ಕೊಡಲಿದೆ ಎಂದು ಕೈ ಪಾಳೇಯದ ವಿರುದ್ಧ ಆಕ್ರೋಶ ಹೊರಹಾಕಿದರು.

ಯಡಿಯೂರಪ್ಪ ರಾಜೀನಾಮೆ ನೀಡಿ ಮನೆಗೆ ಹೋಗ್ತಾರೆ ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದರು. ಆದರೆ, ನಾನು ಮನೆಯಲ್ಲಿ ಕೂರುವ ವ್ಯಕ್ತಿಯಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೂ ಮನೆ ಸೇರಿಲ್ಲ, ರಾಜ್ಯದ್ಯಂತ ಪ್ರವಾಸ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿ, ಇನ್ನೂ 25 ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಪಕ್ಷವಾಗಿ ಕೂರಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.

RELATED ARTICLES

Related Articles

TRENDING ARTICLES