ಚಾಮರಾಜನಗರ: ಬಿಎಸ್ವೈ ಗೂ ಚಾಮರಾಜನಗರಕ್ಕೂ ಯಾವ ದ್ವೇಶ? ಇದು ದಶಕಗಳಿಂದಲೂ ಹಲವು ಜನರನ್ನು ತಲೆತಿನ್ನುತ್ತಿರುವ ಪ್ರಶ್ನೆ. ಬಿಎಸ್ವೈ ಚಾಮರಾಜನಗರಕ್ಕೆ ಕಾಲಿಡಬಾರದು ಎಂದು ಪ್ರತಿಜ್ಷೆ ಮಾಡಿದಂತಿದೆ. ಅದೂ ಅಂಥಿಂಥ ಪ್ರತಿಜ್ಷೆಯಲ್ಲ, ಭೀಷ್ಮಪ್ರತಿಜ್ಷೆಯೆನಿಸುತ್ತದೆ! ಏಕೆಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗಲೂ ಇಲ್ಲಿಗೆ ಕಾಲಿಡಲಿಲ್ಲ. ಅದೂ ಒಂದೆರಡು ಬಾರಿಯಲ್ಲ. ತಾವು ಅಧಿಕಾರದಲ್ಲಿದ್ದ ನಾಲ್ಕೂ ಬಾರಿಯೂ ಅವರು ಚಾಮರಾಜನಗರದಿಂದ ಅಂತರ ಕಾಯ್ದುಕೊಂಡರು! ಬಹುಶ ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ ಕಾಲಿಟ್ಟರೆ ಅಧಿಕಾರ ಕಳೆದುಕೊಳ್ಳುವ ಮೂಢನಂಬಿಕೆ ಇದಕ್ಕೆ ಕಾರಣವಿರಬಹುದು!
ಸರಿ, ಆದರೆ ಇದೀಗ ಯಡಿಯೂರಪ್ಪ ಅಧಿಕಾರದಲ್ಲಿಲ್ಲ. ಆದರೂ ಅವರು ಚಾಮರಾಜನಗರಕ್ಕೆ ಕಾಲಿಡುತ್ತಿಲ್ಲ! ವಿಧಾನಪರಿಷತ್ ಚುನಾವಣೆ ಸಂಬಂಧ ಚಾಮರಾಜನಗರದಿಂದ ಕೇವಲ 10-15ಕಿಲೋಮಿಟರ್ ದೂರದಲ್ಲಿರುವ ಸಂತೆಮರಳ್ಳಿಗೆ ಭೇಟಿ ನೀಡಿರುವ ಯಡ್ಡಿ, ಚಾಮರಾಜನಗರಕ್ಕೆ ಭೇಟಿ ನೀಡಲು ಮಾತ್ರ ಬಿಲ್ಕುಲ್ ಮನಸ್ಸು ಮಾಡುತ್ತಿಲ್ಲ. ಕೆಲ ತಿಂಗಳ ಹಿಂದೆ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ನೇರ ಹೆಲಿಕಾಪ್ಟರ್ ಮೂಲಕ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮಕ್ಕೆ ಭೇಟಿ ನೀಡಿದ್ದರು.
ರಾಜ್ಯದ ಮುಖ್ಯಮಂತ್ರಿಯಾಗಿ ಚಾಮರಾಜನಗರಲ್ಲಿ 35 ಜನರು ಪ್ರಾಣಕಳೆದುಕೊಂಡಾಗಲೂ ಸಹ ಬಿಎಸ್ವೈ ಇಲ್ಲಿಗೆ ಭೇಟಿ ನೀಡಲಿಲ್ಲ. ಬಿಎಸ್ವೈ ಈ ನಡೆಯನ್ನು ಮಾಜಿ ಸಂಸದ ಧೃವನಾರಾಯಣ ಸೇರಿದಂತೆ ಹಲವರು ಟೀಕಿಸಿದ್ದಾರೆ. ಈಗ ಅಧಿಕಾರದಲ್ಲಿ ಇಲ್ಲದಾಗಲೂ ಚಾಮರಾಜನಗರಕ್ಕೆ ಭೇಟಿ ನೀಡದಿರುವುದು ಹಲವರ ಆಕ್ರೋಷಕ್ಕೆ ಕಾರಣವಾಗಿದೆ.