ಶಿವಮೊಗ್ಗ : ಸರ್ಕಾರದ ಮತ್ತು ಸಚಿವರ ಗಮನಕ್ಕೆ ಬರುವ ಮುನ್ನವೇ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ರೈತರ ಬದುಕು, ಬವಣೆಗಳ ಬಗ್ಗೆ ಗಮನ ಹರಿಸಿ, ಅವರ ಕಷ್ಟಗಳನ್ನು ಬಗೆಹರಿಸುವ ಕೆಲಸವಾಗಬೇಕೆಂದು, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ರೈತ ಮೋರ್ಚಾ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಸಮಸ್ಯೆಗಳು ಹಲವಾರಿದ್ದು, ಇದನ್ನು ನಿವಾರಿಸುವ ಕೆಲಸವಾಗಬೇಕಿದೆಯಲ್ಲದೇ, ರೈತರ ಬಳಿ ತೆರಳಿ, ಸರ್ಕಾರ ಅವರ ಜೊತೆ ನಿಲ್ಲುವ ಕೆಲಸ ಮಾಡಿದೆ ಎಂದರು. ಅಲ್ಲದೇ, ಕೇಂದ್ರ ಸರ್ಕಾರ, ರೈತರ ಪರ ನೂತನ ಕೃಷಿ ಕಾಯ್ದೆ ಜಾರಿಗೆ ತರುವ ಮೂಲಕ, ರೈತರಿಗೆ ಸಹಕಾರಿಯಾಗಿದೆ ಎಂದರು.
ರೈತರ ಪರ ಪ್ರಾಮಾಣಿಕ ಕಳಕಳಿ ಇಲ್ಲದವರು ಕೇಂದ್ರದ ಕೃಷಿ ಕಾಯಿದೆಗಳ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಅದೊಂದು ಹೈಜಾಕ್ ಹೋರಾಟ ಎಂದು ಈರಣ್ಣ ಕಡಾಡಿ ಹೇಳಿದರು. ಕೇಂದ್ರ ಸರ್ಕಾರದ ಕೃಷಿ ಕಾಯಿದೆಗಳ ವಿರುದ್ಧ ವಿರೋಧ ಪಕ್ಷಗಳು ಭಾವನಾತ್ಮಕ ಬಂದೂಕು ಇಟ್ಟು ಹೊಡೆಯುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದ್ವಿಗುಣ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಶ್ರಮಿಸುತ್ತಿದ್ದಾರೆ. ಇದಕ್ಕಾಗಿಯೇ ರೈತರ ಪರವಾದ ಕಾಯಿದೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಆದರೆ ಪ್ರಾಮಾಣಿಕ ಕಳಕಳಿ ಇಲ್ಲದ ಸಂಘಟನೆಗಳು ರೈತ ಹೋರಾಟವನ್ನು ಹೈಜಾಕ್ ಮಾಡಿವೆ ಎಂದು ದೂರಿದರು.
ಈ ವೇಳೆ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ರಾಜ್ಯ ಪ್ರಕೋಷ್ಟಗಳ ಸಂಚಾಲಕ ಎಂ.ಬಿ.ಭಾನುಪ್ರಕಾಶ್, ವಿಭಾಗ ಪ್ರಭಾರಿ ಗಿರೀಶ ಪಟೇಲ್, ಪ್ರಮುಖರಾದ ಸಾಲೆಕೊಪ್ಪ ರಾಮಚಂದ್ರ, ಪ್ರಸನ್ನ ಕೆರೆಕೈ, ವಿನ್ಸೆಂಟ್ ರೋಡ್ರಿಗಸ್, ಡಾ.ನವೀನ್, ಆನಂದಪ್ಪ, ದಿನೇಶ್, ಶಿವಪ್ರಸಾದ್ ಉಪಸ್ಥಿತರಿದ್ದರು.