ದೆಹಲಿ ಗಡಿಗಳಲ್ಲಿ ರೈತ ಹೋರಾಟ ಆರಂಭವಾಗಿ ಇಂದಿಗೆ ಒಂದು ವರ್ಷ. ಈ ಐತಿಹಾಸಿಕ ಹೋರಾಟದ ದಿನಕ್ಕೆ ಸಾಕ್ಷಿಯಾಗಲು ಸಾವಿರಾರು ರೈತರು ಈಗಾಗಲೇ ಪ್ರತಿಭಟನಾ ನಿರತ ಗಡಿಗಳಲ್ಲಿ ಬಂದು ಸೇರಿದ್ದಾರೆ. ಇಂದು ಚಳವಳಿಯ ’ಭಾಗಶಃ ವಿಜಯ’ ಆಚರಿಸಲಾಗುವುದು ಮತ್ತು ಉಳಿದ ಹಕ್ಕೊತ್ತಾಯಗಳನ್ನು ಪೂರೈಸುವಂತೆ ಒತ್ತಾಯಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ದೇಶಾದ್ಯಂತ ನಡೆಯಲಿರುವ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.
ದೆಹಲಿಯಿಂದ ದೂರವಿರುವ ರಾಜ್ಯಗಳ ರಾಜಧಾನಿಗಳಲ್ಲಿ, ವಿವಿಧ ಬಗೆಯ ಪ್ರತಿಭಟನೆಗಳ ಜೊತೆಗೆ ಟ್ರ್ಯಾಕ್ಟರ್
ರ್‍ಯಾಲಿಗಳನ್ನು ಆಯೋಜಿಸಲಾಗುವುದು. ರೈತ ಹೋರಾಟವನ್ನು ಬೆಂಬಲಿಸಿ ವಿಶ್ವದಾದ್ಯಂತ ಅಂತರಾಷ್ಟ್ರೀಯ ರೈತ ಸಂಘಟನೆಗಳು ಮತ್ತು ಭಾರತೀಯ ವಲಸಿಗರು ‘ಐಕ್ಯತಾ ಕಾರ್ಯಕ್ರಮ’ಗಳನ್ನು ನಡೆಸಲು ಯೋಜನೆ ರೂಪಿಸಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಇಂದು (ನ. 26) ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಲಂಡನ್‌ನಲ್ಲಿ ಭಾರತೀಯ ಹೈಕಮಿಷನ್ ಎದುರು ಪ್ರತಿಭಟನೆ ನಡೆಯಲಿದೆ. ಅದೇ ದಿನ, ವ್ಯಾಂಕೋವರ್, ಕೆನಡಾದ ಸರ್ರೆಯಲ್ಲಿ ಪ್ರತಿಭಟನೆ ಇರುತ್ತದೆ. ನವೆಂಬರ್ 30 ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಡಿಸೆಂಬರ್ 4 ರಂದು ಕ್ಯಾಲಿಫೋರ್ನಿಯಾದಲ್ಲಿ ಕಾರ್ ರ್‍ಯಾಲಿ ಮತ್ತು ನ್ಯೂಯಾರ್ಕ್ ನಲ್ಲಿ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಸ್ಯಾನ್ ಜೋಸ್ ಗುರುದ್ವಾರದಲ್ಲಿ ರೈತ ಹುತಾತ್ಮರ ಸ್ಮರಣಾರ್ಥ ಮತ್ತು ಮೇಣದಬತ್ತಿಯ ಜಾಗರಣೆ ನಡೆಯಲಿದೆ. ಡಿಸೆಂಬರ್ 8 ರಂದು ಆಸ್ಟ್ರಿಯಾದ ವಿಯೆನ್ನಾದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ ಎಂದು ತಿಳಿಸಿದೆ.
ಇಂದು ಕರ್ನಾಟಕದ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಬಂದ್
ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿದೆ. ಆದರೆ ಕೇಂದ್ರಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯವು ಎಪಿಎಂಸಿ ಮತ್ತು ಭೂಸುಧಾರಣ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದ್ದಾರೆ. ಅದಕ್ಕಾಗಿ ಇಂದು ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಕರೆ ನೀಡಲಾಗಿದೆ.
ಬೆಂಗಳೂರಿನ ಹೊಸಕೋಟೆ, ದೇವನಹಳ್ಳಿ ಬಳಿ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸುತ್ತಿದ್ದಾರೆ.ಅಲ್ಲದೆ ರಾಮನಗರ, ಮಂಡ್ಯ, ರಾಯಚೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಲಿದ್ದೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್‌ರವರು ಮಾತನಾಡಿ,ಕೇಂದ್ರದ ಕರಾಳ ಕಾಯ್ದೆಗಳು ಸಂಸತ್ತಿನಲ್ಲಿ ರದ್ದುಗೊಳ್ಳಬೇಕು. ಜೊತೆಗೆ ಎಂಎಸ್‌ಪಿ ಜಾರಿಗೆ ಕಾನೂನುಬೇಕೆಂದು ಆಗ್ರಹಿಸಿ ಚಳವಳಿ ಮುಂದುವರೆಯಲಿದೆ. ಕರ್ನಾಟಕ ಸರ್ಕಾರ ತಿದ್ದುಪಡಿ ಮಾಡಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಇಂದು (ನ. 26) ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಪ್ರಯಾಣ ಮಾಡದೇ ರೈತ ಹೋರಾಟಕ್ಕೆ ಬೆಂಬಲಿಸಿಬೇಕು” ಎಂದು ಮನವಿ ಮಾಡಿದ್ದಾರೆ. ಬೆಂಗಳೂರಿನಿಂದ ಶ್ರೀರಂಗಪಟ್ಟಣದ ಕಡೆಗೆ ಈಗಾಗಲೇ ಬೈಕ್ ರ್‍ಯಾಲಿ ನಡೆಯುತ್ತಿದೆ.