Monday, December 23, 2024

ಪಂದ್ಯದಲ್ಲೇ ಶತಕ ಬಾರಿಸಿದ ಶ್ರೇಯಸ್​ ಅಯ್ಯರ್​​

ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ ಪದಾರ್ಪಣೆ ಪಂದ್ಯದಲ್ಲಿಯೇ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಶ್ರೇಯಸ್‌ ಅಯ್ಯರ್‌ ಚೊಚ್ಚಲ ಶತಕ ಸಿಡಿಸುವ ಮೂಲಕ ದಾಖಲೆ ಮಾಡಿದ್ದಾರೆ. ಶುಕ್ರವಾರ ಎರಡನೇ ದಿನದಾಟ ಆರಂಭಿಸಿದ ಶ್ರೇಯಸ್‌ ಅಯ್ಯರ್‌ ಔಟಾಗದೆ 75 ರನ್​​ನಿಂದ ಬ್ಯಾಟಿಂಗ್​​ ಮುಂದುವರಿಸಿ 157 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಶತಕ ಬಾರಿಸಿದ್ರು. ಆ ಮೂಲಕ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿಯೇ ಶತಕ ಸಿಡಿಸಿದ ಭಾರತದ 16ನೇ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಅಯ್ಯರ್‌ ಪಾತ್ರರಾಗಿದ್ದಾರೆ.

ಎರಡನೇ ದಿನದಾಟ ಆರಂಭಿಸಿದ ಶ್ರೇಯಸ್‌ ಅಯ್ಯರ್‌(105), ರವೀಂದ್ರ ಜಡೇಜಾ(50), ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಆಡಲಿಲ್ಲ. ಇವರಿಬ್ಬರ ವಿಕೆಟ್‌ ಪಡೆಯುವಲ್ಲಿ ಟಿಮ್ ಸೌಥಿ ಯಶಸ್ವಿಯಾದರು.

ನಿಯಮಿತ ನಾಯಕ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌ ಅವರಂಥ ಕೀ ಆಟಗಾರರ ಅನುಪಸ್ಥಿತಿಯಲ್ಲಿ ಗುರುವಾರ ಟೆಸ್ಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್‌ ಮನ ಮೋಹಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಮೊದಲನೇ ದಿನ 136 ಎಸೆತಗಳನ್ನು ಎದುರಿಸಿ 75 ರನ್‌ ಗಳಿಸಿದ್ದ ಶ್ರೇಯಸ್‌ ಅಯ್ಯರ್‌, 4 ವಿಕೆಟ್‌ ಕಳೆದುಕೊಂಡಿದ್ದ ಭಾರತ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು.

ನಾಯಕ ವಿರಾಟ್ ಕೊಹ್ಲಿ, ಅನುಭವಿ ರೋಹಿತ್ ಶರ್ಮಾ ಮತ್ತು ಗಾಯಾಳು ಕೆ.ಎಲ್. ರಾಹುಲ್ ಈ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಕೊಹ್ಲಿ ಜಾಗದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದ ಅಯ್ಯರ್, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES