Friday, January 24, 2025

ದೇಶದ ಉಕ್ಕಿನ ಮಹಿಳೆಯನ್ನ ಸ್ಮರಿಸಿದ ಭಾರತ

ನೆನ್ನೆ ಭಾರತ ಕಂಡ ಧೀಮಂತ ನಾಯಕಿ, ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮ ಜಯಂತಿ. ತಮ್ಮ ನಿಷ್ಠುರ ನಿಲುವು ಹಾಗೂ ವರ್ಚಸ್ಸಿನಿಂದ ದೇಶದ ಘನತೆ ಹಾಗೂ ಹಿರಿಮೆಯನ್ನ ವಿಶ್ವ ಮಟ್ಟದಲ್ಲಿ ತೋರಿಸಿಕೊಟ್ಟ ಮಹಾನಾಯಕಿಯನ್ನ ನೆನ್ನೆ ಭಾರತದ ದೇಶವು ಸ್ಮರಿಸಿಕೊಳ್ಳುತ್ತಿತ್ತು. ಹಾಗಿದ್ರೆ ಭಾರತದ ಮೊದಲ ಹಾಗೂ ಏಕೈಕ ಮಹಿಳಾ ಪ್ರಧಾನಿಯ ರಾಜಕೀಯ ಯಾನ ಹೇಗಿತ್ತು ಮತ್ತು ರಾಜಕೀಯಕ್ಕೆ ಬಂದ ಹೇಗೆ ಸಂಪೂರ್ಣ ವಿವರ ಇಲ್ಲಿದೆ.

ಇಂದಿರಾ ಗಾಂಧಿ ಈ ಹೆಸ್ರು ಕೇಳಿರದ ಭಾರತೀಯರೇ ಇಲ್ಲ, ಒಂದು ಕಾಲದಲ್ಲಿ ಭಾರತ ದೇಶದಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವ ಹಾಗೂ ಗಟ್ಟಿ ನಿಲುವುಗಳ ಮೂಲಕ ದೇಶದ ಆಂತರಿಕ ಹಾಗು ಹೊರಗಿನ ದುಷ್ಟರಿಂದ ಬರಬಹುದಾದ ದೊಡ್ಡ ದೊಡ್ಡ ಆಪಾಯಗಳನ್ನ ತಡೆದ ಉಕ್ಕಿನ ಮಹಿಳೆಯ ವರ್ಚಸ್ಸು ಇಡೀ ವಿಶ್ವವ್ಯಾಪಿಯಾಗಿತ್ತು.

ಒಂದು ಕಾಲದಲ್ಲಿ ಭಾರತದ ವಿರುದ್ಧ ತಿರುಗಿ ಬಿದ್ದಿದ್ದ ಬಲಿಷ್ಠ ಅಮೆರಿಕಾಗೆ ರಷ್ಯಾದೊಂದಿಗಿನ ಗೆಳೆತನದ ಮೂಲಕ ರಾಜತಾಂತ್ರಿಕವಾಗಿ ಪೆಟ್ಟು ಕೊಟ್ಟಿದ್ರು. ಹೀಗಾಗಿ ಇಂದಿಗೂ ಕೂಡ ಅಮೆರಿಕಾ ಇಂದಿರಾ ಗಾಂಧಿ ಹೆಸ್ರು ಕೇಳಿದ್ರೆ ಕೊಂಚ ಇರಿಸು ಮುರಿಸುಗೊಳ್ಳುತ್ತೆ. ಹೀಗೆ ಬಲಾಢ್ಯ, ಕುತಂತ್ರಿ ದೇಶಗಳಿಗೂ ಇಂದಿರಾ ಭಾರತ ಇನ್ನಿಲ್ಲದಂತೆ ಕಾಡಿದ್ದಂತೂ ಸುಳ್ಳಲ್ಲ. ಇಂಥಾ ಇಂದಿರಾ ಗಾಂಧಿಯವರ 104ನೇ ಜನ್ಮದಿನೋತ್ಸವವನ್ನು ನೆನ್ನೆ ಎಲ್ಲೆಡೆ ಆಚರಿಸಲಾಗಿತ್ತು.

