Sunday, December 22, 2024

ಮಾಜಿ ಐ.ಆರ್.ಎಸ್ ಅಧಿಕಾರಿ ರಾಜಕೀಯಕ್ಕೆ ರೀಎಂಟ್ರಿ..?

ಮಂಡ್ಯ: ಡಾ.ಲಕ್ಷ್ಮೀ ಅಶ್ವಿನ್ ಗೌಡ. ಮಂಡ್ಯದ ಬಹುತೇಕ ರಾಜಕಾರಣಿಗಳಿಗೆ ಚಿರಪರಿಚಿತ ಹೆಸರು. ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡೋ ಉದ್ದೇಶದಿಂದ ಐ.ಆರ್.ಎಸ್(ಇಂಡಿಯನ್ ರೈಲ್ವೇ ಸರ್ವೀಸ್) ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. ನಂತರ ಕೆಲವೊಂದು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದರು.

ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಿಂದ ಲೋಕಸಭಾ ಚುನಾವಣೆವರೆಗೂ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಂತಾನೆ ಗುರುತಿಸಲಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಬಿಟ್ಟು ತೆನೆ ಹೊತ್ತ ಸುರೇಶ್ ಗೌಡರನ್ನ ಅಧಿಕೃತ ಅಭ್ಯರ್ಥಿಯಾಗಿ ಮಾಡಲಾಯ್ತು.

ಇದಾದ ನಂತರ ಕಳೆದ ಲೋಕಸಭಾ ಚುನಾವಣೆಯಲ್ಲೂ ಡಾ.ಲಕ್ಷ್ಮೀ ಅಶ್ವಿನ್ ಗೌಡ ಜೆಡಿಎಸ್ ಅಭ್ಯರ್ಥಿ ಆಗ್ತಾರೆ ಎಂದೇ ನಂಬಲಾಗಿತ್ತು. ಆಗಲೂ ಲಕ್ಷ್ಮೀ ಅವರಿಗೆ ಜೆಡಿಎಸ್ ಟಿಕೆಟ್ ನಿರಾಕರಿಸಿ, ನಿಖಿಲ್ ಕುಮಾರಸ್ವಾಮಿ ಅವರನ್ನ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಯ್ತು.ಇದರಿಂದ ಬೇಸರಗೊಂಡಿದ್ದ ಡಾ.ಲಕ್ಷ್ಮೀ ಅಶ್ವಿನ್ ಗೌಡ, ರಾಜಕೀಯದಿಂದ ದೂರವೇ ಉಳಿದರು. ಆದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಡಾ.ಲಕ್ಷ್ಮೀ ಹೆಸರು ಜೆಡಿಎಸ್ ವಿರೋಧಿಗಳಿಗೆ ಅಸ್ತ್ರವಾಯ್ತು.

ಹೋದ, ಬಂದಲೆಲ್ಲ ಡಾ.ಲಕ್ಷ್ಮೀ ಅಶ್ವಿನ್ ಗೌಡರಿಗೆ ಜೆಡಿಎಸ್ ಮಾಡಿದ ವಂಚನೆಯನ್ನ ಜನರ ಮುಂದಿಟ್ಟು ಪ್ರಚಾರ ನಡೆಸಲು ಶುರು ಮಾಡಿದ್ದರು. ಕುಟುಂಬ ರಾಜಕಾರಣದ ಜೊತೆಗೆ ಡಾ.ಲಕ್ಷ್ಮೀ ಅಶ್ವಿನ್ ಗೌಡರಿಗೆ ಪಕ್ಷ ಮಾಡಿದ ದ್ರೋಹ ಕೂಡ ಜೆಡಿಎಸ್ ಸೋಲಿಗೆ ಕಾರಣ ಅಂದರೆ ತಪ್ಪಲ್ಲ.

