Tuesday, February 4, 2025

ಪಿಂಕ್ ಪೊಲೀಸ್ ದುರ್ವರ್ತನೆ : ಕೋರ್ಟ್​ ತರಾಟೆ

ತಿರುವಂತಪುರಂ : ಕೇರಳದಲ್ಲಿ ನಡೆದ ಪಿಂಕ್ ಪೊಲೀಸ್ ದೌರ್ಜನ್ಯದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ಕುರಿತಾಗಿ ಬಾಲಕಿ ಹಾಕಿರುವ ಕೇಸ್​ಗೆ ಸಂಬಂಧಪಟ್ಟಂತೆ ಕೇರಳ ಹೈಕೋರ್ಟ್​ ಪೋಲಿಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದೆ.

ತನ್ನ ಫೋನ್ ಕದ್ದಿದ್ದಾರೆ ಎಂದು ಆರೋಪಿಸಿ ತಂದೆ ಮತ್ತು ಮಗಳನ್ನು ತಡೆದ ಮಹಿಳಾ ಅಧಿಕಾರಿಯ ವರ್ತನೆಯು ಖಾಕಿಯ ಶುದ್ದ ಅಹಂ ಮತ್ತು ದುರಹಂಕಾರವನ್ನು ಸೂಚಿಸುತ್ತದೆ. ಕೇರಳ ಹೈಕೋರ್ಟಿನ ಜಸ್ಟೀಸ್ ದೇವನ್ ರಾಮಚಂದ್ರನ್ ಘಟನೆಯ ಐದು ನಿಮಿಷಗಳ ವಿಡಿಯೋ ನೋಡಿದ ನಂತರ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗಸ್ಟ್ 27ರಂದು ಕೇರಳದ ಅಟ್ಟಿಂಗಲ್ ನಿವಾಸಿ ಜಯಚಂದ್ರನ್ ತನ್ನ ಎಂಟು ವರ್ಷದ ಮಗಳೊಂದಿಗೆ ಮೂನುಮುಕ್ಕುವಿನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಬೃಹತ್ ಸರಕು ಸಾಗಣೆಯನ್ನು ವೀಕ್ಷಿಸಲು ಬಂದಿದ್ದರು. ಆ ಸಮಯದಲ್ಲಿ ಟ್ರಾಫಿಕ್ ಕಂಟ್ರೋಲ್​ಗೆ ನಿಯೋಜಿಸಲ್ಪಟ್ಟಿದ್ದ ರಂಜಿತಾ ಎಂಬ ಪಿಂಕ್ ಪೊಲೀಸ್ ಅಧಿಕಾರಿಯು ತನ್ನ ಕಾರಿನಲ್ಲಿದ್ದ ಫೋನನ್ನು ಇಬ್ಬರೂ ಕದ್ದಿದ್ದಾರೆ ಎಂದು ಆರೋಪಿಸಿ ಅವರನ್ನು ಹಿಂಸೆಗೆ ಗುರಿಪಡಿಸಿದ್ದಳು.

ವೈರಲ್ ಆಗಿರುವ ವಿಡಿಯೋದಲ್ಲಿ ಅಧಿಕಾರಿ ಮತ್ತು ಅವಳ ಸಹೊದ್ಯೋಗಿ, ತಂದೆ ಹಾಗು ಮಗಳಿಗೆ ಕಿರುಕುಳ ನೀಡುವುದು ಮತ್ತು ಅವರನ್ನು ಪರೀಕ್ಷಿಸುವುದು ಕಂಡುಬಂದಿದೆ. ಈ ಘಟನೆಯಿಂದ ಮಗು ಮಾನಸಿಕವಾಗಿ ಜರ್ಜರಿತವಾಗಿದೆ.

