ಕಾರವಾರ : ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಮಟ್ಟಿಗೆ ಅನಂತಕುಮಾರ ಹೆಗಡೆ ಹೈಕಮಾಂಡ್ ಇದ್ದಂತೆ. ಯಾವುದೇ ಚುನಾವಣೆಗಳಿದ್ದರೂ ಸಹ ಅವರು ಸೂಚಿಸಿದ ಅಭ್ಯರ್ಥಿಗೆ ಮೊದಲು ಪ್ರಾಶಸ್ತ್ಯ ನೀಡಲಾಗುತ್ತದೆ ಅನ್ನೋದು ಪಕ್ಷದ ವಲಯದಲ್ಲೇ ಕೇಳಿಬರುತ್ತಿದ್ದ ಮಾತುಗಳು. ಆದರೆ ಈ ಬಾರಿ ಪರಿಷತ್ ಚುನಾವಣೆ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದರೂ ಸಹ ಅನಂತಕುಮಾರ ಮಾತ್ರ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗಾಗಲಿ ಅಥವಾ ಅಭ್ಯರ್ಥಿ ಪರ ಪ್ರಚಾರದಲ್ಲಾಗಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದು ಪಕ್ಷದವರಲ್ಲೂ ಸಹ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದು, ಪಕ್ಷದ ಮುಖಂಡರುಗಳಿಗೂ ಇರಿಸು ಮುರುಸು ಉಂಟುಮಾಡಿದೆ.
ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಕಾರವಾರದ ಗಣಪತಿ ಉಳ್ವೇಕರ್‌ಗೆ ಟಿಕೆಟ್ ನೀಡಲಾಗಿದ್ದು, ಇವರು ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಆದರೆ ಅನಂತಕುಮಾರ ಹೆಗಡೆ ಸೂಚಿಸಿದ್ದ ಅಭ್ಯರ್ಥಿಗೆ ಟಿಕೆಟ್ ಸಿಗದ ಹಿನ್ನಲೆ ಅವರು ಮುನಿಸಿಕೊಂಡಿದ್ದು, ಈ ಕಾರಣದಿಂದಲೇ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡ ಜನಸ್ವರಾಜ್ ಯಾತ್ರೆ ವೇಳೆಯಲ್ಲಿಯೂ ಅನಂತಕುಮಾರ ಗೈರಾಗಿದ್ದರು. ಈ ವೇಳೆ ದೆಹಲಿಯಲ್ಲಿದ್ದ ಅನಂತಕುಮಾರ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಬೆಂಗಳೂರಿನಲ್ಲಿ ಉಳಿದುಕೊಳ್ಳುವ ಮೂಲಕ ಆ ಕಾರ್ಯಕ್ರಮದಿಂದಲೂ ದೂರ ಉಳಿದಿದ್ದರು. ಅಲ್ಲದೆ ಇದೀಗ ಪ್ರಚಾರ ವೇಳೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನ ತೋರಿಸಿಕೊಟ್ಟಿದೆ. ಅನಂತಕುಮಾರ ಹೆಗಡೆ ಗೈರು ಎದ್ದು ಕಾಣುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ ಹೆಗಡೆ ಫೈರ್ ಬ್ರ್ಯಾಂಡ್ ಎಂದೇ ಪ್ರಸಿದ್ಧಿ ಪಡೆದಿರುವ ಪ್ರಭಾವಿ ನಾಯಕ. ಪಕ್ಷದಲ್ಲೂ ಸಾಕಷ್ಟು ಪ್ರಭಾವವನ್ನ ಹೊಂದಿರುವ ಅನಂತಕುಮಾರ ಹೆಗಡೆಗೆ ಜಿಲ್ಲೆಯಲ್ಲಿ ಸಾಕಷ್ಟು ಅಭಿಮಾನಿ ಬಳಗವಿದ್ದು, ಪರಿಷತ್ ಚುನಾವಣಾ ಪ್ರಚಾರದಲ್ಲಿ ಅವರ ಹಾಜರಾತಿಯಿಂದ ಬಹುಪಾಲು ಮತಗಳನ್ನ ಸೆಳೆಯಲು ಅನುಕೂಲವಾಗುತ್ತಿತ್ತು. ಆದರೆ ಅನಂತಕುಮಾರ ಮಾತ್ರ ಬಹಿರಂಗವಾಗಿ ಎಲ್ಲಿಯೂ ಅಭ್ಯರ್ಥಿ ಪರ ಬೆಂಬಲ ವ್ಯಕ್ತಪಡಿಸದೆ ಚುನಾವಣಾ ಕಣದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಇದು ಅನಂತಕುಮಾರ ಬೆಂಬಲಿಗರಿಗೆ ಸಾಕಷ್ಟು ಗೊಂದಲ ಉಂಟುಮಾಡಿದ್ದು, ಪರೋಕ್ಷವಾಗಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಮಹತ್ವದ ಚುನಾವಣೆಯ ಸಂದರ್ಭದಲ್ಲೇ ಪಕ್ಷದ ಪ್ರಭಾವಿ ಮುಖಂಡ ಅನಂತಕುಮಾರ ಹೆಗಡೆ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸದಿರೋದು ಬಿಜೆಪಿ ನಾಯಕರುಗಳಿಗೆ ನುಂಗಲಾರದ ತುತ್ತಾಗಿದ್ದು, ಇದು ಚುನಾವಣೆಯ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಅನ್ನೋದನ್ನ ಕಾದುನೋಡಬೇಕಿದೆ..