ಗದಗ: ಅಕಾಲಿಕ ಮಳೆಯಿಂದಾಗಿ ರೈತರು ಬೆಳೆಗಳೆಲ್ಲ ನಾಶವಾಗಿ ರೈತವರ್ಗ ಸಾಕಷ್ಟು ಸಂಕಷ್ಟಕ್ಕೀಡಾಗಿದೆ. ಆದರೆ ಈವರೆಗೂ ಗದಗ ಜಿಲ್ಲಾಡಳಿತ ರೈತರಿಗೆ ಪರಿಹಾರ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.
ಈ ಕುರಿತು ಪತ್ರಿಕಾ ಗೋಷ್ಟಿ ಏರ್ಪಡಿಸಿ ಮಾತನಾಡಿದ ಅವರು, ಜಿಲ್ಲೆಯ ಅಧಿಕಾರಿಗಳು ಏನು ಮಾಡ್ತಿದ್ದಾರೋ ಗೊತ್ತಿಲ್ಲ.ನಿನ್ನೆ ತಾನೆ ಸಭೆ ನಡೆಸಿ ಸರ್ವೆ ಮಾಡಲು ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ನೈಜವಾಗಿ ಯಾವುದೇ ಕ್ಷೇತ್ರದಲ್ಲಿ ಸರ್ವೆ ಕಾರ್ಯವೂ ನಡೆದಿಲ್ಲ. ಈವರೆಗೂ ಪರಿಹಾರ ಕೊಡುವ ವಿಚಾರವನ್ನೂ ಮಾಡಿಲ್ಲ. ಹೀಗಾಗಿ ಸರ್ಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರಿಗೆ ಸುಳ್ಳು ಹೇಳಿಕೆ ಕೊಡುವದನ್ನ ನಿಲ್ಲಿಸಬೇಕು.ರೈತರು ಬಹಳ ಸಂಕಷ್ಟದಲ್ಲಿದ್ದಾರೆ.
ಕೇವಲ ಈರುಳ್ಳಿ,ಮೆಣಸಿನಕಾಯಿ ಜೊತೆಗೆ ಬಾಳೆ, ಪಪ್ಪಾಯಿ ಬೆಳೆದಂಥ ರೈತರು ಸಹ ತೊಂದರೆಯಲ್ಲಿದ್ದಾರೆ. ಹೀಗಾಗಿ ಸರ್ಕಾರ ಎಲ್ಲರನ್ನೂ ಗಮನಿಸಿ ಪರಿಹಾರ ಕಾರ್ಯ ತುರ್ತಾಗಿ ಮಾಡಬೇಕೆಂದು ಒತ್ತಾಯಿಸಿದರು. ಈ ವರೆಗೂ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ರಾಮ ಪಂಚಾಯತಿಗಳಿಗೆ ಒಂದೂ ಮನೆಯನ್ನೂ ಸಹ ಕೊಟ್ಟಿಲ್ಲ. 2018 ರಲ್ಲಿ ಜಾರಿಯಾದ ಮನೆಗಳು ಇನ್ನೂ ಅಪೂರ್ಣವಾಗಿ ಹಾಗೇ ನಿಂತಿವೆ.ಅದರ ಬಿಲ್ ಸಹ ಮಾಡುತ್ತಿಲ್ಲ. ಸರ್ಕಾರ ಸಾಕಷ್ಟು ದುಡ್ಡಿದೆ ಎಂದು ಹೇಳುತ್ತೆ. ಈ ಯೋಜನೆಗೆ ಮಾತ್ರ ಯಾಕೆ ಸರ್ಕಾರ ಅನುದಾನ ನೀಡ್ತಿಲ್ಲ ಎಂದು ಪ್ರಶ್ನಿಸಿದರು. ಶೀಘ್ರವೇ ಅತೀ ಅವಶ್ಯವಿರುವ ಕೆಲಸ ಕಾರ್ಯಗಳನ್ನು ಬೇಗನೇ ಮಾಡಬೇಕು.ಸದ್ಯ ರಾಜ್ಯದಲ್ಲಿರುವ ವ್ಯವಸ್ಥೆ ನೋಡಿದಾಗ ನಲವತ್ತು ಪರ್ಸೆಂಟ್ ನ ಈ ಸರ್ಕಾರ ಬಹಳ ದಿವಸ ಉಳಿಯುವದಿಲ್ಲ ಎಂದು ಜಿ.ಎಸ್.ಪಾಟೀಲ ಹೇಳಿದರು.
ಗುತ್ತಿಗೆದಾರರು ಸಹ ನಲವತ್ತು ಪರ್ಸೆಂಟೆ ಕಮೀಷನ್ ಬಗ್ಗೆ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮೋದಿಜಿ ನಿರ್ದ್ಯಾಕ್ಷಣ್ಯವಾಗಿ ತನಿಖೆ ನಡೆಸುವಂತೆ ಸೂಚಿಸಿದೆ. ಆದರೆ ದುರಾದೃಷ್ಟ ರಾಜ್ಯದ ಮುಖ್ಯಮಂತ್ರಿಗಳು ಅವರ ಅಧಿಕಾರಿಗಳ ಮುಖಾಂತರ ಮಾಡುವ ವ್ಯವಸ್ಥೆಯಲ್ಲಿದ್ದು ಲೂಟಿ ಹೊಡೆಯುವ ವ್ಯವಸ್ಥೆಗೆ ಸ್ಥಳಿಯ ಶಾಸಕರು ಹಾಗೂ ಮಂತ್ರಿಯವರು ಭಾಗಿಯಾಗಿದ್ದಾರೆ ಎಂದು ಜಿ.ಎಸ್.ಪಾಟೀಲ ಆರೋಪಿಸಿದರು.
ಇನ್ನು ಜಲಜೀವನ ಮಿಷನ್ ಅನ್ನೋ ಯೋಜನೆ ಸಾಕಷ್ಟು ಅವೈಜ್ಞಾನಿಕವಾಗಿದ್ದು ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ತುಂಗಭದ್ರಾ ಹಾಗೂ ಮಲಪ್ರಭಾ ನದಿಯಿಂದ ಗ್ರಾಮದ ಪ್ರತಿ ಮನೆ ಮನೆಗೂ ನೀರು ಕೊಡುವಂಥ ವ್ಯವಸ್ಥೆ ಈಗಾಗಲೇ ನಾವು ಮಾಡಿದ್ದೇವೆ. ಆದರೆ ಈ ಯೋಜನೆ ಹೆಸರಿನಲ್ಲಿ ಚೆನ್ನಾಗಿದ್ದ ಸಿಸಿ ರಸ್ತೆಗಳನ್ನು ಒಡೆದು ಹಾಕಿದ್ದಾರೆ. ಆದರೆ ಈ ಟೆಂಡರ್ ನಲ್ಲಿ ಒಡೆದು ಹಾಕಿದ ರಸ್ತೆಗಳನ್ನ ಮರಳಿ ದುರಸ್ಥಿ ಮಾಡಿ ಮುಚ್ಚಲಿಕ್ಕೆ ಅವಕಾಶವಿಲ್ಲ. ಸ್ವಾತಂತ್ರ್ಯ ಸಿಕ್ಕ ನಂತರ ಇಷ್ಟೆಲ್ಲ ರಸ್ತೆಗಳು ಸುಧಾರಿಸಿದ ರಸ್ತೆಗಳು ಆಗಿದ್ದವು. ಆದರೆ ಆಡಳಿತ ಸರ್ಕಾರ ಕಡಿದು ಹಾಕುವ ಪ್ರವೃತ್ತಿಯನ್ನು ಮಾಡಿದೆ. ಸ್ಥಳಿಯ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧ್ಯಕ್ಷರು ಯೋಜನೆ ಈ ಗ್ರಾಮಕ್ಕೆ ಬೇಡ ಎಂದರೂ ಒತ್ತಾಯ ಪೂರಕವಾಗಿ ಕಾಮಗಾರಿ ಮಾಡ್ತಿದ್ದಾರೆ.
ಅಲ್ಲದೇ ಸರ್ಕಾರದ ಅಧಿಕಾರಿಗಳಾಗಿರೋ ಪಿಡಿಓ ಹಾಗೂ ಈಓ ಸಹ ಬಿಜೆಪಿ ಏಜೆಂಟರಾಗಿ ಕಾರ್ಯ ಮಾಡುತ್ತಾ ತಾರತಮ್ಯ ಮಾಡ್ತಿದ್ದಾರೆ ಎಂದು ಜಿ.ಎಸ್.ಪಾಟೀಲ ಆರೋಪಿಸಿದರು. ಅಲ್ಲದೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ನಿಜಕ್ಕೂ ಇಂಥಹ ಪೊಲೀಸ್ ಇಲಾಖೆ ಹಾಗೂ ಈ ರೀತಿ ರಾಜಕೀಯ ವ್ಯವಸ್ಥೆ ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿಲ್ಲ. ಇವೆಲ್ಲವುಗಳಿಂದ ಬಡವರು,ಯುವಕರು ಹಾಳಾಗಿ ಹೋಗುತ್ತಾರೆ. ಅವರ ಮುಂದಿನ ಪರಿಸ್ಥಿತಿ ಏನಾಗಬಹುದು ಎಂದು ಸರ್ಕಾರ ಅರ್ಥೈಸಿಕೊಂಡು ಕೂಡಲೇ ಸರ್ಕಾರ ಇದೆಲ್ಲದವದಕ್ಕೂ ತಡೆ ಒಡ್ಡಬೇಕು ಎಂದು ಜಿ.ಎಸ್.ಪಾಟೀಲ ಆಗ್ರಹಿಸಿದರು.