ಲಂಡನ್: ಪಾಕಿಸ್ತಾನ ಹೋರಾಟಗಾರ್ತಿ, ಕಿರಿಯ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸೂಫ್ ಜಾಯಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆ ವಿಷಯವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಜೊತೆಗೆ ಪತಿ ಜೊತೆಗಿನ ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ.
ಇದು ನನ್ನ ಜೀವನ ಅತ್ಯಂತ ಪ್ರಮುಖವಾದ ದಿನ. ಅಸರ್ ಮತ್ತು ನಾನು ಮದುವೆ ಬಂಧನದಲ್ಲಿ ಬಂಧಿಯಾಗುತ್ತಿದ್ದೇವೆ. ಬರ್ಮಿಂಗ್ ಹ್ಯಾಂನ ನಮ್ಮ ಮನೆಯಲ್ಲಿ ಸರಳವಾಗಿ ಮದುವೆ ನಡೆದಿದೆ. ಈ ವೇಳೆ ಕುಟುಂಬಸ್ಥರು ಮಾತ್ರ ಉಪಸ್ಥಿತರಿದ್ದರು. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ನಮ್ಮ ಮೇಲಿರಲಿ. ನಾವು ಜೊತೆಯಾಗಿ ಜೀವನ ನಡೆಸಲು ಉತ್ಸಾಹಿತರಾಗಿದ್ದೇವೆ ಎಂದು ಮಲಾಲಾ ಹೇಳಿಕೊಂಡಿದ್ದಾರೆ.
೨೪ ವರ್ಷದ ಮಲಾಲಾ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಧ್ಚನಿ ಎತ್ತಿದ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ. ಅತಿ ಚಿಕ್ಕ ವಯಸ್ಸಿನಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಮೊದಲಿಗರು. ೨೦೧೨ರಲ್ಲಿ ಮಲಾಲಾ ಬಾಲಕಿಯರಿಗೂ ಶಿಕ್ಷಣ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ್ದಕ್ಕೆ ತಾಲಿಬಾನಿಗಳು ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಮಯದಲ್ಲಿ ಮಲಾಲಾ ಜಾಗತಿಕವಾಗಿ ಗುರುತಿಸಿಕೊಂಡಿದ್ದರು.
ಪತಿಯ ಬಗ್ಗೆ ಮಲಾಲಾ ಹೆಚ್ಚಿನ ವಿವರ ತಿಳಿಸಿಲ್ಲ. ಟ್ವಿಟರ್‌ನಲ್ಲಿ ‘ಅಸರ್’ ಎಂದಷ್ಟೇ ಉಲ್ಲೇಖಿಸಿದ್ದಾರೆ. ಮಲಾಲಾ ವಿವಾಹವಾಗಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೈ ಪರ್ಫಾರ್ಮೆನ್ಸ್ ಸೆಂಟರ್‌ನ ಜನರಲ್ ಮ್ಯಾನೇಜರ್ ‘ಅಸರ್ ಮಲಿಕ್’ ಅವರನ್ನು ಎಂದು ಕೆಲವು ಅಂತರ್ಜಾಲ ತಾಣಗಳು ವರದಿ ಮಾಡಿವೆ.
ಮಲಾಲ ಯೂಸಫ್ ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ‘ಸ್ವಾತ್ ಜಿಲ್ಲೆ’ಯ ಮಿಂಗೋರಗ್ರಾಮದ ಒಂದು ಶಾಲೆಯ ವಿದ್ಯಾರ್ಥಿನಿ ಮತ್ತು ಶಿಕ್ಷಣ ಕಾರ್ಯಕರ್ತೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ಸಂಘಟನೆಯು ನಿಷೇಧಿಸಿರುವ ‘ಸ್ವಾತ್ ಕಣಿವೆ’ಯಲ್ಲಿನ ಹುಡುಗಿಯರ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳಪರ ತನ್ನ ಕ್ರಿಯಾತ್ಮಕ ಹೋರಾಟಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ.