Monday, May 20, 2024

ಪ್ರತ್ಯೇಕ ಒಕ್ಕೂಟ ರಚನೆಗೆ ಜಯಕಾರ- ಸಿಎಂ, ಸಚಿವರ‌ ಭಾವಚಿತ್ರಗಳಿಗೆ ಕ್ಷೀರಾಭೀಷೇಕ

ಚಿಕ್ಕಬಳ್ಳಾಪುರ: ಜಿಲ್ಲೆಯಾಗಿ ಒಂದೂವರೆ ದಶಕವಾದರೂ ಕೆಲವೊಂದು ಕಾರ್ಯಗಳು ಕಾರ್ಯಗತವಾಗಿರಲಿಲ್ಲ. ಇದರಲ್ಲಿ ಸಹಕಾರ ಸಂಘಗಳ ಇಬ್ಭಾಗವಾಗವೂ ಒಂದಾಗಿತ್ತು. ಇದಕ್ಕಾಗಿ ಜಿಲ್ಲೆಯ ಜನ ದಶಕಗಳ ಕಾಲ ಹೋರಾಟ ಮಾಡ್ತಿದ್ರು. ಆದರೆ ಸಚಿವರಾಗಿ ಸುಧಾಕರ್ ಸರ್ಕಾರದ ಮೇಲೆ ಒತ್ತಡ ಹಾಕಿ ಕಡೆಗೂ ಸಚಿವ ಸಂಪುಟದಲ್ಲಿ ಕೋಚಿಮುಲ್ ಒಕ್ಕೂಟದ ಇಬ್ಭಾಗಕ್ಕೆ ಮುದ್ರೆ ಹಾಕಿಸಿದ್ದಕ್ಕೆ, ಚಿಕ್ಕಬಳ್ಳಾಪುರದಲ್ಲಿ ಸಚಿವರ ಬೆಂಬಲಿಗರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಕಾರಣಕತೃಗಳಿಗೆ ಕ್ಷೀರಾಭೀಷೇಕ ಮಾಡಿ ಸಂಭ್ರಮಿಸಿದರು.

