Friday, November 22, 2024

ಭಾರತದ ಬೆಂಬಲಕ್ಕೆ ನಿಂತ ಅಮೆರಿಕನ್​ ಸಂಸದರು

ಭಾರತ ಹಾಗು ರಷ್ಯಾದ ಸಂಬಂಧ ಈ ಹಿಂದಿನಿಂದಲೂ ಬಲಿಷ್ಠವಾಗಿದ್ದು ಅದು ಇತ್ತೀಚೆಗೆ ಸ್ವಲ್ಪ ಹದಗೆಟ್ಟಂತಾಗಿತ್ತು. ಆದ್ರೆ ಇದೀಗ ರಷ್ಯಾದ ಎಸ್​ 400 ಕ್ಷಿಪಣಿ ನಿರೋಧಕ ವ್ಯವಸ್ಥೆ ಭಾರತಕ್ಕೆ ಬರೋದ್ರಿಂದ ಸಂಬಂಧ ಸರಿಹೋಗಲಿದೆ. ಆದ್ರೆ ಈ ವಿಚಾರ ಅಮೆರಿಕಾಗೆ ಸ್ವಲ್ಪ ಇರಿಸು-ಮುರಿಸು ತಂದಿದೆ. ಇದೀಗ ಅಮೆರಿಕಾ ಕಾಟ್ಸಾ ಕಾಯ್ದೆಯ ನಿರ್ಬಂಧವನ್ನ ಭಾರತಕ್ಕೆ ವಿಧಿಸದಂತೆ ಅಲ್ಲಿನ ಸಂಸದರು ಜೋ ಬೈಡನ್​ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದೇನ್ರಿ ಮತ್ತೆ ಅಮೆರಿಕ ಏನಾದ್ರು ಎಡವಟ್ಟು ಮಾಡ್ತಾ ಇದ್ಯಾ ಅಂತ ಯೋಚ್ನೆ ಮಾಡ್ತಾ ಇದ್ದೀರಾ ?

ಅಮೆರಿಕಾ ದೇಶ ಅದ್ಯಾವಾಗ ಅದೇನು​ ತೀರ್ಮಾನ ತೆಗೆದುಕೊಳ್ಳುತ್ತೆ ಅಂತಾ ಯಾರಿಗೂ ಅಂದಾಜು ಮಾಡಕಾಗಲ್ಲ. 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಖಾಸಾ ದೋಸ್ತ್​ಗಳಂತೆ ರಷ್ಯಾ, ಚೀನಾದ ಜೊತೆಗೆ ನಿಂತು ಜಪಾನ್​ ಹಾಗು ಜರ್ಮನಿಯ ವಿರುದ್ಧ ಹೋರಾಡಿದ್ದ ಅಮೆರಿಕಾ, ಬಳಿಕ ರಷ್ಯಾ ಹಾಗು ಚೀನಾವನ್ನ ತನ್ನ ಶತ್ರು ದೇಶಗಳಾಗಿ ನೋಡೋದಕ್ಕೆ ಶುರು ಮಾಡ್ತು. ಇದಕ್ಕೆ ಕಾರಣ ಅಮೆರಿಕಾಗೆ ಈ ರಾಷ್ಟ್ರಗಳು ಪೈಪೋಟಿ ಒಡ್ತಾ ಇರೋದ್ರ ಜೊತೆಗೆ ತನ್ನ ರಾಷ್ಟ್ರದ ಭದ್ರತೆ ದೃಷ್ಟಿ ಅಂತ ಮೇಲ್ನೋಟಕ್ಕೆ ಹೇಳಲಾಗ್ತಿದೆ. ಆದ್ರೆ ಎಲ್ಲಿ ವಿಶ್ವದ ದೊಡ್ಡಣ್ಣನ ಪಟ್ಟಿ ತನ್ನಿಂದ ಕಳಚಿಹೋಗುತ್ತೋ ಅನ್ನೋ ಭಯ ಕಾಡಿದೆ. ವಿಶ್ವದ ದೊಡ್ಡಣ್ಣ ಅಂದ್ರೆ ಅಲ್ಲಿ ಕೇವಲ ನಾಯಕತ್ವ ಮಾತ್ರ ಉಳಿಯೋದಿಲ್ಲ, ಬದಲಿಗೆ ಅಮೆರಿಕಾ ಎಲ್ಲಾ ರಾಷ್ಟ್ರಗಳಿಗೂ ತನ್ನ ಅನಿವಾರ್ಯತೆ ಇರೋ ಹಾಗೆ ಮಾಡುತ್ತೆ. ಎಲ್ಲಾ ದೇಶಗಳ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸೋದಕ್ಕೆ ಮುಂದೆ ಬರುತ್ತೆ. ಯಾವುದಾದ್ರೂ ಎರಡು ರಾಷ್ಟ್ರಗಳ ಮಧ್ಯೆ ಸಮಸ್ಯೆ ಕಂಡು ಬಂದ್ರೆ ಅದನ್ನ ಬಗೆಹರಿಸೋ ನೆಪದಲ್ಲಿ ದೊಡ್ಡ ಮನುಷ್ಯನಾಗೋದಕ್ಕೆ ಪ್ರಯತ್ನಿಸೋದೇ ಈ ರಾಷ್ಟ್ರದ ಕಾಯಕ.

ಹೀಗಾಗಿಯೇ ಅಮೆರಿಕಾ ದೇಶ ಪ್ರಮುಖವಾಗಿ ರಷ್ಯಾ ಹಾಗು ಚೀನಾದೊಂದಿಗೆ ತನ್ನ ಸಂಬಂಧವನ್ನ ಸುಲಭವಾಗಿ ಕಡಿದುಕೊಂಡಿತ್ತು. ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕಾ ತೆಗೆದುಕೊಂಡ ಎಡವಟ್ಟಿನ ನಿರ್ಧಾರ ಎಲ್ರಿಗೂ ಗೊತ್ತೇ ಇದೆ. ಇದೇ ಕಾರಣಕ್ಕೆ ಅಮೆರಿಕಾವನ್ನ ಯಾರೂ ಸುಲಭವಾಗಿ ನಂಬಲ್ಲ.. ಇನ್ನು ಭಾರತ ಕೂಡ ಅಮೆರಿಕಾವನ್ನ ಅಷ್ಟು ಸುಲಭವಾಗಿ ನಂಬಲ್ಲ. ಇದೇ ಕಾರಣಕ್ಕೆ ಅಮೆರಿಕದ ವಿರೋಧದ ನಡುವೆಯೂ ಭಾರತ ರಷ್ಯಾದ ಜೊತೆ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದೋದಕ್ಕೆ ಮುಂದಾಗಿತ್ತು..

ಈ ಬಗ್ಗೆ ಹಲವು ರಾಷ್ಟ್ರಗಳು ಭಾರತಕ್ಕೆ ಅಮೆರಿಕ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ ಅಂತ ಹೇಳಿದ್ವು. ಅದ್ರೂ ಭಾರತ ತಲೆ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ ಭಾರತದ ರಕ್ಷಣೆಗೆ ಎಸ್​-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಅತ್ಯಗತ್ಯವಾಗಿರೋದ್ರಿಂದ ಅದರ ಖರೀದಿಗೆ ಮುಂದಾಗಿತ್ತು. ಇನ್ನು ಭಾರತದ ಈ ನಿಲುವಿಗೆ ಈ ಹಿಂದೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿತ್ತು. ಆದ್ರೆ ಈಗ ಅಮೆರಿಕಾ ತನ್ನ ನಿಲುವು ಬದಲಾಯಿಸಿರುವ ಜೊತೆಗೆ ಭಾರತಕ್ಕೆ ಎಸ್​-400 ಕ್ಷಿಪಣಿ ಅತ್ಯಗತ್ಯ ಅನ್ನೋ ಹೇಳಿಕೆ ನೀಡಿದೆ.

ಅರೆ, ಬೇರೆ ದೇಶಗಳು ರಷ್ಯಾದೊಂದಿಗೆ ವ್ಯವಹಾರ ನಡೆಸಿದ್ರೆ ಮುಲಾಜಿಲ್ಲದೆ ನಿರ್ಬಂಧ ವಿಧಿಸುವ ಅಮೆರಿಕಾ, ಭಾರತದ ವಿಷಯದಲ್ಲಿ ಹೇಗೆ ಈ ಮೃದು ಧೋರಣೆ ತಾಳ್ತು ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿರಬಹುದು. ಅದಕ್ಕೆ ಉತ್ತರ ಸುಲಭ.. ಯಾಕಂದ್ರೆ ಅಮೆರಿಕಾಗೆ ಈಗ ಚೀನಾವನ್ನ ಕಟ್ಟಿಹಾಕಬೇಕು ಅಂದ್ರೆ ಅದಕ್ಕೆ ಭಾರತದ ನೆರವು ಬೇಕೇ ಬೇಕು. ಒಂದು ವೇಳೆ ಭಾರತ ಏನಾದ್ರು ಅಮೆರಿಕಾದ ಜೊತೆ ಇಲ್ಲ ಅಂದ್ರೆ ಅಮೆರಿಕಾಗೆ ಚೀನಾವನ್ನ ಎದುರಿಸೋದಕ್ಕೆ ಏಷ್ಯಾದಲ್ಲಿ ಯಾವುದೇ ಪ್ರಬಲ ರಾಷ್ಟ್ರ ಇಲ್ಲದಂತಾಗುತ್ತೆ. ಹಾಗಾಗಿನೇ ಈಗ ಭಾರತ ಏನೇ ನಿರ್ಧಾರವನ್ನ ತೆಗೆದುಕೊಂಡ್ರು ಅಮೆರಿಕ ಭಾರತದ ಪರವಾದ ನಿಲುವನ್ನ ತೆಳೆದುಕೊಂಡಿರುತ್ತೆ.. ಇನ್ನು ಭಾರತ ಕೂಡ ಅಮೆರಿಕದ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸ್ತಿದ್ದು , ಆ ಕಡೆ ಅಮೆರಿಕದ ಗೆಳತನಕ್ಕೂ ಪೆಟ್ಟು ಬೀಳ​ಬಾರದು, ಈ ಕಡೆ ತನ್ನ ಅತ್ಯಾಪ್ತ ಗೆಳೆಯನಾಗಿರುವ ರಷ್ಯಾಗೂ ತೊಂದ್ರೆ ಆಗಬಾರದು ಅನ್ನೋ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡ್ತಾ ಇದೆ.

