Wednesday, January 22, 2025

ಆತಂಕದಲ್ಲೇ ಆಘಾತಕಾರಿ ಹೇಳಿಕೆ ನೀಡಿದ ವಿಶ್ವಸಂಸ್ಥೆ

ಒಂದು ಜಾಗತಿಕವಾಗಿ ಕೊರೋನಾ ಸೋಂಕು ಕಡಿಮೆಯಾಗ್ತಿದ್ರೆ, ಮತ್ತೆ ಕೆಲವು ಕಡೆ ಏರಿಕೆ ಕಾಣ್ತಿದೆ. ಇದೀಗ ಈ ಬಗ್ಗೆ ವಿಶ್ವಸಂಸ್ಥೆ ಅಚ್ಚರಿಯ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು, ಆ ಒಕ್ಕೂಟ ದೇಶಗಳಲ್ಲಿ 7 ಲಕ್ಷ ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ ಅನ್ನೋ ಸ್ಪೋಟಕ ಮಾಹಿತಿ ನೀಡಿದೆ. ಹಾಗಿದ್ರೆ ವಿಶ್ವಸಂಸ್ಥೆಯ ಹೇಳಿಕೆಯಲ್ಲಿ ಏನಿದೆ ಅನ್ನೋ ಅನುಮಾನ ನಿಮ್ಮನ್ನ ಕಾಡ್ತಿದ್ಯಾ?

ಕೊರೋನಾ ಹೆಸರು ಕೇಳಿದ್ರೆ ಸಾಕು, ಒಂದು ಕ್ಷಣ ಜಗತ್ತಿನ ನಾನಾ ರಾಷ್ಟ್ರಗಳು, ಜನಸಾಮಾನ್ಯರು ಹೆದರಿಕೊಳ್ತಾರೆ. ಅದೆಷ್ಟೋ ಜನ ತಮ್ಮ ಸುಂದರ ಬದುಕನ್ನ, ತಮ್ಮವರನ್ನ ಕಳೆದುಕೊಂಡು ಅನಾಥ ಪ್ರಜ್ಞೆ ಅನುಭವಿಸಿದ್ರು. ಇನ್ನು ಈ ವೈರಸ್​ಗೆ ಇದುವರೆಗೂ ಯಾವುದೇ ಮೆಡಿಸಿನ್ ಪತ್ತೆಯಾಗದೆ ಇದ್ರೂ ಈ ವೈರಸ್ ನಿಗ್ರಹಿಸೋದಕ್ಕೆ ಹಲವು ಲಸಿಕೆಗಳನ್ನ ಭಾರತ ಸೇರಿದಂತೆ ವಿವಿಧ ದೇಶಗಳು ನೀಡುತ್ತಿವೆ. ಈ ಲಸಿಕೆಗಳಿಂದಾಗಿ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಇಳಿಮುಖವಾಗಿದೆ. ಇದೀಗ ಮತ್ತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ.

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಅಮೆರಿಕಾ, ರಷ್ಯಾ ಮತ್ತು ಚೀನಾದಲ್ಲಿ ಮತ್ತೆ ಕೊರೋನಾ ಸುದ್ದಿಯಾಗ್ತಿದೆ. ಅದರಲ್ಲೂ ಜರ್ಮನಿ ಹಾಗು ಯುರೋಪ್ ದೇಶಗಳಲ್ಲಿ ಕೊರೋನಾ ಸೋಂಕಿನ ನಾಲ್ಕನೇ ಅಲೆ ಶುರುವಾಗಿದೆ. ಇಷ್ಟು ದಿನಗಳ ಕಾಲ ಜರ್ಮನಿಯಲ್ಲಿ ಕೊರೋನಾ ಸೋಂಕು ಹಲವು ಆತಂಕಕ್ಕೆ ಕಾರಣವಾಗಿತ್ತು.. ಈ ಸೋಂಕನ್ನ ತಡೆಯೋ ನಿಟ್ಟಿನಲ್ಲಿ ಜರ್ಮನಿ ಸಾಕಷ್ಟು ಪ್ರಯತ್ನಿಸಿದ್ರೂ ಅದು ಇದುವರೆಗೂ ಸಾಧ್ಯವಾಗಿಲ್ಲ. ಆದ್ರೆ ಈಗ ವಿಶ್ವಸಂಸ್ಥೆ ಬಹಿರಂಗಪಡಿಸಿರುವ ಮಾಹಿತಿಯೊಂದರ ಪ್ರಕಾರ, ಈಗ ಜರ್ಮನಿಗಿಂತ ಯುರೋಪ್​ ಅಧಿಕ ಪ್ರಮಾಣದಲ್ಲಿ ಅಪಾಯ ಎದುರಿಸ್ತಿದೆ. ಒಂದು ವೇಳೆ ಇದು ನಿಜವಾದ್ರೆ ಯರೋಪಿನಲ್ಲಿ ಕೊವಿಡ್​ನಿಂದಾಗಿ ಸುಮಾರು 7 ಲಕ್ಷ ಜನ ಸಾಯ್ತಾರೆ ಅಂತ ವರದಿಗಳು ಪ್ರಕಟವಾಗ್ತಿವೆ.