ಸಿಲ್ಕ್ ಅಂಡ್ ಮಿಲ್ಕ್, ಹಣ್ಣು ತರಕಾರಿ, ಪುಷ್ಪೋದ್ಯಮಕ್ಕೆ ಖ್ಯಾತಿಯಾದ ಚಿಕ್ಕಬಳ್ಳಾಪುರ ಜಿಲ್ಲೆ, ಹಾಲು ಒಕ್ಕೂಟದಲ್ಲಿ ದಶಕಗಳ ಕಾಲ ಕೋಲಾರ ಜಿಲ್ಲೆಯ ಜೊತೆಗೆ ಬಾಂಧವ್ಯ ಹೊಂದಿತ್ತು. 2007 ರಲ್ಲಿ ಕೋಲಾರದಿಂದ ಚಿಕ್ಕಬಳ್ಳಾಪುರ ಬೇರ್ಪಟ್ಟ ನಂತರ ಹಾಲು‌ ಉತ್ಪಾದಕರ ಸಹಕಾರ ಸಂಘ ಹಾಗೂ ಡಿಸಿಸಿ ಬ್ಯಾಂಕ್ ಇಬ್ಭಾಗವಾಗದೇ ಹಾಗೇ ಉಳಿದಿತ್ತು. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಅನ್ಯಾಯವಾಗ್ತಿದೆ ಅಂತ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಹೋರಾಟ ಮಾಡಿದ್ರು, ಇಷ್ಟಾದರೂ ಫಲಿಸಿರಲಿಲ್ಲ. ಇದು ಇತ್ತೀಚಿಗೆ ಕಾಂಗ್ರೆಸ್ ನಾಯಕರು ಮತ್ತು ಬಿಜೆಪಿ ಸರ್ಕಾರದ ಸಚಿವ‌ ಸುಧಾಕರ್ ನಡುವೆ‌ ಪ್ರತಿಷ್ಠೆಯಾಗಿ ಪರಿಣಮಿಸಿದ್ದರಿಂದ ಹಠಕ್ಕೆ ಬಿದ್ದ ಸಚಿವ ಸುಧಾಕರ್ ಕೋಚಿಮುಲ್ ನ್ನ ಕೋಲಾರದಿಂದ ಪ್ರತ್ಯೇಕಿಸಿ ಸಚಿವ ಸಂಪುಟದಲ್ಲಿ ಅಂಗೀಕರಿಸುವಂತೆ ಮಾಡಿದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಹಾಗೂ ಕೆಎಂಎಫ್ ಮುಖಂಡರು ಪಟಾಕಿ ಸಿಡಿಸಿ, ಸಿಹಿ‌ ಹಂಚಿ, ಇಬ್ಭಾಗಕ್ಕೆ ಕಾರಣರಾದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಸುಧಾಕರ್, ಸೋಮಶೇಖರ್ ಭಾವಚಿತ್ರಗಳಿಗೆ ಹಾಲಿನ ಅಭಿಷೇಕ‌ ಮಾಡಿ ಖುಷಿಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲೆಗೆ ಹಾಲು ಒಕ್ಕೂಟ ಪ್ರತ್ಯೇಕವಾಗಿದ್ದರಿಂದ ವ್ಯಾಪಾರ ವಹಿವಾಟು ಹೆಚ್ಚಾಗಿ ಅದರ ಪ್ರತಿಫಲ ಜಿಲ್ಲೆಯ ಹಾಲು ಉತ್ಪಾದಕರಿಗೆ ನೇರವಾಗಿ ದೊರೆಯುತ್ತದೆ. ಆದರೆ‌ ಇದರಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡೋ ಬದಲು ಸಹಕಾರ ನೀಡಿದ್ರೆ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಹಕಾರಿಯಾಗುತ್ತದೆ. ಹಿಂದೆ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಶಿವಶಂಕರರೆಡ್ಡಿ ಅವರೇ ಇದರ ಮುಂದಾಳತ್ವ ವಹಿಸಿ, ಇದೀಗ ಸಚಿವ ಸುಧಾಕರ್ ಗೆ ಕೀರ್ತಿ ಸಿಗುತ್ತೆ ಅನ್ನೋ ಕಾರಣಕ್ಕಾಗಿ ಮೊಸರಲ್ಲಿ ಕಲ್ಲು ಹುಡುಕುವುದು ತರವಲ್ಲ ಅನ್ನೋ ರೀತಿಯಲ್ಲಿ ಕೋಚಿಮುಲ್ ಸದಸ್ಯರಾದ ಕಾಂತರಾಜ್, ಬಾಗೇಪಲ್ಲಿಯ ಮಂಜುನಾಥರೆಡ್ಡಿ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಕೋಚಿಮುಲ್ ಇಬ್ಭಾಗಕ್ಕೆ ನಾಂದಿಯಾಗಿದೆಯಾದರೂ, ಡಿಸಿಸಿ ಬ್ಯಾಂಕ್ ಪ್ರತ್ಯೇಕತೆ ಬಾಕಿಯಿದೆ. ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿ ಸುಧಾಕರ್ ಕೋಚಿಮುಲ್ ಪ್ರತ್ಯೇಕಿಸಿರೋದು ಕಾಂಗ್ರೆಸ್ ಬಿಜೆಪಿ ನಾಯಕರ ಮಧ್ಯೆ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಕ್ಕೆ ಗುರಿಯಾಗಿದ್ದು, ಕಾಂಗ್ರೆಸ್ ಮುಖಂಡರು ನ್ಯಾಯಾಲಯದ ಮೆಟ್ಟಿಲೇರುವ ಮಾತುಗಳು ಕೇಳಿ ಬರ್ತಿವೆ. ರಾಜಕೀಯ ನಾಯಕರ ಮುಸುಕಿನ ಗುದ್ದಾಟ‌ ಯಾವ ಹಂತಕ್ಕೆ ತಲುಪುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

ವರದಿ: ಮಲ್ಲಪ್ಪ. ಎಂ.ಶ್ರೀರಾಮ್. ಪವರ್ ಟಿವಿ. ಚಿಕ್ಕಬಳ್ಳಾಪುರ

RELATED ARTICLES

Related Articles

TRENDING ARTICLES