ಇಂತಹ ದಿಟ್ಟ ಹಾಗು ಧೀಮಂತ ವ್ಯಕ್ತಿತ್ವದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮ ಜಯಂತಿ. ಹಾಗಾಗಿ ನೆನ್ನೆ ದೇಶಾದ್ಯಂತ ದಿವಂಗತ ಇಂದಿರಾ ಗಾಂಧಿ ಅವರನ್ನ ನೆನಪು ಮಾಡಿಕೊಂಡು ಬರುತ್ತಿದೆ. ಇನ್ನು ಇಂದಿರಾ ಗಾಂಧಿ ಕೂಡ ಅಷ್ಟು ಸುಲಭವಾಗಿ ರಾಜಕೀಯಕ್ಕೆ ಬಂದ ನಾರಿಯಲ್ಲ. ಹೆಜ್ಜೆ ಹೆಜ್ಜೆಗೂ ಭಾರತದ ರಾಜಕೀಯ ವ್ಯವಸ್ಥೆಯನ್ನ ಕೂಲಂಕಶವಾಗಿ ಅರ್ಥ ಮಾಡಿಕೊಂಡು ಭಾರತದ ರಾಜಕೀಯ ರಂಗಕ್ಕೆ ಧುಮುಕಿದ್ರು. ಅಸಲಿಗೆ ಇಂದಿರಾ ಅವರ ಬಾಲ್ಯದಲ್ಲಿ ತಂದೆ ಮಾಜಿ ಪ್ರಧಾನಿ ಜವಾಹರ್​ ಲಾಲ್ ನೆಹರು ಅವರ ರಾಜಕೀಯ ಹಾಗು ಸ್ವಾತಂತ್ರ್ಯ ಚಳವಳಿಯ ವಾತಾವರಣ ಅವರನ್ನ ಕಾಡುತ್ತಲೇ ಇತ್ತು.

ಹೌದು, 1917ರ ನವಂಬರ್ 19ರಂದು ಜವಾಹರ್ ಲಾಲ್ ನೆಹರು ಮತ್ತು ಕಮಲಾ ದಂಪತಿ ಪುತ್ರಿಯಾಗಿ ಜನಿಸಿದ ಇಂದಿರಾ, ತಮ್ಮ ಬಾಲ್ಯದಿಂದಲೂ ಭಾರತದ ನಾನಾ ಹೋರಾಟಗಳು ಹಾಗು ಇಲ್ಲಿನ ವ್ಯವಸ್ಥೆ ಬಗ್ಗೆ ಮೊದಲಿನಿಂದಲೂ ಕೂಲಂಕಶವಾಗಿ ಅರ್ಥ ಮಾಡಿಕೊಂಡು ಬಂದಿದ್ರು. ಹೀಗಾಗಿಯೇ 70-80ನೇ ದಶಕದಲ್ಲಿ ಇಂಡಿಯಾ ಅಂದ್ರೆ ಇಂದಿರಾ. ಇಂದಿರಾ ಅಂದ್ರೆ ಇಂಡಿಯಾ ಅನ್ನೋವಷ್ಟರ ಮಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ರು.

ಒಂದು ಹಂತದಲ್ಲಿ ಅಪ್ಪ ನೆಹರು ನಂತರ ಮಂದಗತಿಯಲ್ಲಿ ಸಾಗುತ್ತಿದ್ದ ದೇಶದ ಪ್ರಗತಿಯ ಓಟವನ್ನ ಮತ್ತೆ ಮಿಂಚಿನ ವೇಗಕ್ಕೆ ತಂದಿದ್ದು ಇಂದಿರಾ ಗಾಂಧಿ ಅಂದ್ರೆ ತಪ್ಪಾಗಲ್ಲ. ಅಂದಿನ ಕಾಲದಲ್ಲಿ ಮಹಿಳೆಯರನ್ನ ತುಚ್ಚವಾಗಿ ಕಾಣುತ್ತಿದ್ದ ಹಾಗು ಕೇವಲ ಪುರುಷರಿಂದಲೇ ತುಂಬಿ ಹೋಗಿದ್ದ ರಾಜಕೀಯ ವ್ಯವಸ್ಥೆಯಲ್ಲಿ ಬಲಾಢ್ಯ ಶಕ್ತಿಯಾಗಿ ನಿಂತವರು ಇಂದಿರಾ ಗಾಂಧಿ.