ಸಾಮಾಜಿಕ ಸೇವೆಗೆ ಮುಂದಾದ ಡಾ.ಲಕ್ಷ್ಮೀ : ಕಳೆದ ಎರಡೂವರೆ ವರ್ಷದಿಂದ ರಾಜಕೀಯ ಸೇರಿದಂತೆ ಸಾಮಾಜಿಕ ಕ್ಷೇತ್ರದಿಂದ ದೂರಾಗಿದ್ದ ಡಾ.ಲಕ್ಷ್ಮೀ ಅಶ್ವಿನ್ ಗೌಡ, ಮತ್ತೆ ಸಾಮಾಜಿಕ ಸೇವೆಗಳ ಮೂಲಕ ಮಂಡ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದು ಮಂಡ್ಯದ ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದರು. ಸ್ವತಃ ಅಂಜನಿ ಫೌಂಡೇಶನ್ ಹುಟ್ಟು ಹಾಕಿರೋ ಡಾ.ಲಕ್ಷ್ಮೀ, ತನ್ನ ಸಂಸ್ಥೆ ಮೂಲಕ ಮತ್ತೆ ಸಾಮಾಜಿಕ ಸೇವೆಗೆ ಧುಮುಕಿದ್ದಾರೆ. ಆ ಮೂಲಕ ಮತ್ತೆ ರಾಜಕೀಯಕ್ಕೆ ಮರಳುವ ಮುನ್ಸೂಚನೆ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಇಂದಿನ ಉದ್ಯೋಗ ಮೇಳದಲ್ಲಿ 30ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, ಒಂದೂವರೆ ಸಾವಿರಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಮೇಳದ ಸದುಪಯೋಗ ಪಡೆದುಕೊಂಡಿದ್ದಾರೆ.ಹಾಗು ಸ್ಥಳದಲ್ಲೇ ನೂರಾರು ಜನರಿಗೆ ಉದ್ಯೋಗ ನೀಡಲಾಯಿತು.

ಹುಟ್ಟೂರಲ್ಲಿ ಹಮ್ಮಿಕೊಂಡಿದ್ದ ಈ ಉದ್ಯೋಗ ಮೇಳದಲ್ಲಿ ತನ್ನ ವಿದ್ಯಾಭ್ಯಾಸದ ವೇಳೆ ಶಿಕ್ಷಕರಾಗಿ, ತನ್ನನ್ನು ತಿದ್ದಿ-ತೀಡಿದ 8ಕ್ಕೂ ಹೆಚ್ಚು ಗುರುಗಳನ್ನ ಸನ್ಮಾನಿಸಿ, ಗೌರವಿಸಿದ್ರು. ಈ ವೇಳೆ ಮಾತನಾಡಿದ, ಡಾ.ಲಕ್ಷ್ಮೀ ಅಶ್ವಿನ್ ಗೌಡ, ವೈದ್ಯೆಯಾಗಿ, ಅಧಿಕಾರಿಯಾಗಿ, ರಾಜಕಾರಣಿಯಾಗಿ ನನ್ನ ಅನುಭವವನ್ನ ಯುವ ಸಮುದಾಯಕ್ಕೆ ತಿಳಿಸಬೇಕು. ಗ್ರಾಮೀಣ ಪ್ರದೇಶದ ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ನೆರವಾಗುವುದು ನಮ್ಮ ಈ ಸಂಸ್ಥೆ ಉದ್ದೇಶ. ಈ ಸಂಸ್ಥೆ ಮೂಲಕ ಸಾಮಾಜಿಕ ಸೇವೆ ಮಾಡ್ತೇನೆ ವಿನಃ ರಾಜಕೀಯವಾಗಿ ಮುಂದುವರಿಯುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ ಎಂದು ಹೇಳಿದರು.

ರಾಜಕೀಯವಾಗಿ ಲಕ್ಷ್ಮೀಗೆ ಅನ್ಯಾಯ : ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮಾತನಾಡಿದ, ಶಾಂತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆಂಪಯ್ಯ, ಡಾ.ಲಕ್ಷ್ಮೀ ಅಶ್ವಿನ್ ಗೌಡ ನಮ್ಮ ತಾಲೂಕಿನ ಮಗಳು. ದೇವೇಗೌಡರನ್ನ ಹೆಲಿಕಾಪ್ಟರ್​ನಲ್ಲಿ ಕರೆದುಕೊಂಡು ಬಂದಿದ್ದನ್ನ ನೋಡಿದೆ. ರಾಜಕೀಯವಾಗಿ ಅವರಿಗೆ ಸಾಕಷ್ಟು ಅನ್ಯಾಯವಾಗಿದೆ. ಮುಂದಿನ ಅವರ ರಾಜಕೀಯ ನಿರ್ಧಾರ ಅವರಿಗೆ ಬಿಟ್ಟಿದ್ದು. ಅವರಿಗೆ ನಮ್ಮೆಲ್ಲರ ಸಹಕಾರ ಸದಾ ಇರಲಿದೆ ಎಂದು ನುಡಿದರು.

ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.

 

RELATED ARTICLES

Related Articles

TRENDING ARTICLES