ನವದೆಹಲಿ: ಕೃಷಿ ಕಾನೂನಿನ ಬಗ್ಗೆ ಒಂದು ವರ್ಷದಿಂದ ನಡೆಯುತ್ತಿರುವ ರೈತರ ಹೋರಾಟ ಎಲ್ಲರಿಗೂ ಗೊತ್ತು. ಅದನ್ನು ಕೇಂದ್ರ ಸರಕಾರ ಯಾವುದೇ ಚರ್ಚೆಯಿಲ್ಲದೆ ಹಿಂಪಡೆದ ಬಗ್ಗೆ ವಿಪಕ್ಷಗಳು ಟೀಕಿಸಿ ಕಲಾಪಕ್ಕೆ ಬಹಿಷ್ಕಾರ ಹಾಕಿದ್ದರು. ಜೊತೆಗೆ 12 ಮಂದಿ ಸಂಸದರನ್ನು ರಾಜ್ಯ ಸಭೆಯಿಂದ ಸಸ್ಪೆಂಡ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ನಾಸಿರ್ ಹುಸೆನ್ ಸಸ್ಪೆಂಡ್ ಆಗಿರುವ ಆದೇಶ ವಾಪಸ್ ಪಡೆಯುವ ತನಕ ಸತ್ಯಾಗ್ರಹ ಮುಂದುವರೆಯಲಿದೆ ಎಂದಿದ್ದಾರೆ.
ಕಳೆದ ಬಾರಿಯೂ ಅಧಿವೇಶನದ ಸಮಯದಲ್ಲಿ ಎಂಟು ಜನರನ್ನು ಸಸ್ಪೆಂಡ್ ಮಾಡಲಾಗಿತ್ತು. ಆಗ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಒತ್ತಾಯ ಮಾಡಿದ್ದೆವು. ಆದರೆ ಈಗ ನಾವು ಆಗ ಇಟ್ಟಿದ್ದ ಬೇಡಿಕೆ ಈಡೇರಿದೆ. ಆದರೆ ಈಗಲೂ ಸರಕಾರ ಯಾವುದೇ ಚರ್ಚೆಯಿಲ್ಲದೆ ಕೃಷಿ ಕಾನೂನನ್ನು ಹಿಂಪಡೆಯುವ ಮೂಲಕ ತನ್ನ ಸರ್ವಾಧಿಕಾರ ಧೋರಣೆಯನ್ನು ಮುಂದುವರೆಸಿದೆ. ಅದನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮ ತಪ್ಪು ಬಹಿರಂಗವಾಗಬಾರದೆಂದು ಸಸ್ಪೆಂಡ್ ಮಾಡಿದ್ದಾರೆ. ರೈತರ ಹೋರಾಟದ ಸಮಯದಲ್ಲಿ ಆದ ನಷ್ಟ, ಸಾವು ನೋವುಗಳ ಪರಿಹಾರಕ್ಕೆ ನಾವು ಒತ್ತಾಯ ಮಾಡಿದ್ದೇವೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.