1966ರಲ್ಲಿ ರಷ್ಯಾದ ತಾಷ್ಕೆಂಟ್​ನಲ್ಲಿ ಅಂದಿನ ಪ್ರಧಾನಿ ಲಾಲ್​ ಬಹದ್ದೂರ್​​ ಶಾಸ್ತ್ರಿ ಅಕಾಲಿಕ ಮರಣ ಹೊಂದಿದ್ರು. ಈ ಹಿನ್ನೆಲೆ ಪಕ್ಷದಲ್ಲಿ ಸಾಕಷ್ಟು ಜನ ಹಿರಿಯ ನಾಯಕರು ಇದ್ದ ಕಾರಣ ಪ್ರಧಾನಿ ಹುದ್ದೆ ಯಾರಿಗೆ ನೀಡಬೇಕು ಅನ್ನೋ ಗೊಂದಲ ಕಾಂಗ್ರೆಸ್​ ಪಕ್ಷದಲ್ಲಿ ಉದ್ಭವಿಸಿತ್ತು. ಈ ವೇಳೆ ಲಾಲ್​ ಬಹದ್ದೂರ್​ ಶಾಸ್ತ್ರಿ ಸರ್ಕಾರದಲ್ಲಿ ಈ ಹಿಂದೆ ವಾರ್ತಾ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರನ್ನ ಕಾಂಗ್ರೆಸ್​ ಹಿರಿಯ ನಾಯಕರಾದ ಅತುಲ್ಯ ಗೋಷ್, ಎಸ್​.ಕೆ.ಪಾಟೀಲ್, ಎಸ್​.ನಿಜಲಿಂಗಪ್ಪ ಹಾಗು ಬಿಜು ಪಟ್ನಾಯಕ್​ ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ ಅವರನ್ನ ಆಯ್ಕೆ ಮಾಡಿದ್ರು. ಅಲ್ಲಿಂದ ಭಾರತದಲ್ಲಿ ಇಂದಿರಾ ಯುಗ ಆರಂಭವಾಗಿತ್ತು.

ಹೀಗೆ ಏಕಾಏಕಿ ಇಂದಿರಾ ಗಾಂಧಿ ಪ್ರಧಾನಿಯಾಗುತ್ತಿದ್ದಂತೆ ಅವರ ವಿರುದ್ಧ ಹಲವು ಟೀಕೆಗಳು ಕೂಡ ಕೇಳಿ ಬಂದಿದ್ವು. ಯಾಕಂದ್ರೆ, ಈ ಹಿಂದೆ ಲಾಲ್​ ಬಹದ್ದೂರ್​ ಶಾಸ್ತ್ರಿ ಸರ್ಕಾರದಲ್ಲಿ ವಾರ್ತಾ ಸಚಿವರಾಗಿದ್ದಾಗ ಇಂದಿರಾ ಗಾಂಧಿ ಹಲವು ವೈಫಲ್ಯಗಳನ್ನ ಎದುರಿಸಿದ್ರು. ಈ ಹಿನ್ನೆಲೆಯಲ್ಲಿ ರಾಮ್ ಮನೋಹರ ಲೋಹಿಯ ಅವರಂಥ ಪ್ರಭಾವಿ ನಾಯಕರಿಂದ ಗೂಂಗಿ ಗುಡಿಯಾ ಅಂತ ಕರೆಸಿಕೊಂಡಿದ್ರು. ಆದ್ರೆ ಇಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಇಂದಿರಾ, ತಮ್ಮ ಆಡಳಿತ ಶೈಲಿಯ ಮೂಲಕವೇ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ರು. ಇಂತಹ ಉತ್ತುಂಗದ ಅವಧಿಯಲ್ಲೇ ತಮ್ಮ ಜನಪ್ರಿಯ ಕಾರ್ಯಕ್ರಮಗಳನ್ನ ಜಾರಿಗೆ ತಂದ ಇಂದಿರಾ ಗಾಂಧಿ, 14 ರಾಷ್ಟ್ರೀಯ ವಾಣಿಜ್ಯ ಬ್ಯಾಂಕ್​​​ಗಳನ್ನು ರಾಷ್ಟ್ರೀಕರಣಗೊಳಿಸಿದ್ರು. ಇದೇ ವೇಳೆ ರಾಜ ವಂಶಸ್ಥ ಕುಟುಂಬಗಳಿಗೆ ನೀಡ್ತಿದ್ದ ವಾರ್ಷಿಕ ಸರ್ಕಾರಿ ನಿಧಿಯನ್ನು ನಿಲ್ಲಿಸಿದ್ರು. ಬಹು ಮುಖ್ಯವಾಗಿ ಹಲವಾರು ಜನಪರ ಕಾರ್ಯಗಳಿಗೆ ಮುನ್ನುಡಿಯನ್ನ ಬರೆಯುತ್ತಾ ಹೋದ್ರು.

