Sunday, November 24, 2024

ಕೃಷಿ ಕಾಯ್ದೆ ರದ್ದು ಪ್ರಶ್ನೆಗಳನ್ನು ಹುಟ್ಟು ಹಾಕಿದೆ – ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : ರೈತರ ಆಕ್ರೋಶಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಟ್ವಿಟ್​ ಮಾಡಿದ್ದಾರೆ.

ಪ್ರಧಾನಿ ಮೋದಿ ಇಂದು ಮಾಧ್ಯಮದ ಮುಂದೆ ಕೃಷಿ ಕಾಯ್ದೆ ರದ್ದುಪಡಿಸಿದ ಬೆನ್ನಲ್ಲೇ ಟ್ವಿಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಕೊನೆಗೂ ಕೇಂದ್ರಕ್ಕೆ ಜ್ಞಾನೋದಯ ಆಗಿರುವುದು ಉತ್ತಮ ಬೆಳವಣಿಗೆ. ರೈತರ ಜತೆ ಚರ್ಚೆ ನಡೆಸದೇ ಈ ಕಾಯ್ದೆಗಳ ಏಕಪಕ್ಷೀಯ ಜಾರಿ ಮತ್ತು ಈಗ ಏಕಾಏಕಿ ರದ್ಧತಿಯು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ನಿಜಕ್ಕೂ ಕರಾಳ ಕಾಯ್ದೆಗಳ ವಾಪಸಾತಿ ರೈತರವಿಜಯ & ಐತಿಹಾಸಿಕ. ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿದರು. ಕೇಂದ್ರವು ಅವರ ಮೇಲೆ ಅಮಾನವೀಯ ಕ್ರೌರ್ಯ ನಡೆಸಿತು. ಅನೇಕ ಅಮೂಲ್ಯ ಜೀವಗಳ ನೆತ್ತರು ಹರಿಯಿತು. ಚಳಿ, ಮಳೆ, ಬಿಸಿಲೆನ್ನದೇ ರೈತರು ಹೋರಾಡಿದ್ದಾರೆ ಎಂದಿದ್ದಾರೆ.

 ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಕೇಂದ್ರದ ನಿರ್ಧಾರ ಪ್ರಾಮಾಣಿಕವಾಗಿರಲಿ. ಕೇವಲ ಮತ ಫಸಲಿಗೆ ಮಾಡಿದ ಹೈಡ್ರಾಮಾ ಆಗದಿರಲಿ. ಚುನಾವಣೆ ಮುಗಿದ ಮೇಲೆ ಆ ಕರಾಳ ಕಾಯ್ದೆಗಳನ್ನು ಬೇರೆ ರೂಪದಲ್ಲಿ ಪುನಾ ಜಾರಿ ಮಾಡುವುದಿಲ್ಲ ಎಂದು ಪ್ರಧಾನಿಗಳು ತಮ್ಮ ಭಾಷಣದಲ್ಲಿ ರೈತರಿಗೆ ಮಾತು ಕೊಡಬೇಕಿತ್ತು. ಹಾಗೂ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ನಾನಾ ಕಡೆ ರೈತರ ವಿರುದ್ಧ ನಡೆದಿರುವ ದೌರ್ಜನ್ಯಕ್ಕೆ ಪ್ರಧಾನಿಗಳು ತಮ್ಮ ಭಾಷಣದಲ್ಲಿ ಕ್ಷಮೆ ಯಾಚನೆ ಮಾಡಬೇಕಿತ್ತು. ಈಗಲಾದರೂ ರೈತರ ಮೇಲೆ ಹಿಂಸಾಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎಂಬುದು ನನ್ನ ಒತ್ತಾಯ ಎಂದು ಹೆಚ್​.ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES