ಗಾಜಿಯಾಬಾದ್ ( ಉತ್ತರ ಪ್ರದೇಶ ) : ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧವಾಗಿ ಖಾತರಿಗೊಳಿಸಬೇಕು ಎಂದು ಒತ್ತಾಯಿಸಿ ನವೆಂಬರ್ 29ರಂದು ನಡೆಯುವ ಸಂಸತ್ ಚಲೋನಲ್ಲಿ ಒಟ್ಟು 60 ಟ್ಯ್ರಾಕ್ಟರ್‌ಗಳು ಸಂಸತ್ತಿಗೆ ತೆರಳಲಿವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಗಾಜಿಯಾಬಾದ್‌ನಲ್ಲಿ ಘೋಷಿಸಿದ್ದಾರೆ.
ನವೆಂಬರ್ 29 ರಂದು 60 ಟ್ರ್ಯಾಕ್ಟರ್‌ಗಳು ಸಂಸತ್ತಿಗೆ ಮೆರವಣಿಗೆ ನಡೆಸಲಿವೆ. ಸರ್ಕಾರ ತೆರೆದಿರುವ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳು ತೆರಳುತ್ತವೆ. ನಾವು ರಸ್ತೆಗಳನ್ನು ನಿರ್ಬಂಧಿಸಿದ್ದೇವೆ ಎಂದು ಅವರು ಆರೋಪಿಸಿದ್ದರು. ನಾವು ರಸ್ತೆಗಳನ್ನು ನಿರ್ಬಂಧಿಸಿಲ್ಲ. ರಸ್ತೆ ತಡೆ ನಮ್ಮ ಚಳುವಳಿಯಲ್ಲ. ನಮ್ಮ ಆಂದೋಲನವು ಸರ್ಕಾರದೊಂದಿಗೆ ಮಾತನಾಡುವುದಾಗಿದೆ. ನಾವು ನೇರವಾಗಿ ಸಂಸತ್ತಿಗೆ ಹೋಗುತ್ತೇವೆ ಎಂದು ಅವರು ಎಎನ್ಐ ಸುದ್ದಿಸಂಸ್ಥೆಗೆ ಹೇಳಿದೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದು, ಈ ಮೂರು ಕೃಷಿ ಕಾನೂನುಗಳ ರದ್ದತಿಗೆ ಕೇಂದ್ರ ಸಚಿವ ಸಂಪುಟ ಇಂದು (ಬುಧವಾರ) ಅನುಮೋದನೆ ನೀಡುವ ಸಾಧ್ಯತೆ ಇದೆ. ಆದರೆ ಅಷ್ಟಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೃಷಿ ಕಾಯ್ದೆ ಸಂಸತ್ತಿನಲ್ಲಿ ರದ್ದಾಗುವುದರ ಜೊತೆಗೆ ಎಂಎಸ್‌ಪಿ ಖಾತ್ರಿಯಾಗ್ಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾವು ಮಳೆಗಾಲದ ಅಧಿವೇಶನದ ಸಂದರ್ಭದಲ್ಲಿ ಅದಕ್ಕೆ ಪ್ರತಿಯಾಗಿ ಜಂತರ್ ಮಂತರ್‌ನಲ್ಲಿ ಸೇರಿ ಕಿಸಾನ್ ಸಂಸತ್ತು ನಡೆಸಿದೆವು. ಆದರೆ ಕಳೆದ ಬಾರಿ ಹೋದಂತೆ ಈ ಬಾರಿ 200 ಜನರು ಇರುವುದಿಲ್ಲ. ಬದಲಿಗೆ, ಸಾವಿರ ಜನರು ಸಂಸತ್ತಿಗೆ ತೆರಳಲಿದ್ದಾರೆ ಎಂದು ಟಿಕಾಯತ್ ಹೇಳಿದ್ದಾರೆ.
ಎಂಎಸ್‌ಪಿ ಕುರಿತು ಸರ್ಕಾರದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ಅದರೊಂದಿಗೆ ಕಳೆದ ಒಂದು ವರ್ಷದಲ್ಲಿ ಸಂಭವಿಸಿದ ಘಟನೆಗಳು, 750 ರೈತರ ಸಾವು ಇವೆಲ್ಲದರ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. 2020ರ ನವೆಂಬರ್ ತಿಂಗಳಿನಲ್ಲಿ ಆರಂಭವಾದ ರೈತ ಹೋರಾಟ ಹಲವು ಏಳು ಬೀಳುಗಳ ನಡುವೆಯೂ ಯಶಸ್ವಿ ಕಂಡಿದೆ. ನವೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸಂಸತ್ತಿನಲ್ಲಿ ಕಾಯ್ದೆಗಳು ಅಧಿಕೃತವಾಗಿ ರದ್ಧಾಗುವವರೆಗೂ ಕಾಯುವುದಾಗಿ ತಿಳಿಸಿತ್ತು.
ಅದರೊಂದಿಗೆ ಇನ್ನು ಮುಖ್ಯ ಬೇಡಿಕೆಗಳಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸುವುದು, ವಿದ್ಯುತ್ ಕಾಯ್ದೆಯನ್ನು ಹಿಂಪಡೆಯುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಪೂರೈಸುವವರೆಗೂ ಹೋರಾಟವನ್ನು ಮುಂದುವರಿಸೋದಾಗಿ ತಿಳಿಸಿತ್ತು.
ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 29 ರಂದು ಪ್ರಾರಂಭವಾಗಿ ಡಿಸೆಂಬರ್ 23 ರವರೆಗೆ ಮುಂದುವರೆಯುವ ಸಾಧ್ಯತೆ ಇದೆ.