Wednesday, January 22, 2025

ಭಾರತಕ್ಕೆ ಬರಲಿವೆ 2 ಸೆಮಿ ಕಂಡಕ್ಟರ್​

ಸೆಮಿ ಕಂಡಕ್ಟರ್​ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಿದ್ದ ಚೀನಾ ದೇಶದ ಸೊಕ್ಕು ಮುರಿಯೋದಕ್ಕೆ ಭಾರತ ಈ ಹಿಂದೆ ಹಲವು ಯೋಜನೆಗಳನ್ನ ರೂಪಿಸಿತ್ತು. ಅದರಂತೆ ತೈವಾನ್​​ ಜೊತೆ ಅಗ್ರಿಮೆಂಟ್​ ಕೂಡ ಮಾಡ್ಕೊಂಡಿತ್ತು. ಆದ್ರೆ ಈ ಆಗ್ರಿಮೆಂಟ್​ ಕಾರ್ಯ ರೂಪಕ್ಕೆ ಬರೋ ಮೊದಲೇ ಭಾರತ ಮುನ್ನಡೆಯನ್ನ ಸಾಧಿಸ್ತಾ ಇದೆ. ಅರೆ, ಇದು ಹೇಗಪ್ಪ ಸಾಧ್ಯ ಅಂತಿದ್ದೀರಾ?

ಇತ್ತೀಚೆಗೆ ಜಾಗತಿಕವಾಗಿ ಖರೀದಿಸುವ ಎಲ್ಲಾ ಎಲೆಕ್ಟ್ರಾನಿಕ್​ ವಸ್ತುಗಳ ಬೆಲೆ ವಿಪರೀತವಾಗಿ ಏರಿಕೆಯಾಗ್ತಾ ಇದೆ. ಅದ್ರಲ್ಲೂ ವಾಹನಗಳ ಬೆಲೆಯಂತೂ ಜನಸಾಮಾನ್ಯರು ಕೊಳ್ಳಲು ಪರದಾಡುವ ಪರಿಸ್ಥಿತಿ ಉಂಟಾಗ್ತಾ ಇದೆ. ಹಾಗಾಗಿ ಪರ್ವಾಗಿಲ್ಲ ಕಡಿಮೆ ಬೆಲೆಯ ವಾಹನವನ್ನಾದ್ರೂ ಕೊಳ್ಳೊಣ ಅಂತ ಮಾರುಕಟ್ಟೆಗೆ ವಾಹನದ ಬೇಡಿಕೆ ಇಟ್ಟರೆ ಬೇಡಿಕೆ ಇರೋ ವಾಹನಗಳನ್ನ ಪೂರೈಸೋದಕ್ಕೆ ಕಂಪನಿಗಳಿಗೆ ಸಾಧ್ಯವಾಗ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ವಾಹನ ತಯಾರಿಕಾ ಕಂಪನಿಗಳು ಈ ವರ್ಷ ಶೇ. 20 ರಿಂದ 25ರಷ್ಟು ವಾಹನ ತಯಾರಿಕೆ ಕಡಿಮೆಯಾಗಿದೆ ಅಂತ ಹೇಳಿಕೊಂಡಿವೆ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಬೇಡಿಕೆಯ ಕೊರತೆ ಅಂತ ಎಲ್ಲರೂ ಭಾವಿಸ್ತಾ ಇದ್ದಾರೆ. ಆದರೆ ಡಿಮಾಂಡ್​ ಕೊರತೆಯಲ್ಲ, ಬದಲಿಗೆ ಸಪ್ಲೈ ಕೊರತೆ ಅಂತ ಹಲವು ವರದಿಗಳು ಹೇಳುತ್ತಿದೆ.

