ಅಪೌಷ್ಟಿಕತೆ ನಿವಾರಣೆಗಾಗಿ ಏಳು ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಬೀದರ್, ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಯ ಒಟ್ಟು 14,44,322 ಮಕ್ಕಳಿಗೆ ಬಿಸಿಯೂಟದೊಂದಿಗೆ ಪ್ರತಿ ತಿಂಗಳು 12 ಮೊಟ್ಟೆ, ಮೊಟ್ಟೆ ಸೇವಿಸದವರಿಗೆ ಮೊಟ್ಟೆಯ ಬದಲು ಬಾಳೆಹಣ್ಣು ನೀಡಲು ತೀರ್ಮಾನಿಸಲಾಗಿದೆ.
ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಬಹುಪೋಷಕಾಂಶಗಳ ನ್ಯೂನತೆ ಇರುವುದು ಕಂಡುಬಂದಿದೆ. ಈ ಕಾರಣದಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಒಂದು ತಿಂಗಳಲ್ಲಿ 12 ಬೇಯಿಸಿದ ಮೊಟ್ಟೆ ಕೊಡುವ ಮೂಲಕ ಅವರಲ್ಲಿ ಪೌಷ್ಟಿಕತೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಅಪೌಷ್ಟಿಕತೆ, ರಕ್ತಹೀನತೆ ಹೊಂದಿರುವ ಶಾಲಾ ಮಕ್ಕಳ ಶೇಕಡಾವಾರು ಪ್ರಮಾಣ ಯಾದಗಿರಿಯಲ್ಲಿ ಅತೀ ಹೆಚ್ಚು ಶೇ 74ರಷ್ಟಿದೆ. ಉಳಿದಂತೆ, ಕಲಬುರಗಿಯಲ್ಲಿ ಶೇ 72.4, ಬಳ್ಳಾರಿ ಶೇ 72.3, ಕೊಪ್ಪಳ ಶೇ 70.7, ರಾಯಚೂರು ಶೇ 70.6, ಬೀದರ್ ಶೇ 69.1, ವಿಜಯಪುರ ಶೇ 68ರಷ್ಟಿದೆ. 6ರಿಂದ 15ರವರೆಗಿನ ವಯೋಮಾನದವರೆಗಿನ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ ಹಾಗೂ ಪೋಷಕಾಂಶಗಳ ಕೊರತೆ ನಿವಾರಿಸುವ ಉದ್ದೇಶದಿಂದ ‘ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’ ಯೋಜನೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.
ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ 6 ರೂ. ಮೀರದಂತೆ ಒಂದು ಅಥವಾ ಎರಡು ಬಾಳೆಹಣ್ಣು ನೀಡಬೇಕು ಎಂದು ಸೂಚಿಸಲಾಗಿದೆ. ಇದಕ್ಕಾಗಿ 39.86 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಅದನ್ನು ಈ ಏಳು ಜಿಲ್ಲೆಗಳಿಗೆ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಜಿಲ್ಲಾವಾರು ಬಿಡುಗಡೆ ಮಾಡಲಾಗಿದೆ.
ಡಿ.1ರಿಂದ ಮೊಟ್ಟೆ ಕೊಡುವ ಯೋಜನೆಯನ್ನು ಪ್ರಾರಂಭಿಸಿ, 2022ರ ಮಾರ್ಚ್ 30ರವರೆಗೂ ಯೋಜನೆ ಮುಂದುವರಿಸಬೇಕು. ಶಾಲಾ ಹಂತದಲ್ಲಿ ಮೊಟ್ಟೆ, ಬಾಳೆಹಣ್ಣು ಖರೀದಿಗೆ ಖರೀದಿ ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಎಸ್‌ಡಿಎಂಸಿ ಮುಖ್ಯಸ್ಥರು ಅಧ್ಯಕ್ಷರಾಗಿರಬೇಕು. ಶಾಲೆಯ ಮುಖ್ಯ ಶಿಕ್ಷಕ, ಇಬ್ಬರು ಪೋಷಕರು, ಇಬ್ಬರು ಹಿರಿಯ ಶಿಕ್ಷಕರು ಹಾಗೂ ಇಬ್ಬರು ತಾಯಂದಿರನ್ನು ಒಳಗೊಂಡ ಸಮಿತಿ ರಚಿಸಿ ಗುಣಮಟ್ಟದ ಪದಾರ್ಥಗಳನ್ನು ಖರೀದಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.