Wednesday, January 22, 2025

ಭೀಮಣ್ಣ ಅವರನ್ನ ಗೆಲ್ಲಿಸುತ್ತೇನೆ : ಮಧು ಬಂಗಾರಪ್ಪ

ಕಾರವಾರ : ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣಾ ಕಾವು ಜೋರಾಗುತ್ತಿರುವಂತೆ ಉತ್ತರಕನ್ನಡದಲ್ಲೂ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.ಈ ಬಾರಿ ಜಿಲ್ಲೆಯಲ್ಲಿ ವಿಧಾನಪರಿಷತ್‌ಗೆ 6 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರಾದರೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಎರಡೂ ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸುತ್ತಿವೆ.ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕಾಂಗ್ರೆಸ್ ತನ್ನ ರಣತಂತ್ರವನ್ನ ರೂಪಿಸಿಕೊಂಡಿದ್ದು ಈ ಹಿಂದೆ ಜಿಲ್ಲೆಯ ರಾಜಕಾರಣದಲ್ಲಿ ಹಿಡಿತ ಹೊಂದಿದ್ದ ದಿವಂಗತ ಬಂಗಾರಪ್ಪ ಬೆಂಬಲವನ್ನ ಸಂಘಟಿಸಲು ಮುಂದಾಗಿದೆ.

ರಾಜ್ಯ ರಾಜಕಾರಣದಲ್ಲಿ ದಿವಂಗತ ಎಸ್.ಬಂಗಾರಪ್ಪ ಜನಪರ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಮಲೆನಾಡು ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲೂ ಸಹ ಬಂಗಾರಪ್ಪ ಸಾಕಷ್ಟು ಬೆಂಬಲಿಗರನ್ನ ಹೊಂದಿದ್ದು ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಪುತ್ರ ಮಧು ಬಂಗಾರಪ್ಪ ಮೂಲಕ ದಿವಂಗತ ಬಂಗಾರಪ್ಪ ಅವರಿಗಿದ್ದ ಬೆಂಬಲವನ್ನ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.

ಸದ್ಯ ಕಾಂಗ್ರೆಸ್‌ನಿಂದ ಪ್ರತಿನಿಧಿಸಿರುವ ಅಭ್ಯರ್ಥಿ ಭೀಮಣ್ಣ ನಾಯ್ಕ ಮಧು ಬಂಗಾರಪ್ಪ ಅವರಿಗೆ ಸೋದರ ಮಾವನಾಗಿದ್ದು ಅಳಿಯನ ಮೂಲಕ ಮತಗಳನ್ನ ಸೆಳೆಯುವ ಪ್ಲ್ಯಾನ್ ಕಾಂಗ್ರೆಸ್‌ ನದ್ದಾಗಿದೆ. ಭೀಮಣ್ಣ ನಾಯ್ಕರನ್ನ ಅಧಿಕಾರದಲ್ಲಿ ನೋಡಬೇಕೆನ್ನುವುದು ಬಂಗಾರಪ್ಪ ಅವರ ಆಸೆಯಾಗಿತ್ತು. ಹೀಗಾಗಿ ಬಂಗಾರಪ್ಪ ಅಭಿಮಾನಿಗಳು ಯಾವುದೇ ಪಕ್ಷದಲ್ಲಿದ್ದರೂ ಅವರು ಒಟ್ಟಾಗಿ ಭೀಮಣ್ಣ ಅವರನ್ನ ಗೆಲ್ಲಿಸುತ್ತಾರೆ ಅಂತಾರೇ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಮೀನುಗಾರ ಸಮುದಾಯದವರಾಗಿದ್ದು ಭೀಮಣ್ಣ ನಾಯ್ಕ ನಾಮಧಾರಿ ( ಈಡಿಗ) ಸಮುದಾಯದವರಾಗಿದ್ದಾರೆ.ಜಿಲ್ಲೆಯಲ್ಲಿ ಪರಿಷತ್‌ಗೆ ಇರುವ 3 ಸಾವಿರ ಮತಗಳ ಪೈಕಿ ನಾಮಧಾರಿ ಮತಗಳ ಪ್ರಾಬಲ್ಯವೇ ಹೆಚ್ಚಿಗೆ ಇದ್ದು ಇದು ಭೀಮಣ್ಣ ನಾಯ್ಕಗೆ ಪೂರಕವಾಗಲಿದೆ. ಕಳೆದ 12 ವರ್ಷಗಳಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಭೀಮಣ್ಣ ನಾಯ್ಕ ತಮ್ಮ ಜನಪರ ಕಾರ್ಯಗಳ ಮೂಲಕ ಸಜ್ಜನ ರಾಜಕಾರಣಿ ಎನಿಸಿಕೊಂಡಿದ್ದಾರೆ.

ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿರುವ ಭೀಮಣ್ಣ ಕಳೆದ 3 ವರ್ಷಗಳಲ್ಲಿ ಉಪಚುನಾವಣೆ ಸೇರಿದಂತೆ 2 ಬಾರಿ ಎಂಎಲ್‌ಎ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ಛಲದೊಂದಿಗೆ ಬಂಗಾರಪ್ಪ ಬೆಂಬಲವನ್ನ ಒಂದಾಗಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.

-ಉದಯ ಬರ್ಗಿ ಪವರ್ ಟಿ.ವಿ ಕಾರವಾರ.

RELATED ARTICLES

Related Articles

TRENDING ARTICLES