ವಿಡಿಯೋದಲ್ಲಿ ಎಂಟು ವರ್ಷದ ಮಗು ಪ್ರಾರಂಭದಿಂದ ಕೊನೆಯವರೆಗೂ ಆತಂಕದಿಂದ ಅಳುತ್ತಿದ್ದರೂ ಆ ಮಹಿಳಾ ಪೊಲೀಸ್ ಅಧಿಕಾರಿ ಅವಳನ್ನು ಸಮಾಧಾನಪಡಿಸುವ ಗೋಜಿಗೆ ಹೋಗದೆ ಆ ಮಗು ಹಾಗೂ ಅವಳ ತಂದೆಯನ್ನು ದರ್ಪದಿಂದ ಪ್ರಶ್ನಿಸುವ ಹಾಗೂ ತಡೆಯುವ ಕೆಲಸವನ್ನು ಮಾಡಿರುವುದು ಅಮಾನವೀಯ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ. ಮಹಿಳೆ ಮತ್ತು ತಾಯಿಯೂ ಆಗಿರುವ ಅಧಿಕಾರಿಯು ಮಗುವಿನ ಅಳುವನ್ನು ಕಣ್ಣೀರನ್ನು ನೋಡಿ ಭಾವುಕರಾಗಿ ಆ ಮಗುವಿಗೆ ಸಾಂತ್ವನ ಹೇಳಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ.
ಅಗಸ್ಟ್ 27ರಂದು ನಡೆದ ಈ ಘಟನೆಯಿಂದ ಮಗು ತೀವ್ರ ಭಾವನಾತ್ಮಕ ಮತ್ತು ಮಾನಸಿಕ ಯಾತನೆಯಿಂದ ನರಳುತ್ತಿದೆ ಹಾಗೂ ಅವಳಿಗೆ ಕೊಡುತ್ತಿರುವ ಚಿಕಿತ್ಸೆಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ. ಇದುವರೆಗೂ ಪೊಲೀಸರು ಮಗು ಮತ್ತು ತಂದೆಯ ಹೇಳಿಕೆಯನ್ನು ಪಡೆದಿಲ್ಲದಿರುವುದರ ಬಗ್ಗೆ ಗಮನಹರಿಸಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಕೇಳಿದೆ.

ಪಿಂಕ್ ಪೊಲೀಸ್ ಅಧಿಕಾರಿಯ ವರ್ಗಾವಣೆ ಆದೇಶ ಮತ್ತು ಆ ಬಗ್ಗೆ ತೆಗೆದುಕೊಳ್ಳುವ ನಿರ್ಧಾರವನ್ನು ಡಿಸೆಂಬರ್ 7ರ ಮುಂದಿನ ವಿಚಾರಣೆಯ ದಿನಾಂಕದೊಳಗೆ ನ್ಯಾಯಾಲಯದ ಮುಂದೆ ಇಡುವಂತೆ ನಿರ್ದೇಶಿಸಿದೆ. ಪ್ರಕರಣದ ವಿಚಾರಣೆಯಲ್ಲಿ ಅಧಿಕಾರಿಯು ಕ್ಷಮೆಯಾಚಿಸಿದ್ದರೆ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದಿತ್ತು, ಆದರೆ ಇಡೀ ಪೊಲೀಸ್ ಪಡೆ ಆಕೆಯ ಕ್ರಮವನ್ನು ಸಮರ್ಥಿಸಲು ಪ್ರಯತ್ನಿಸುತ್ತಿದೆ ಆದ್ದರಿಂದ ಈ ಪ್ರಕರಣವನ್ನು ಹಾಗೆಯೇ ಬಿಡಲಾಗದು ಎಂದು ಕೋರ್ಟ್​ ತೀರ್ಮಾನಿಸಿದೆ.

ಮಹಿಳಾ ಪಿಂಕ್ ಪೊಲೀಸ್ ಅಧಿಕಾರಿಯ ನಿರ್ಲಕ್ಷ್ಯವೇ ಇಡೀ ಘಟನೆಗೆ ಕಾರಣವಾಗಿದ್ದು, ಅವಳು ತನ್ನ ಫೋನ್ ಅನ್ನು ತಾನೆ ನೋಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಪುಟ್ಟ ಬಾಲಕಿ ಹಾಗೂ ತಂದೆಯನ್ನು ದಂಡಿಸಿರುವುದು ಅಮಾನವೀಯ. ತನ್ನ ಮೂಲಭೂತ ಹಕ್ಕನ್ನು ಉಲ್ಲಂಘಿಸಿರುವ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ಹಾಗೂ ನ್ಯಾಯ ಕೋರಿ ಎಂಟು ವರ್ಷದ ಬಾಲಕಿ ಸಲ್ಲಿಸಿರುವ ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

RELATED ARTICLES

Related Articles

TRENDING ARTICLES