ಹೀಗೆ ಇಂದಿರಾ ಗಾಂಧಿಯವರ ಎಲ್ಲಾ ಯೋಜನೆಗಳು ಬಹುಬೇಗ ಜನರನ್ನ ತಲುಪೋದಕ್ಕೆ ಶುರುವಾಗ್ತಾ ಹೋದ್ವು. ಇದರಿಂದಾಗಿ 1971ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಪೂರ್ಣ ಬಹುಮತದಿಂದ ಅಧಿಕಾರ ಹಿಡಿಯಲು ಕಾರಣವಾಯಿತು. ಇದೇ ವೇಳೆ ಕಾಂಗ್ರೆಸ್​​ನ ಹಿರಿಯ ತಲೆಗಳನ್ನು ಪಕ್ಷದಲ್ಲಿ ಹಿಂದೆ ಸರಿಯುವಂತೆ ಮಾಡಿದ ಇಂದಿರಾ, ಪಕ್ಷದಲ್ಲಿ ಯುವ ಮುಖಂಡರಿಗೆ ಆದ್ಯತೆ ನೀಡ್ತಾ ಬಂದ್ರು. ಒಂದರ್ಥದಲ್ಲಿ ಪಕ್ಷ ಮತ್ತು ಸರ್ಕಾರವನ್ನು ಸಂಪೂರ್ಣ ಇಂದಿರಾ ಗಾಂಧಿಯೇ ಹತೋಟೆಗೆ ತೆಗೆದುಕೊಂಡಿದ್ರು.

ಇದೇ ಸಂದರ್ಭದಲ್ಲಿ ಇಂದಿರಾ ನೇತೃತ್ವದಲ್ಲಿ ಹಸಿರು ಕ್ರಾಂತಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಉಂಟಾಗಿದ್ದ ಆಹಾರದ ಕೊರತೆಯನ್ನು ನೀಗಿಸಲಾಗಿತ್ತು. ಇದು ಭಾರತದಲ್ಲಿ ಆಗ ಸಂಚಲನವನ್ನೇ ಮೂಡಿಸಿತ್ತು. ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡಿದ್ದರಿಂದ ಪರಮಾಣು ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತ ತೀವ್ರವಾದ ಪ್ರಗತಿ ಸಾಧಿಸಿತು. ಇನ್ನು1971ರಲ್ಲಿ ಭಾರತೀಯ ಸೈನ್ಯವು ಬಾಂಗ್ಲಾ ವಿಮೋಚನೆಯ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಗೆಲುವು ಸಾಧಿಸಿದ ಪರಿಣಾಮ ಸ್ವತಃ ಪ್ರತಿಪಕ್ಷಗಳೇ ಇಂದಿರಾ ಗಾಂಧಿಗೆ ದುರ್ಗಾ ಅನ್ನೋ ನಾಮಾಂಕಿತವನ್ನ ನೀಡಿದ್ದರು.

ಹೀಗೆ ರಾಜಕೀಯ ಜೀವನದ ಉತ್ತುಂಗದಲ್ಲಿ ಇರುವಾಗಲೇ ಇಂದಿರಾ ಗಾಂಧಿ ತಮ್ಮ ಜೀವಿತದ ಬಹುದೊಡ್ಡ ಎಡವಟ್ಟೊಂದನ್ನ ಮಾಡಿಕೊಂಡು ಬಿಟ್ರು. 1975-77 ರ ಸಂದರ್ಭದಲ್ಲಿ ದೇಶದಲ್ಲಿ ವಿಧಿಸಿದ ತುರ್ತು ಪರಿಸ್ಥಿತಿಯಿಂದಾಗಿ ಇಂದಿರಾ ಗಾಂಧಿ ತಮಗಿದ್ದ ವರ್ಚಸನ್ನ ತಾವೇ ಹಾಳು ಮಾಡಿಕೊಂಡಿದ್ರು. ಈ ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯಗಳು ಹಾಗು ಅಸಂಖ್ಯ ಊಹಾಪೋಹಗಳು ಹಬ್ಬೋದಕ್ಕೆ ಶುರುವಾಗಿತ್ತು. ಇದಕ್ಕೆ ಪ್ರಮುಖ ಕಾರಣವಾಗಿದ್ದು ಆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮತ್ತು ವ್ಯಕ್ತಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡಿದ್ದು.

ಜೊತೆಗೆ ತುರ್ತುಪರಿಸ್ಥಿತಿ ವಿರೋಧಿಸಿದವರನ್ನು ಜೈಲಿಗೆ ತಳ್ಳಿದ್ದು ಇಂದಿರಾ ವರ್ಚಸ್ಸಿಗೆ ಬಹುದೊಡ್ಡ ಪೆಟ್ಟು ನೀಡಿತ್ತು. ಇದರಿಂದ ಕೆರಳಿದ ಹಿರಿಯ ಗಾಂಧಿವಾದಿ ಜಯಪ್ರಕಾಶ ನಾರಾಯಣ್​ ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ್ರು. ಇದರ ಭಾಗವಾಗಿ ಎಲ್ಲ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಬಂದು ಇಂದಿರಾ ನಡೆಯನ್ನು ವಿರೋಧಿಸಲು ಹೋರಾಟ ಪ್ರಾರಂಭಿಸಿದವು. ಆಗ ಎಲ್ಲ ಪಕ್ಷಗಳು ಇಂದಿರಾ ಹಟಾವೋ ಅನ್ನೋ ಘೋಷಣೆ ಮೂಲಕ ಹೋರಾಟ ಆರಂಭಿಸಿದರು. ಮಾರ್ಚ್ 21, 1977ರಂದು ತುರ್ತು ಪರಿಸ್ಥಿತಿಯನ್ನು ವಾಪಸ್ ಪಡೆಯಲಾಯ್ತು.

ಇದಾದ ಬಳಿಕ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ಹೀನಾಯ ಸೋಲನ್ನ ಅನುಭವಿಸಬೇಕಾಗಿ ಬಂತು. ಇದೇ ಸಂಧರ್ಭದಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮೊರಾರ್ಜಿ ದೇಸಾಯಿ ನೇತೃತ್ವದ ಕಾಂಗ್ರೇಸೇತರ ಜನತಾ ಸರ್ಕಾರ ಅಧಿಕಾರಕ್ಕೆ ಬಂತು. ಹೀಗೆ 1977ರಿಂದ 80ರ ಅವಧಿಯ ನಡುವೆ ಮೊರಾರ್ಜಿ ದೇಸಾಯಿ ಮತ್ತು ಚೌಧರಿ ಚರಣ್ ಸಿಂಗ್ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ರು.
ಆದ್ರೆ ಈ ಸಮ್ಮಿಶ್ರ ಸರ್ಕಾರ ಹಲವಾರು ಭಿನ್ನಾಭಿಪ್ರಾಯಗಳಿಂದ ಬೇಗ ಪತನಗೊಳ್ಳುವ ಪರಿಸ್ಥಿತಿ ಬಂತು. ಆನಂತರ 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿ, ಹಲವು ಯೋಜನೆಗಳ ಮೂಲಕ ಮತ್ತೆ ಜನಪ್ರಿಯತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ್ರು. ಅದರಲ್ಲೂ ಗರೀಬಿ ಹಠಾವೋ ಘೋಷಣೆ ದೇಶದ ಉದ್ದಗಲಕ್ಕೂ ಸದ್ದು ಮಾಡಿತ್ತು.