ಇಷ್ಟೆಲ್ಲಾ ಕಾರಣಗಳಿಂದಾಗಿ ಭಾರತ ರಷ್ಯಾದ ಎಸ್​-400 ಕ್ಷಿಪಣಿಯನ್ನ ಖರೀದಿಸೋದಕ್ಕೆ ಮುಂದಾಯ್ತು. ಇದೇ ಕಾರಣಕ್ಕೆ ಅಮೆರಿಕ ಕೂಡ ಈ ಬಗ್ಗೆ ಏನೂ ಮಾತನಾಡದೆ ಕೆಲಕಾಲ ಮೌನ ವಹಿಸಿತ್ತು. ಬಳಿಕ ಇತ್ತೀಚೆಗೆ ಅಮೆರಿಕ ಭಾರತದ ಮೇಲೆ ಕಾಟ್ಸಾ ಕಾಯ್ದೆಯ ನಿರ್ಬಂಧವನ್ನ ವಿಧಿಸೋ ಸಾಧ್ಯತೆ ಇದೆ ಅನ್ನೋ ವರದಿಗಳು ಪ್ರಕಟವಾಗಿದ್ವು. ಆದ್ರೆ ಇದೀಗ ಅಮೆರಿಕದ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಸಂಸದರು ಭಾರತದ ಮೇಲೆ ಕಾಟ್ಸಾ ನಿರ್ಬಂಧಗಳನ್ನ ವಿಧಿಸದಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.. ಹೀಗೆ ತನ್ನ ಹಾಗು ವಿರೋಧ ಪಕ್ಷದ ಸಂಸದರು ಒತ್ತಡವನ್ನ ಹಾಕ್ತಿದ್ದ ಹಾಗೆ ಅಮೆರಿಕದ ವಿದೇಶಾಂಗ ಇಲಾಖೆ ಚುರುಕಾಗಿದೆ. ಇಲ್ಲ.. ಇಲ್ಲ.. ನಾವು ಭಾರತದ ಜೊತೆಗಿನ ಪಾಲುದಾರಿಕೆಯನ್ನ ಗೌರವಿಸ್ತಾ ಇದ್ದೇವೆ.. ಭಾರತದ ಮೇಲೆ ನಿರ್ಬಂಧ ವಿಧಿಸುವ CAATSA ಕಾಯ್ದೆಯ ಬಗ್ಗೆ ಇನ್ನೂ ನಾವು ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಅನ್ನೋ ಹೇಳಿಕೆ ನೀಡಿದೆ.

ಸಾಕಷ್ಟು ಜನಕ್ಕೆ ಈ ಕಾಟ್ಸಾ ಕಾಯ್ದೆಯ ಬಗ್ಗೆ ಹಲವಾರು ಗೊಂದಲಗಳಿವೆ. ಅಷ್ಟಕ್ಕೂ ಈ ಕಾಟ್ಸಾದ ಪರಿಪೂರ್ಣ ಅರ್ಥ Countering America’s Adversaries Through Sanctions Act ಅಂತ. ಅಂದ್ರೆ ಈ ಕಾಯ್ದೆಯ ಪ್ರಕಾರ ಅಮೆರಿಕ ಹಿತಾಸಕ್ತಿಗಳ ವಿರುದ್ಧ ಇರುವ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರೊದೇ ಇದ್ರ ಪ್ರಮುಖ ಉದ್ದೇಶವಾಗಿದೆ. ಒಂದು ವೇಳೆ ಈ ಕಾಯ್ದೆನ ಅಮೆರಿಕ ಭಾರತದ ಮೇಲೆ ಜಾರಿ ಮಾಡಿದ್ರೆ ಅಲ್ಲಿ ಭಾರತಕ್ಕಿಂತ ಅಮೆರಿಕವೇ ಅಧಿಕ ಹೊಡೆತ ತಿನ್ನಲಿದೆ. ಹೀಗಾಗಿ ಅಮೆರಿಕ ಈ ವಿಚಾರದಲ್ಲಿ ಸುಮ್ಮನಿದೆ .

ಒಟ್ಟಾರೆಯಾಗಿ ಇದೀಗ ಭಾರತದ ವಿರುದ್ಧ ಅಮೆರಿಕಾ ಏನೇ ನಿರ್ಧಾರ ತೆಗೆದುಕೊಳ್ಳೋದಾದದ್ರೂ ಅದು ಒಂದಕ್ಕಿಂತ ಹತ್ತು ಬಾರಿ ಯೋಚಿಸೋ ಹಾಗಾಗಿದೆ. ಇದ್ರ ಜೊತೆಗೆ ಹಲವು ದಶಕಗಳಿಂದ ಹಲವು ದೇಶಗಳೊಂದಿಗೆ ಗೆಳೆತನದ ನಾಟಕವಾಡಿದ ಅಮೆರಿಕ ಇನ್ನು ಮುಂದಿನ ದಿನಗಳಲ್ಲಾದ್ರೂ ಭಾರತದ ಗೆಳೆತನಕ್ಕೆ ನಿಯತ್ತಿನಿಂದ ವರ್ತಿಸಲಿದ್ಯಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES