ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಮತ್ತೆ ತಟಸ್ಥ ನಿಲುವು ತಾಳಲು ನಿರ್ಧರಿಸಿದ್ದಾರೆ.ಡಿಸೆಂಬರ್ 10ಕ್ಕೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಚುನಾವಣೆ ನಡೆಯಲಿದೆ.ಈ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸದಸ್ಯೆ ಸುಮಲತಾ ಅಂಬರೀಶ್ ಯಾರಿಗೆ ಬೆಂಬಲ ನೀಡ್ತಾರೆ ಅನ್ನೋ ಪ್ರಶ್ನೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಒಂದೆಡೆ ಬಿಜೆಪಿ ಅಧಿಕೃತವಾಗಿ ಸುಮಲತಾ ಅವರನ್ನ ಬೆಂಬಲಿಸಿತ್ತು. ಹೀಗಾಗಿ ಸುಮಲತಾ ಅಂಬರೀಶ್ ನಮಗೆ ಬೆಂಬಲ ನೀಡ್ತಾರೆ ಅಂತಾ ಬಿಜೆಪಿ ನಿರೀಕ್ಷೆ ಇಟ್ಟಿತ್ತು. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಬಹುತೇಕರು ಚುನಾವಣೆ ಸಮಯದಲ್ಲಿ ಮಾತ್ರವಲ್ಲ. ಈಗಲೂ ನಿರಂತರವಾಗಿ ಸುಮಲತಾ ಪರ ಬೆಂಬಲಕ್ಕೆ ನಿಂತಿದ್ದಾರೆ.
ಹಾಗಾಗಿ ಸುಮಲತಾ ಕಾಂಗ್ರೆಸ್ ಅಭ್ಯರ್ಥಿಯನ್ನ ಬೆಂಬಲಿಸುತ್ತಾರೆ ಅನ್ನೋ ವಿಶ್ವಾಸ ಇಟ್ಟುಕೊಂಡಿದ್ದರು. ಆದರೆ ಈ ಎರಡೂ ಪಕ್ಷಗಳ ನಿರೀಕ್ಷೆಯನ್ನ ಹುಸಿಗೊಳಿಸಿರುವ ಸುಮಲತಾ, ಇಬ್ಬರು ಅಭ್ಯರ್ಥಿಗಳ ಆಸೆಗೆ ತಣ್ಣೀರು ಎರಚಿದ್ದಾರೆ. ಇಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೇಗೌಡನದೊಡ್ಡಿಯಲ್ಲಿ ಮಾತನಾಡಿರುವ ಸುಮಲತಾ ಅಂಬರೀಶ್, ಅಧಿಕೃತವಾಗಿ ಯಾರಿಗೂ ಬೆಂಬಲ ಸೂಚಿಸುವ ಸ್ಥಿತಿಯಲ್ಲಿ ಇಲ್ಲ ಅಂತೇಳುವ ಮೂಲಕ ತಟಸ್ಥವಾಗಿರಲು ನಿರ್ಧರಿಸಿದ್ದಾರೆ.
ಎಲ್ಲಾ ಅಭ್ಯರ್ಥಿಗಳು ಆಶೀರ್ವಾದ ಕೇಳಿ ಫೋನ್ ಮಾಡ್ತಾರೆ. ಅವರಿಗೆ ಬೆಸ್ಟ್ ವಿಶಸ್ ಹೇಳುವುದು ನನ್ನ ಒಂದು ಸಭ್ಯತೆ. ಯಾರಾದ್ರೂ ಫೋನ್ ಮಾಡಿ ಆಶೀರ್ವಾದ ಕೇಳಿದ್ರೆ ಹೇಳುವುದು ಒಂದು ಸಂಪ್ರದಾಯ. ಆಶೀರ್ವಾದ ಮಾಡಿ ಒಳ್ಳೆಯದಾಗಲಿ ಎಂದು ಹೇಳುವುದು ಒಂದು ಪದ್ದತಿ. ಅಧಿಕೃತವಾಗಿ ಯಾರಿಗೂ ಬೆಂಬಲ ಸೂಚಿಸೋ ಪೊಜಿಷನ್ನಲ್ಲಿ ಇಲ್ಲ. ಬಿಜೆಪಿ, ಕಾಂಗ್ರೆಸ್ ಎಲ್ಲರೂ ಸಹ ನನ್ನ ಗೆಲುವಿಗೆ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ರೈತ ಸಂಘ ಕೂಡ ನನ್ನ ಬೆಂಬಲಕ್ಕೆ ನಿಂತಿತ್ತು. ಒಬ್ಬರಿಗೆ ಬೆಂಬಲ ಸೂಚಿಸುವುದು, ಬೇರೆಯವರಿಗೆ ನೋಯಿಸುವ ಕೆಲಸವಾಗುತ್ತದೆ. ಯಾರು ನಿಷ್ಠೆಯಿಂದ ಕೆಲಸ ಮಾಡ್ತಾರೆ ಅಂತಹ ಅಭ್ಯರ್ಥಿ ಗೆಲ್ಲಲಿ ಎಂದು ಹಾರೈಸುತ್ತೇನೆ ಪ್ರತಿಕ್ರಿಯಿಸಿದ್ದಾರೆ.