ಯುರೋಪ್​ನಲ್ಲಿ ಕೊರೋನಾ ವೈರಸ್ ಪ್ರಕರಣಗಳಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡುಬಂದಿದೆ. ಕೊವಿಡ್​ ಸೋಂಕು ವೇಗವಾಗಿ ಹೆಚ್ಚಾಗುತ್ತಿರೋದು ವಿಶ್ವ ಆರೋಗ್ಯ ಸಂಸ್ಥೆ ಹಾಗು ಕೊವಿಡ್​ ಕುರಿತು ಅಧ್ಯಯನ ನಡೆಸುತ್ತಿರುವ ತಜ್ಞರನ್ನ ಅಚ್ಚರಿಗೊಳಿಸಿದೆ. ಒಂದು ವೇಳೆ ಕೊವಿಡ್​​ ದರ ತೀವ್ರವಾಗಿ ಏರಿಕೆಯಾಗ್ತಾ ಇದ್ರೆ ಮುಂದಿನ ದಿನಗಳಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ ಅನ್ನೋದನ್ನ ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಯುರೋಪ್​ನಲ್ಲಿ ಕೊರೋನಾ ಸೋಂಕಿನಿಂದ 7 ಲಕ್ಷ ಸಾವುಗಳು ಸಂಭವಿಸಬಹುದು ಅನ್ನೋ ಆಘಾತಕಾರಿ ಅಂಶವನ್ನ ಬಹಿರಂಗಪಡಿಸಿದೆ. WHO ಯುರೋಪ್ ಕಚೇರಿ ಮುನ್ಸೂಚನೆಗಳ ಪ್ರಕಾರ 53 ದೇಶಗಳಲ್ಲಿ ಇದೇ ರೀತಿ ಕೊರೋನಾ ಸೋಂಕು ಮುಂದುವರೆದ್ರೆ ಮುಂಬರುವ ತಿಂಗಳುಗಳಲ್ಲಿ ಕೊರೋನಾ ವೈರಸ್​ನಿಂದ ಏಳು ಲಕ್ಷ ಜನ ಪ್ರಾಣ ಕಳೆದುಕೊಂಡರೂ ಅಚ್ಚರಿಯಿಲ್ಲ.

WHOನ ಯುರೋಪ್ ಕಚೇರಿ ಡೆನ್ಮಾರ್ಕ್​ನ ರಾಜಧಾನಿ ಕೋಪನ್ ​​ಹೇಗ್​ನಲ್ಲಿದೆ. ಈ ಸಂಸ್ಥೆ ಯೂರೋಪಿನಾದ್ಯಂತ ಕೊವಿಡ್​ ಏರಿಕೆಯಾದಾಗಿನಿಂದಲೂ ಸಾಕಷ್ಟು ಅಧ್ಯಯನ ನಡೆಸ್ತಾ ಬಂದಿದೆ. ಈಗ ಈ ಸಂಸ್ಥೆ ನೀಡಿರುವ ವರದಿಯ ಪ್ರಕಾರ, ಕೊರೋನಾ ಸೋಂಕಿನಿಂದ ರಕ್ಷಿಸಲು ಯೂರೋಪ್​ನ ದೇಶಗಳು ತೆಗೆದುಕೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿಲ್ಲ. ಕೆಲ ರಾಷ್ಟ್ರಗಳು ನೀಡುತ್ತಿರುವ ಲಸಿಕೆಗಳು ಕೊರೋನಾ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸ್ತಿಲ್ಲ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು, 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಮತ್ತು ಆರೋಗ್ಯ ಕಾರ್ಯಕರ್ತರು, ಲಸಿಕೆಯ ಬೂಸ್ಟರ್ ಡೋಸ್ ನೀಡುವಲ್ಲಿ ಆದ್ಯತೆ ನೀಡದೇ ಇರೋದು ಆಪಾಯಕ್ಕೆ ಕಾರಣವಾಗುತ್ತಿದೆ ಅನ್ನೋದನ್ನ WHO ಒತ್ತಿಹೇಳಿದೆ.

ಈ ಬಗ್ಗೆ WHO ಉನ್ನತ ಅಧಿಕಾರಿಗಳು ಹಾಗು ಆರೋಗ್ಯ ತಜ್ಞರು ಹಲವು ರೀತಿ ಎಚ್ಚರಿಕೆ ನೀಡ್ತಿದ್ದು, ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆಯೂ ಮಾಹಿತಿ ನೀಡ್ತಿದ್ದಾರೆ. ಅವರ ಪ್ರಕಾರ, ಯುರೋಪ್ ಜನರು ತಮ್ಮ ನಡುವೆ ಒಂದು ನಿರ್ದಿಷ್ಟ ಅಂತರ ಕಾಯ್ದುಕೊಳ್ಳಬೇಕು ಮತ್ತು ಜನರು ಲಸಿಕೆಯನ್ನು ಪಡೆಯಬೇಕು ಮತ್ತು ಸರಿಯಾದ ಮಾರ್ಗಸೂಚಿಗಳನ್ನ ಅನುಸರಿಸಬೇಕು. ಇದರಿಂದಾಗಿ ವೈರಸ್ ಹರಡುವುದನ್ನು ನಿಲ್ಲಿಸಬಹುದು ಅನ್ನೋ ಮಾತನ್ನ ಒತ್ತಿ ಹೇಳ್ತಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಯೂರೋಪ್​ನ WHO ಪ್ರಾದೇಶಿಕ ನಿರ್ದೇಶಕ ಡಾ.ಕ್ಲುಜೆ, ಇಂದು ಯುರೋಪ್ ಮತ್ತು ಮಧ್ಯ ಏಷ್ಯಾದಾದ್ಯಂತ ಕೋವಿಡ್ -19 ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಮ್ಮ ಮುಂದೆ ಚಳಿಗಾಲದ ಸವಾಲು ಇದೆ. ಆದರೆ ನಾವು ಭರವಸೆ ಕಳೆದುಕೊಳ್ಳಬಾರದು. ಸರ್ಕಾರಗಳು, ಆರೋಗ್ಯಾಧಿಕಾರಿಗಳು ಮತ್ತು ಸಾಮಾನ್ಯ ಜನರು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಒಟ್ಟಾರೆಯಾಗಿ ಕೊವಿಡ್​ ವೈರಸ್​ ಬಗ್ಗೆ ಯೂರೋಪ್​ ಒಕ್ಕೂಟ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಕೊರೋನಾ ಬಗ್ಗೆ ಅಲ್ಲಿನ ಒಕ್ಕೂಟ ವ್ಯವಸ್ಥೆ ಮೈಮರೆತ್ರೆ 7 ಲಕ್ಷ ಜನರ ಜೀವಕ್ಕೆ ಆಪತ್ತು ಗ್ಯಾರಂಟಿ ಅನ್ನೋದು ಸುಳ್ಳಲ್ಲ. ಹಾಗಾಗಿ ಯುರೋಪ್​ನಲ್ಲಿ ಕೊವಿಡ್​ ಸಮಸ್ಯೆ ಅಲ್ಲಿನ ಸರ್ಕಾರಗಳಿಗೆ ಮತ್ತೆ ತಲೆನೋವಾಗಿ ಪರಿಣಮಿಸಿದೆ.

RELATED ARTICLES

Related Articles

TRENDING ARTICLES