ಯಲಹಂಕ : ಅಕಾಲಿಕ ಮಳೆಯಿಂದ ದ್ವೀಪದಂತಾಗಿರುವ ಬೆಂಗಳೂರಿನ ಯಲಹಂಕ ಬಳಿ ಇರುವ ಕೇಂದ್ರೀಯ ಅಪಾರ್ಟ್‌ಮೆಂಟ್‌ಗೆ ಇಂದು (ಮಂಗಳವಾರ) ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಜಲಾವೃತವಾಗಿರುವ ಕೇಂದ್ರೀಯ ಅಪಾರ್ಟ್‌ಮೆಂಟ್ ಪರಿಶೀಲನೆ ನಡೆಸಿ,ಅಧಿಕಾರಿಗಳಿಂದ ಮಾಹಿತಿ ಪಡೆದ
ಸಿಎಂ ಬಸವರಾಜ ಬೊಮ್ಮಾಯಿ ಅಪಾರ್ಟ್‌ಮೆಂಟ್ ನಿವಾಸಿಗಳ ಅಹವಾಲು ಸ್ಪೀಕರಿಸಿದರು.
ಇನ್ನು ನೀರು ನುಗ್ಗಿರುವ ಮನೆಗಳಿಗೆ ತಕ್ಷಣ 10 ಸಾವಿರ ಪರಿಹಾರ, ಮಳೆ ನೀರಿನಿಂದ ಮನೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದರೆ 1 ಲಕ್ಷ ಪರಿಹಾರ ಹಾಗೂ ಮಳೆ ನೀರಿಗೆ ಮನೆ ಸಂಪೂರ್ಣವಾಗಿ ಬಿದ್ದು ಹೋಗಿದ್ರೆ 5 ಲಕ್ಷ ಪರಿಹಾರ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ.
ಇನ್ನು ಈ ಸಮಯದಲ್ಲಿ ಮಾತನಾಡಿದ ಸಿಎಂ, ಈ ಬಾರಿ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. 11 ಕೆರೆಗಳ ನೀರು ಯಲಹಂಕ ಕೆರೆಗೆ ಸೇರುತ್ತದೆ, ಈ ಎಲ್ಲಾ 11 ಕೆರೆ ತುಂಬಿ ಹರಿದು ಯಲಹಂಕ ಕೆರೆಗೆ ಬಂದಿದೆ. ಯಲಹಂಕ ಕೆರೆ ಬಳಿಯ ರಾಜಕಾಲುವೆ ಪ್ರಮಾಣ ಸಣ್ಣದಿದೆ. ಮಳೆ ನಿಂತ ಬಳಿಕ ರಾಜಕಾಲುವೆ ಅಗಲೀಕರಣಕ್ಕೆ ಸೂಚನೆ ನೀಡುತ್ತೇನೆ. ಇನ್ನು ಹೆದ್ದಾರಿ ಪ್ರಾಧಿಕಾರದ ಜೊತೆ ಚರ್ಚಿಸಿ ಕಾಮಗಾರಿ ಮಾಡ್ತೇವೆ ಹಾಗೂ ಬೆಂಗಳೂರಿನ ರಾಜಕಾಲುವೆ 50 ಕಿ.ಮೀ ಹೆಚ್ಚಿಸಿ, ಶಾಶ್ವತ ಪರಿಹಾರ ಕೈಗೊಳ್ಳುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ್ದಾರೆ.