ಅರೆ ಯಾಕೆ ಈ ರೀತಿ ಸಮಸ್ಯೆ ಆಗ್ತಾ ಇದೆ? ಒಂದು ವೇಳೆ ಕೊರೋನಾ ಹೊಡೆತದಿಂದ ಹೀಗಾಗಿದ್ಯಾ? ಅನ್ನೋ ಪ್ರಶ್ನೆ ಸಾಧಾರಣವಾಗಿ ಎಲ್ಲರನ್ನ ಕಾಡ್ತಿದೆ. ಆದರೆ ಇದು ಕೊರೋನಾ ಹೊಡೆತದ ಸಮಸ್ಯೆನೂ ಅಲ್ಲ, ಬೇಡಿಕೆಯ ಸಮಸ್ಯೆನೂ ಅಲ್ಲ. ಬದಲಿಗೆ ವಾಹನ ಉತ್ಪಾದನೆಗೆ ಬೇಕಾದ ಸೆಮಿ ಕಂಡಕ್ಟರ್​ ಸಮಸ್ಯೆ. ಹೌದು ನಾವು ಬಳಸುವ ಮೊಬೈಲ್​ನಿಂದ ಹಿಡಿದು ಏನೆಲ್ಲ ಎಲೆಕ್ಟ್ರಾನಿಕ್ಸ್​ ವಸ್ತುಗಳನ್ನ ಬಳಸ್ತೇವೆಯೋ ಅವೆಲ್ಲದಕ್ಕೂ ಈ ಸೆಮಿ ಕಂಡಕ್ಟರ್​ ಚಿಪ್ಪಿನ ಅಗತ್ಯ ಹೆಚ್ಚಿದೆ. ಒಂದು ವೇಳೆ ಈ ಸೆಮಿ ಕಂಡಕ್ಟರ್​ ಅಥವಾ ಚಿಪ್​ಗಳು ಇಲ್ಲ ಅಂದ್ರೆ ನಾವು ಯಾವುದೇ ಕಾರಣಕ್ಕೂ ಯಾವ ಎಲೆಕ್ಟ್ರಾನಿಕ್​​ ವಸ್ತುಗಳನ್ನೂ ಬಳಸೋದಕ್ಕೆ ಸಾಧ್ಯವಿಲ್ಲ. ಹಾಗಾಗಿ ಈ ಸೆಮಿ ಕಂಡಕ್ಟರ್​ಗೆ ಜಾಗತಿಕವಾಗಿ ಹೆಚ್ಚು ಬೇಡಿಕೆಯಿದೆ.

ಹೀಗಾಗಿ ಇದರ ವಾಲ್ಯೂ ಗೊತ್ತಿರೋದ್ರಿಂದಲೇ ಚೀನಾ ಹಾಗು ತೈವಾನ್​ ದೇಶಗಳು ಸೆಮಿ ಕಂಡಕ್ಟರ್​ ಕ್ಷೇತ್ರದಲ್ಲಿ ಯಶಸ್ಸನ್ನ ಸಾಧಿಸಿವೆ. ಇನ್ನು ನಮ್ಮ ದೇಶದಲ್ಲೂ ಸೆಮಿ ಕಂಡಕ್ಟರ್​ ಚಿಪ್​ಗಳನ್ನು DRDO ತಯಾರಿಸುತ್ತೆ. ಹಾಗೆಯೇ ಅದನ್ನ ಕೇವಲ ರಕ್ಷಣಾ ಸಾಮಾಗ್ರಿಗಳಿಗೆ ಬಳಸುತ್ತೆ. ಹಾಗಾಗಿ ಈ ಸೆಮಿ ಕಂಡಕ್ಟರ್​ಗಳು ಮಾರುಕಟ್ಟೆಗೆ ಲಭ್ಯವಿಲ್ಲ.

ಸೆಮಿ ಕಂಡಕ್ಟರ್​​ಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಈ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿರುವ ಚೀನಾ ಹಾಗು ತೈವಾನ್​ ಈಗ ಇಡೀ ವಿಶ್ವಕ್ಕೆ ಸೆಮಿ ಕಂಡಕ್ಟರ್​ಗಳನ್ನ ಸರಬರಾಜು ಮಾಡುವ ದೇಶಗಳಾಗಿ ಹೊರಹೊಮ್ಮಿವೆ. ಸದ್ಯಕ್ಕೆ ಈ ಎರಡೂ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ಸೆಮಿ ಕಂಡಕ್ಟರ್​ಗಳಿಗೆ ವಿಪರೀತವಾದ ಬೇಡಿಕೆ ಇದೆ. ತೈವಾನ್​ನಲ್ಲಿ ಉತ್ಪಾದನೆಯಾಗುವ ಸೆಮಿ ಕಂಡಕ್ಟರ್​ಗಳನ್ನ ಅಮೆರಿಕ ಅತಿ ಹೆಚ್ಚು ಖರೀದಿಸ್ತಾ ಇದೆ. ಇನ್ನು ಚೀನಾದಲ್ಲಿ ಉತ್ಪಾದನೆಯಾಗುವ ಸೆಮಿ ಕಂಡಕ್ಟರ್​ಗಳು ಚೀನಾಗೆ ಸಾಲದೆ ತಡಕಾಡ್ತಾ ಇದೆ..

ಇನ್ನು ಈ ಕುತಂತ್ರಿ ಚೀನಾ ಇಲ್ಲೂ ಕೂಡ ತನ್ನ ಕ್ಯಾಪಿಟಲಿಸ್ಟ್​ ಬುದ್ಧಿ ತೋರಿಸ್ತಿದೆ. ಕಳೆದ ಕೆಲ ವರ್ಷಗಳಿಂದ ತೈವಾನ್​ನಲ್ಲಿ ಉತ್ಪಾದನೆಯಾಗುವ ಬಹುತೇಕ ಸೆಮಿ ಕಂಡಕ್ಟರ್​ಗಳನ್ನ ಚೀನಾ ಖರೀದಿ ಮಾಡ್ತಾ ಇದೆ. ಈ ಮೂಲಕ ಅಮೆರಿಕ ಸೇರಿದಂತೆ ಎಲ್ಲಾ ದೇಶಗಳು ಚೀನಾದ ಮೇಲೆ ಅವಲಂಬಿತವಾಗುವಂತೆ ಮಾಡ್ತಾ ಇದೆ. ಇನ್ನು ಕೆಲ ವರದಿಗಳ ಪ್ರಕಾರ ಚೀನಾ ಅತೀ ಹೆಚ್ಚು ಸೆಮಿ ಕಂಡಕ್ಟರ್​ಗಳನ್ನ ಶೇಖರಿಸಿಟ್ಟುಕೊಂಡು ಬೇಡಿಕೆ ಇದ್ದಾಗ ಪೂರೈಕೆ ಮಾಡದೆ, ಬೆಲೆ ಏರಿಕೆಯಾಗೋ ಹಾಗೆ ಮಾಡ್ತಾ ಇದೆ ಎನ್ನಲಾಗಿದೆ.

ಚೀನಾದ ಈ ನರಿ ಬುದ್ಧಿಯ ಬಗ್ಗೆ ಮೊದಲೇ ಅರ್ಥ ಮಾಡಿಕೊಂಡ ಭಾರತ, ಸೆಮಿ ಕಂಡಕ್ಟರ್​ ಉತ್ಪಾದನೆಗೆ ತೈವಾನ್​ ಜೊತೆ ಅಗ್ರಿಮೆಂಟ್​ ಮಾಡ್ಕೊಂಡಿತ್ತು. ಈ ಅಗ್ರಿಮೆಂಟ್​ ಸುಮಾರು 7.50 ಬಿಲಿಯನ್​ ಡಾಲರ್​ ಮೊತ್ತದ್ದಾಗಿದ್ದು, ಇದಿನ್ನು ಕೇವಲ ಪೇಪರ್​ ಮಾತುಕತೆಯಲ್ಲಿ ಉಳಿದುಕೊಂಡಿದೆ. ಇನ್ನುಇದು ಪೇಪರ್​ ಮಾತುಕತೆಯಿಂದ ಕಾರ್ಯರೂಪಕ್ಕೆ ಬರುವಷ್ಟರಲ್ಲಿ ಇನ್ನೂ 2-3 ವರ್ಷ ಬೇಕಾಗುತ್ತೆ ಅಂತ ಹೇಳಲಾಗ್ತಿದೆ. ಅದರ ಜೊತೆಗೆ ಈ ಸೆಮಿ ಕಂಡಕ್ಟರ್​ ಅಗ್ರಿಮೆಂಟ್​ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇನ್ನು ಕೂಡ ಲಭ್ಯವಾಗಿಲ್ಲ. ಹಾಗಾಗಿ ಇದು ಕೇವಲ ಪೇಪರ್​ ಅಗ್ರಿಮೆಂಟ್​ ಆಗಿ ಉಳಿದುಕೊಂಡು ಬಿಡುತ್ತಾ ಅನ್ನೋ ಅನುಮಾನ ಕೂಡ ಕಾಡೋದಕ್ಕೆ ಶುರುವಾಗಿದೆ. ಇವೆಲ್ಲದರ ಮಧ್ಯೆ ಇದೀಗ ಟಾಟಾ ಸಂಸ್ಥೆ ಸೆಮಿ ಕಂಡಕ್ಟರ್​ ಕ್ಷೇತ್ರಕ್ಕೆ ಕಾಲಿಡ್ತಾ ಇದ್ದು ಆ ಮೂಲಕ ಭಾರತದ ಸೆಮಿ ಕಂಡಕ್ಟರ್​ ವಲಯದಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿದೆ.

ಟಾಟಾ ಸಂಸ್ಥೆ ಸೆಮಿ ಕಂಡಕ್ಟರ್​ ಕ್ಷೇತ್ರಕ್ಕೆ ಬರ್ತಾ ಇರೋದು ಭಾರತದ ಎಲೆಕ್ಟ್ರಾನಿಕ್ ಕ್ಷೇತ್ರಕ್ಕೆ ಹೊಸ ಆಶಾಕಿರಣ ಬಂದಂತಾಗಿದೆ. ಒಂದು ವೇಳೆ ಟಾಟಾ ಸಂಸ್ಥೆ ಇಡೀ ವಿಶ್ವಕ್ಕೆ ಸೆಮಿ ಕಂಡಕ್ಟರ್​ ಉತ್ಪನ್ನಗಳನ್ನ ಪೂರೈಕೆ ಮಾಡೋದಕ್ಕೆ ಸಾಧ್ಯವಾಗ್ದೆ ಇದ್ರೂ ಕನಿಷ್ಟ ಭಾರತಕ್ಕೆ ಬೇಕಾದ ಸೆಮಿ ಕಂಡಕ್ಟರ್ ಪೂರೈಕೆ ಮಾಡಿದ್ರೂ ಅಲ್ಲಿ ವಾರ್ಷಿಕ ಸರಿಸುಮಾರು 3 ರಿಂದ 4 ಬಿಲಿಯನ್​ ಡಾಲರ್​ ವ್ಯವಹಾರ ನಡೆಯೋ ಸಾಧ್ಯತೆ ಇದೆ. ಒಂದು ವೇಳೆ ಇದಕ್ಕೂ ಕಡಿಮೆ ವ್ಯವಹಾರ ನಡೆದ್ರು ಕೂಡ, ಅದು ಭಾರತಕ್ಕೆ ಲಾಭವಾಗೋದ್ರಲ್ಲಿ ಅನುಮಾನವಿಲ್ಲ.