ಇದೇ ಅವಧಿಯಲ್ಲಿ ಕೆಲ ಉಗ್ರವಾದಿ ಸಿಖ್ಖರ ಖಲಿಸ್ತಾನ ಬೇಡಿಕೆಗೆ ಬೆಂಬಲವಾಗಿದ್ದ ಶಕ್ತಿಗಳನ್ನ ಬಗ್ಗುಬಡಿದು ಪಂಜಾಬ್​​​ನ ಸ್ವರ್ಣಮಂದಿರದ ಮೇಲೆ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆಸಿದ್ರು. ಈ ಮೂಲಕ ಪ್ರತ್ಯೇಕತೆಯ ಸೊಲ್ಲೆತ್ತಿದವರ ನಡು ಮುರಿದು ಬುದ್ದಿ ಕಲಿಸಿದ್ರು. ಈ ಒಂದು ಘಟನೆಯೇ ಮುಂದೆ ಇಂದಿರಾ ಗಾಂಧಿಯವರ ಜೀವಕ್ಕೇ ಕುತ್ತು ತಂದಿದ್ದು ಸುಳ್ಳಲ್ಲ. ಸ್ವರ್ಣ ಮಂದಿರದ ಮೇಲಿನ ಕ್ರಮದಿಂದ ಸಿಖ್ಖರ ಕೆಂಗಣ್ಣಿಗೆ ಗುರಿಯಾದ ಇಂದಿರಾ ಗಾಂಧಿ, 1984ರ ಅಕ್ಟೋಬರ್ 31 ರಂದು ಅವರ ಸೆಕ್ಯೂರಿಟಿ ಗಾರ್ಡ್​ಗಳಿಂದಲೇ ಗುಂಡಿನ ಹೊಡೆತ ತಿಂದು ಸಾವನ್ನಪ್ಪುತ್ತಾರೆ.

ಹೀಗೆ ಭಾರತದ ರಾಜಕೀಯ ಇತಿಹಾಸದಲ್ಲಿ ಉಕ್ಕಿನ ಮಹಿಳೆ ಅಂತಲೇ ಕರೆಸಿಕೊಂಡಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮ ಅಂಗರಕ್ಷರಿಂದಲೇ ಸಾವಿಗೀಡಾಗಿದರು. ಇದಾದ ಬಳಿಕ ದೇಶದಲ್ಲಿ ಸಾಕಷ್ಟು ವಿದ್ಯಮಾನಗಳು ಹಾಗು ಮಹತ್ತರವಾದ ಬದಲಾವಣೆಗಳು ನಡೆದಿವೆ. ಆದ್ರೆ ಇಂದಿರಾ ಗಾಂಧಿಯವರ ದಿಟ್ಟತೆ, ನಿಲುವು, ಆಕರ್ಷಕ ವ್ಯಕ್ತಿತ್ವ ಹಾಗೂ ಜನಪ್ರಿಯತೆ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂಥದ್ದು. ಇಂದಿಗೂ ಇಂದಿರಾ ಗಾಂಧಿಯವರು ಭಾರತದ ಅಸಂಖ್ಯಾತ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಅವರು ನಮ್ಮನ್ನಗಲಿ 36 ವರ್ಷಗಳೇ ಕಳೆದುಹೋಗಿದ್ರೂ ಭಾರತದ ಇತಿಹಾಸದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿದೆ.

RELATED ARTICLES

Related Articles

TRENDING ARTICLES