Wednesday, January 22, 2025

ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಸಾಮಾನ್ಯವಾಗಿದ್ದ ಕಣ ಕದನವು ಈ ಬಾರಿ ರೋಚಕವಾಗಿ ಮಾರ್ಪಟ್ಟಿದೆ, ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಚಾರಕ್ಕೆ ಹೆಚ್ಚಾಗಿ ಸಮುದಾಯದಿಂದ ಬೆಂಬಲ ಗಳಿಸಲು ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ.

ಪರಿಷತ್ತಿನಲ್ಲಿ ರಾಜ್ಯಾದ್ಯಂತ 3.5 ಲಕ್ಷ ಸದಸ್ಯರಿದ್ದು, ಈ ಪೈಕಿ 3.1 ಲಕ್ಷ ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಕೆಲವು ಅಭ್ಯರ್ಥಿಗಳು ಪ್ರಮುಖ ಸ್ಥಳೀಯ ಪ್ರಭಾವಿಗಳು ಮತ್ತು ಸಾಹಿತಿಗಳನ್ನು ಭೇಟಿ ಮಾಡಲು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುವುದರ ಹೊರತಾಗಿ ಮೂರ್ನಾಲ್ಕು ಬಾರಿ ಮನವಿಗಳನ್ನು ಕೂಡ ಕಳುಹಿಸಿದ್ದಾರೆ. ಒಟ್ಟಾರೆ ಶತಾಯಗತಾಯ ಅಧ್ಯಕ್ಷ ಸ್ಥಾನ ಪಡೆಯಲೇ ಬೇಕೆಂದು ಪಣ ತೊಟ್ಟಿದ್ದಾರೆ ಕಣದಲ್ಲಿರುವ ಅಭ್ಯರ್ಥಿಗಳು.

ನವೆಂಬರ್ 21 ರಂದು ನಡೆಯಲಿರುವ ಮತದಾನಕ್ಕೆ ಕೇವಲ ಮೂರು ದಿನಗಳು ಮಾತ್ರ ಬಾಕಿಯಿದ್ದು, ಆಕಾಂಕ್ಷಿಗಳು ತಮ್ಮ ಹುದ್ದೆಯನ್ನು ಪಡೆಯುವ ಅವಕಾಶಕ್ಕಾಗಿ ಮತದಾರರನ್ನು ಓಲೈಸುವಲ್ಲಿ ನಿರತರಾಗಿದ್ದಾರೆ. ಚುನಾವಣಾ ಕಣದಲ್ಲಿ ಮಹೇಶ ಜೋಶಿ, ಶೇಖರಗೌಡ ಮಾಲಿ ಪಾಟೀಲ್, ವಾ ಚಾ ಚೆನ್ನೇಗೌಡ, ಕವಯಿತ್ರಿ ಸರಸ್ವತಿ ಶಿವಪ್ಪ ಚಿಮ್ಮಲಗಿ, ಮಾಯಣ್ಣ, ಕೆ ರತ್ನಾಕರ ಶೆಟ್ಟಿ ಮುಂತಾದವರು ಸೇರಿದ್ದಾರೆ. ಸಾಮಾನ್ಯವಾಗಿ 6-8 ಅಭ್ಯರ್ಥಿಗಳು ಮಾತ್ರ ಸ್ಪರ್ಧೆಯಲ್ಲಿರುತ್ತಾರೆ, ಆದರೆ ಈ ಬಾರಿ ಉಮೇದುವಾರರ ಸಂಖ್ಯೆ ಜಾಸ್ತಿಯಾಗಿದೆ.

ಪರಿಷತ್ತಿನ 3.4 ಲಕ್ಷ ಸದಸ್ಯರಲ್ಲಿ 3.1 ಲಕ್ಷ ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಸದಸ್ಯತ್ವ ಪಡೆದ ಮೂರು ವರ್ಷಗಳ ನಂತರ ಸದಸ್ಯರು ಮತದಾನದ ಅರ್ಹತೆಯನ್ನು ಪಡೆಯುತ್ತಾರೆ ಎಂದು ವಿಶೇಷ ಚುನಾವಣಾಧಿಕಾರಿ ಎಸ್‌ಟಿ ಮೋಹನ್ ರಾಜು ತಿಳಿಸಿದರು.

ಇನ್ನೂ ಉಳಿದಂತೆ ಪಶ್ಚಿಮ ಬಂಗಾಳ, ಮಣಿಪುರ ಮತ್ತು ಗುಜರಾತ್ ಮತ್ತು ಜರ್ಮನಿ, ಯುಎಸ್ ಮತ್ತು ಸಿಂಗಾಪುರದಂತಹ ದೇಶಗಳಲ್ಲಿ ಸುಮಾರು 4,800 ಮತದಾರರು ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸುತ್ತಾರೆ. ಈಗಾಗಲೇ ವಿಶೇಷ ಚುನಾವಣಾಧಿಕಾರಿಗಳ ಕಚೇರಿಗೆ ಅಂಚೆ ಮತಪತ್ರಗಳು ಬಂದಿವೆ. ನವೆಂಬರ್ 24 ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

RELATED ARTICLES

Related Articles

TRENDING ARTICLES