ಯಾಕಂದ್ರೆ ಇವತ್ತು ಭಾರತ ವಿದೇಶದಿಂದ ಆಮದು ಮಾಡಿಕೊಳ್ತಾ ಇರೋ ಸೆಮಿ ಕಂಡಕ್ಟರ್​ಗಳ ಮೌಲ್ಯ ಮೂರುವರೆಯಿಂದ ನಾಲ್ಕು ಬಿಲಿಯನ್​ ಡಾಲರ್, ಅಂದ್ರೆ ಸುಮಾರು 28 ಸಾವಿರದಿಂದ 30 ಸಾವಿರ ಕೋಟಿ ರೂಪಾಯಿ​ ಅಂತ ಹೇಳಲಾಗ್ತಾ ಇದೆ. ಈಗ ಭಾರತ ವಿಶ್ವದಲ್ಲಿ ಅತಿ ಹೆಚ್ಚು ಸೆಮಿ ಕಂಡಕ್ಟರ್​ಗಳನ್ನ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ 11ನೇ ಸ್ಥಾನದಲ್ಲಿದೆ. ಮತ್ತೊಂದು ಗಮನಿಸಬೇಕಾದ ಅಂಶ ಅಂದ್ರೆ, ನಾವು ಹೆಚ್ಚು ಸೆಮಿ ಕಂಡಕ್ಟರ್​ ಉತ್ಪನ್ನಗಳನ್ನ, ಅಂದ್ರೆ ಶೇ.37ರಷ್ಟನ್ನ ಚೀನಾದಿಂದಲೇ ಆಮದು ಮಾಡಿಕೊಳ್ತಾ ಇದ್ದೀವಿ. ಹೀಗಾಗಿ ಇದರ ಬಗ್ಗೆ ಅರಿವಿರೋ ಟಾಟಾ ಸಂಸ್ಥೆ ಸುಮಾರು 2 ಸಾವಿರ ಕೋಟಿ ರೂಪಾಯಿಗಳನ್ನ ಹೂಡಿಕೆ ಮಾಡೋದಕ್ಕೆ ಸಿದ್ಧವಾಗಿದೆ. ಇದಕ್ಕಾಗಿ ದಕ್ಷಿಣ ಭಾರತದ ಕೆಲ ಸರ್ಕಾರಗಳೊಂದಿಗೆ ಮಾತುಕತೆಯನ್ನ ಕೂಡ ನಡೆಸಲು ಸಿದ್ಧತೆ ನಡೆಸಿದೆ.

ಒಂದು ವೇಳೆ ಟಾಟಾದ ಈ ಪ್ರಾಜೆಕ್ಟ್​ ಯಶಸ್ವಿಯಾಗಿ ಕಾರ್ಯ ರೂಪಕ್ಕೆ ಬಂದ್ರೆ ಸುಮಾರು 4 ಸಾವಿರ ಮಂದಿಗೆ ನೇರ ಉದ್ಯೋಗವನ್ನ ಒದಗಿಸಿಕೊಡಲಿದೆ. ಇನ್ನು ಪರೋಕ್ಷವಾಗಿ 2 ಸಾವಿರ ಮಂದಿಗೆ ಕೆಲಸ ಸಿಗಲಿದೆ. ಹೀಗಾಗಿ ಈ ಯೋಜನೆಯ ಬಗ್ಗೆ ಕರ್ನಾಟಕ, ತಮಿಳು ನಾಡು, ತೆಲಂಗಾಣ ಸರ್ಕಾರಗಳು ಹೆಚ್ಚು ಆಸಕ್ತಿಯನ್ನ ತೋರಿಸ್ತಿವೆ. ಮುಂದಿನ ದಿನಗಳಲ್ಲಿ ಯಾವ ರಾಜ್ಯಕ್ಕೆ ಟಾಟಾ ಸಂಸ್ಥೆಯ ಈ ಪ್ರಾಜೆಕ್ಟ್​ ಹೋಗುತ್ತೆ ಅನ್ನೋ ಕುತೂಹಲ ಮನೆಮಾಡಿರೋದಂತು ಸುಳ್ಳಲ್ಲ.

ಒಟ್ಟಾರೆಯಾಗಿ ಟಾಟಾ ಸಂಸ್ಥೆ ಸೆಮಿ ಕಂಡಕ್ಟರ್ ಕ್ಷೇತ್ರಕ್ಕೆ ಲಗ್ಗೆ ಇಡ್ತಾ ಇರೋದು ಜಾಗತಿಕವಾಗಿ ಸುದ್ದಿ ಮಾಡ್ತಾ ಇದೆ. ಒಂದು ವೇಳೆ ಅತಿವೇಗವಾಗಿ ಈ ಪ್ರಾಜೆಕ್ಟ್​ ಕಾರ್ಯ ರೂಪಕ್ಕೆ ಬಂದ್ರೆ ಚೀನಾ ದೇಶಕ್ಕೆ ಬಹುದೊಡ್ಡ ಹೊಡೆತ ಬೀಳೋದ್ರಲ್ಲಿ ಅನುಮಾನವಿಲ್ಲ.

RELATED ARTICLES

Related Articles

TRENDING ARTICLES