ಬೆಂಗಳೂರು : ದೇಶದೆಲ್ಲೆಡೆ ಕೊರೊನಾ ರೂಪಾಂತರಿ ವೈರಸ್‌ನ ಆತಂಕ ಹೆಚ್ಚಾಗ್ತಿರುವ ಬೆನ್ನಲ್ಲೇ ಲಾಕ್‌ಡೌನ್ ಕುರಿತು ಸುಳ್ಳು ಸುದ್ದಿ ಹರಿದಾಡುತ್ತಿದೆ.
ಈ ಹಿನ್ನೆಲೆ ಲಾಕ್‌ಡೌನ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಘೋಷಣೆ ಮಾಡುವವರೆಗೂ ಲಾಕ್‌ಡೌನ್ ಮಾಡಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು. ಈಗಾಗಲೇ ಜನ ಬಹಳ ನಷ್ಟ ಅನುಭವಿಸುತ್ತಿದ್ದಾರೆ. ಉದ್ಯೋಗವನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ ಮತ್ತೆ ಆತಂಕ ಸೃಷ್ಟಿ ಮಾಡೋದು ಬೇಡ. ಸಾಮಾಜಿಕ ಜಾಲತಾಣಗಳು ಈ ಬಗ್ಗೆ ಎಚ್ಚರವಹಿಸಬೇಕು. ಸಾಮಾಜಿಕ ಜಾಲತಾಣಗಳು ತಪ್ಪು ಸುದ್ದಿ ಹರಡಿಸಬಾರದು ಎಂದು ಹೇಳಿಕೆ ನೀಡಿದ್ದಾರೆ.
ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ನಾಳೆ (ಮಂಗಳವಾರ) ತಜ್ಞರ ಜೊತೆ ಬೆಳಗ್ಗೆ 10 ಗಂಟೆಗೆ ಸಭೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸುಧಾಕರ್ ತಿಳಿಸಿದರು. ಕಳೆದ 12 ದಿನಗಳಲ್ಲಿ ಆಫ್ರಿಕನ್ ದೇಶಗಳಿಂದ ರಾಜ್ಯಕ್ಕೆ ಬಂದವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ‘ಒಮಿಕ್ರಾನ್’ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ಆದ್ರೆ ಇದು ಅಷ್ಟೊಂದು ಗಂಭೀರವಾಗಿಲ್ಲ ಎಂದು ಹೇಳಿದ್ದಾರೆ. ನಾಡಿಬಡಿತ ಹೆಚ್ಚಾಗುವುದು, ವಾಂತಿ, ಸುಸ್ತು ಸೋಂಕಿನ ಲಕ್ಷಣವಾಗಿದೆ. ಆದ್ರೆ ಇದು ಯಾವುದೇ ವರದಿಯಲ್ಲಿರುವ ಅಂಶಗಳಲ್ಲ. ಆಫ್ರಿಕನ್ ದೇಶದಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರು ನೀಡಿರುವ ಮಾಹಿತಿ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ 63 ವರ್ಷದ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಸೋಂಕಿತ ವ್ಯಕ್ತಿಯ ಲ್ಯಾಬ್ ವರದಿ ಇಂದು ಬರಲಿದೆ. ICMR ಜೊತೆಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ವರದಿ ಬಂದ ಬಳಿಕ ಮಾಹಿತಿಯನ್ನ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.